24ರಿಂದ ಇಂಡಿಪೆಂಡೆನ್ಸ್ ಕಪ್ ಫುಟ್ಬಾಲ್

Update: 2018-07-19 11:59 GMT

ಮಂಗಳೂರು, ಜು.19: ದಕ್ಷಿಣ ಕನ್ನಡ ಜಿಲ್ಲಾ ಫುಟ್ಬಾಲ್ ಅಸೋಶಿಯೇಶನ್ ವತಿಯಿಂದ 22ನೇ ವರ್ಷದ ಇಂಡಿಪೆಂಡೆನ್ಸ್ ಕಪ್ ಫುಟ್ಬಾಲ್ ಪಂದ್ಯಾವಳಿ ಜು.24 ಆ.15ರವರೆಗೆ ನಗರದ ನೆಹರು ಮೈದಾನದಲ್ಲಿ ನಡೆಯಲಿದೆ ಎಂದು ದ.ಕ.ಜಿಲ್ಲಾ ಫುಟ್ಬಾಲ್ ಸಂಸ್ಥೆ ಅಧ್ಯಕ್ಷ ಡಿ.ಎಂ.ಅಸ್ಲಂ ಹೇಳಿದರು.

ಅವರು ಗುರುವಾರ ನಗರದ ಪ್ರೆಸ್‌ಕ್ಲಬ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕ್ರೀಡಾಕೂಟವನ್ನು ಮೇಯರ್ ಭಾಸ್ಕರ್ ಕೆ. ಉದ್ಘಾಟಿಸಲಿದ್ದಾರೆ. ಶಾಲಾ ವಿಭಾಗ, ಪ್ರೌಢ ಶಾಲಾ ವಿಭಾಗ, ಪಿಯು ಕಾಲೇಜು ವಿಭಾಗ ಹಾಗೂ ಕಾಲೇಜು ವಿಭಾಗ ಸೇರಿದಂತೆ ಒಟ್ಟು ಏಳು ವಿಭಾಗದಲ್ಲಿ ಪಂದ್ಯಾಟ ನಡೆಯಲಿದೆ.

ಈಗಾಗಲೇ ಫುಟ್ಬಾಲ್ ವಿಶ್ವಕಪ್ ಮುಕ್ತಾಯಗೊಂಡಿದ್ದು ವಿದ್ಯಾರ್ಥಿಗಳಲ್ಲಿ ಫುಟ್ಬಾಲ್ ಆಟದ ಬಗ್ಗೆ ಹೆಚ್ಚಿನ ಉತ್ಸಾಹ ಇದೆ. ಭಟ್ಕಳ, ಮಡಿಕೇರಿ, ಉಡುಪಿ ಸೇರಿದಂತೆ ನಾನಾ ಕಡೆಗಳಿಂದ ತಂಡಗಳು ಬರುತ್ತವೆ ಕಳೆದ ಬಾರಿ 202 ತಂಡಗಳು ಕ್ರೀಡಾಕೂಟದಲ್ಲಿ ಭಾಗವಹಿಸಿದ್ದವು ಈ ಬಾರಿಯು ಹೆಚ್ಚಿನ ತಂಡಗಳು ಭಾಗವಹಿಸುವ ನಿರೀಕ್ಷೆಯಿದೆ ಎಂದರು. ಹಿರಿಯ ಪ್ರಾಥಮಿಕ ಶಾಲಾ ವಿಭಾಗ ಹಾಗೂ ಪ್ರೌಢಶಾಲಾ ವಿಭಾಗದ ನೋಂದಣಿಗೆ ಜು.21 ಹಾಗೂ ಕಾಲೇಜು ವಿಭಾಗದ ನೋಂದವಣಿಗೆ ಜು.25 ಕಡೆಯ ದಿನಾಂಕವಾಗಿದೆ ಎಂದರು.

ವಿಜೇತರಿಗೆ ನಗದು ಬಹುಮಾನ ಹಾಗೂ ಟ್ರೋಫಿ ನೀಡಿ ಗೌರವಿಸಲಾಗುವುದು ಅಲ್ಲದೇ ಉತ್ತಮ ಆಟಗಾರ, ಆಟಗಾರ್ತಿ ಸೇರಿದಂತೆ ಇನ್ನಿತರ ವೈಯುಕ್ತಿಕ ವಿಶೇಷ ಬಹುಮಾನಗಳನ್ನು ನೀಡಲಾಗುವುದು ಎಂದು ಅವರು ತಿಳಿಸಿದರು.

ಈ ಸಂದರ್ಭ ದ.ಕ.ಜಿಲ್ಲಾ ಸಂಸ್ಥೆಯ ಕಾರ್ಯದರ್ಶಿ ಮಹಮ್ಮದ್ ಹುಸೇನ್ ಬೋಳಾರ, ಕೋಶಾಧಿಕಾರಿ ಅನಿಲ್ ಪಿ.ವಿ. ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News