ಅಜ್ಜಿಬೆಟ್ಟು: ರೈಲ್ವೆ ಮೇಲ್ಸೇತುವೆ ನಿರ್ಮಿಸುವಂತೆ ಒತ್ತಾಯಿಸಿ ಪ್ರಧಾನಿಗೆ ಪತ್ರ
ಬಂಟ್ವಾಳ, ಜು. 18: ಬಿ.ಮೂಡ ಗ್ರಾಮದ ಅಜ್ಜಿಬೆಟ್ಟು ಎಂಬಲ್ಲಿ ರೈಲ್ವೆ ಮೇಲ್ಸೇತುವೆ ನಿರ್ಮಿಸುವಂತೆ ಒತ್ತಾಯಿಸಿ, ಈ ಬಗ್ಗೆ ಇಲಾಖೆಗೆ ಸೂಚನೆ ನೀಡುವಂತೆ ಆಗ್ರಹಿಸಿ ಬಿ.ಸಿ.ರೋಡ್‌ನಿಂದ ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆಯಲಾಗಿದೆ.
ಪ್ರಧಾನಿ ಕಚೇರಿಯಿಂದ ಸ್ಥಳೀಯ ಆಡಳಿತ ವ್ಯವಸ್ಥೆಯಾದ ಪುರಸಭೆಗೆ ವಾಪಸು ಪತ್ರ ಬರೆಯಲಾಗಿದ್ದು, ಈ ಸಮಸ್ಯೆ ಯ ಬಗ್ಗೆ ಸೂಕ್ತವಾದ ರೀತಿಯಲ್ಲಿ ತನಿಖೆ ನಡೆಸಿ ಉತ್ತರಿಸುವಂತೆ ಆದೇಶಿಸಿದ್ದು, ಸುಮಾರು ಇಪತ್ತು ವರ್ಷಗಳಿಂದ ಹೋರಾಟ ಮಾಡುತ್ತಿದ್ದ ಈ ಭಾಗದ ಜನರಿಗೆ ಪ್ರಧಾನಿ ಪತ್ರದಿಂದ ಕೊಂಚ ಸಮಾಧಾನ ಸಿಕ್ಕಿದೆ.
ಬಂಟ್ವಾಳ ತಾಲೂಕಿನ ಪುರಸಭಾ ವ್ಯಾಪ್ತಿಯ ಬಿ.ಮೂಡ ಗ್ರಾಮದ ಅಜ್ಜಿಬೆಟ್ಟು ಎಂಬಲ್ಲಿ ಮೈಸೂರು ರೈಲು ವಿಭಾಗದ 165/600-700 ರಲ್ಲಿ ಮೇಲ್ಸೇತುವೆ ನಿರ್ಮಿಸುವಂತೆ ಒತ್ತಾಯಿಸಿ ದೈಪಲ, ಕಾಮಾಜೆ, ರಾಜೀವಪಲ್ಕೆ, ಪೊಟ್ಟುಕೋಡಿ, ಬಿ.ಮೂಡ ಗ್ರಾಮ, ಕಲಾಯಿ ಮತ್ತು ಅಮ್ಟಾಡಿ ಗ್ರಾಮದ ಗ್ರಾಮಸ್ಥರು ಸೇರಿ ಮನವಿ ಮಾಡಿದ್ದಾರೆ.
ಪ್ರಾರಂಭದಲ್ಲಿ ಅಂದಿನ ರೈಲ್ವೇ ಮಂತ್ರಿಯಾಗಿದ್ದ ಜಾಫರ್ ಶರೀಫ್ ಅವರಿಗೆ ಪತ್ರವನ್ನು ನೀಡಿ, ಒತ್ತಾಯಿಸಿದ್ದರು. ಆ ಬಳಿಕ 1998 ರಿಂದ ಹೋರಾಟ ಸಮಿತಿಯ ಮೂಲಕ ಸಂಸದರಾದ ಧನಂಜಯ ಕುಮಾರ್, ಡಿ.ವಿ.ಸದಾನಂದ ಗೌಡ ಮತ್ತು ನಳಿನ್ ಕುಮಾರ್ ಕಟೀಲು ಅವರಿಗೆ ಮನವಿ ನೀಡುತ್ತಾ ಬಂದಿದ್ದಾರೆ. ಈ ಬಗ್ಗೆ ಇಲಾಖೆ ಮತ್ತು ಜನಪ್ರತಿನಿಧಿಗಳ ಬಳಿ ಸುತ್ತಾಡಿ ಸುಸ್ತಾದ ಸ್ಥಳೀಯರು, ಕೊನೆಗೆ ಪ್ರಧಾನಿ ಪ್ರತ್ರ ಬರೆದಿದ್ದಾರೆ.
ಎರಡು ಗ್ರಾಮಕ್ಕೆ ಸೇತುವೆ ಸಂಪರ್ಕ:
ಮೈಸೂರು ರೈಲು ವಿಭಾಗದ ಬಂಟ್ವಾಳ ದಿಂದ ಮಂಗಳೂರು ಕಡೆಗೆ ಸಂಪರ್ಕ ಮಾಡುವ ಪುರಸಭಾ ವ್ಯಾಪ್ತಿಯ ಬಿ.ಮೂಡ ಗ್ರಾಮದ ಅಜ್ಜಿ ಬೆಟ್ಟು ಎಂಬಲ್ಲಿ ಸಾವಿರಾರು ಮನೆಗಳಿವೆ. ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರ, ಸರಕಾರಿ ಪದವಿ ಕಾಲೇಜು, ಮೂರು ಪ್ರೌಢ ಶಾಲೆ, ಎರಡು ಪ್ರಾಥಮಿಕ ಶಾಲೆ, ಶಿಶುಮಂದಿರ, ಅಂಗನವಾಡಿ, ಅಂಗ್ಲಮಾಧ್ಯಮ ಶಾಲೆ, ಚರ್ಚ್, ಮಸೀದಿ, ದೇವಸ್ಥಾನ, ಶ್ರೀರಾಮ ಭಜನಾಮಂದಿರ, ಅಂಚೆ ಕಚೇರಿ, ಪ್ರಾಥಮಿಕ ಆರೋಗ್ಯ ಕೇಂದ್ರ ಕ್ಕೆ ನಾಗರಿಕರು, ವಿದ್ಯಾರ್ಥಿಗಳು ನಿತ್ಯ ಸಂಚಾರ ಮಾಡಬೇಕಾದರೆ ಈ ರೈಲು ಹಳಿಯನ್ನು ದಾಟಿಯೇ ಹೋಗಬೇಕಾಗಿದೆ. ಜೊತೆಗೆ ಅಮ್ಟಾಡಿ ಮತ್ತು ಅಜ್ಜಿಬೆಟ್ಟು ಈ ಎರಡು ಗ್ರಾಮಕ್ಕೆ ಈ ಸೇತುವೆ ಸಂಪರ್ಕವನ್ನು ಕಲ್ಪಿಸುತ್ತದೆ.