ಪಂಪ್‌ವೆಲ್-ತೊಕ್ಕೊಟ್ಟು ರಾ.ಹೆ.ಕಾಮಗಾರಿ ವಿಳಂಬ : ಸಂಸದ ನಳಿನ್‌ಕುಮಾರ್ ಕಟೀಲ್ ರಾಜೀನಾಮೆಗೆ ಆಗ್ರಹ
ಮಂಗಳೂರು, ಜು.19: ಪಂಪ್‌ವೆಲ್ ತೊಕ್ಕೊಟ್ಟು ರಾಷ್ಟ್ರೀಯ ಹೆದ್ದಾರಿ ಮೇಲ್ಸೆತುವೆ ಕಾಮಗಾರಿ ನಿಧಾನಗತಿಯಲ್ಲಿ ನಡೆಯುತ್ತಿದೆ. ಇದಕ್ಕೆ ಸಂಸದ ನಳಿನ್‌ಕುಮಾರ್ ಕಟೀಲ್ ನೇರಹೊಣೆಯಾಗಿದ್ದು, ಕೂಡಲೇ ರಾಜೀನಾಮೆ ನೀಡಬೇಕು ಎಂದು ಜಿಲ್ಲಾ ಯುವ ಜನತಾದಳ ಆಗ್ರಹಿಸಿದೆ.
ಪಂಪ್‌ವೆಲ್-ತೊಕ್ಕೊಟ್ಟು ರಾ.ಹೆ. ಕಾಮಗಾರಿ ವಿಳಂಬ ಧೋರಣೆ ವಿರೋಧಿಸಿ ನಗರದ ಪಂಪ್‌ವೆಲ್ ವೃತ್ತದಲ್ಲಿ ಜಿಲ್ಲಾ ಯುವ ಜನತಾದಳ ನೇತೃತ್ವದಲ್ಲಿ ಗುರುವಾರ ಬೃಹತ್ ಪ್ರತಿಭಟನೆಯನ್ನು ನಡೆಸಲಾಯಿತು.
ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಜಿಲ್ಲಾ ಯುವ ಜನತಾದಳದ ಅಕ್ಷಿತ್ ಸುವರ್ಣ, ಜಿಲ್ಲೆಯ ಸಂಸದರು ಯಾವುದೇ ಅಭಿವೃದ್ಧಿ ಕೆಲಸವನ್ನು ಮಾಡದೆ ಕೇವಲ ಸುಳ್ಳು ಆಶ್ವಾಸನೆ ಮುಖಾಂತರ ಜನರಿಗೆ ಕಣ್ಣಿಗೆ ಮೋಸ ಮಾಡುತ್ತಿದ್ದಾರೆ. ಈ ನಿಟ್ಟಿನಲ್ಲಿ ರಾಷ್ಟ್ರೀಯ ಹೆದ್ದಾರಿ 7-8 ವರ್ಷಗಳಿಂದ ಕಾಮಗಾರಿ ನಡೆಯುತ್ತಿದ್ದು ಇಲ್ಲಿಯವರೆಗೂ ಪೂರ್ಣಗೊಳ್ಳದೇ ಅನೇಕ ಸಾವು ನೋವಿಗೆ ಕಾರಣವಾಗಿದೆ. ಸಂಸದರನ್ನು ಈ ಬಾರಿ ತಿರಸ್ಕರಿಸಬೇಕು ಎಂದು ಮನವಿ ಮಾಡಿದರು.
ಪಂಪ್‌ವೆಲ್-ತೊಕ್ಕೊಟ್ಟು ರಾ.ಹೆ. ಕಾಮಗಾರಿ ವಿಳಂಬಕ್ಕೆ ಸಂಸದ ನಳಿನ್‌ಕುಮಾರ್ ಕಟೀಲ್ ಕಾರಣವಾಗಿದ್ದು, ಈಗ ಕಾಮಗಾರಿಯ ವಿಳಂಬವನ್ನು ಅಧಿಕಾರಿಗಳು ಹಾಗೂ ನವಯುಗ ಕಂಪೆನಿ ವಿರುದ್ಧ ಆರೋಪ ಹೊರಿಸುತ್ತಿದ್ದಾರೆ ಎಂದು ಪ್ರತಿಭಟನಾನಿರತರು ದೂರಿದರು.
ಈ ಸಂದರ್ಭದಲ್ಲಿ ಯುವ ಜನತಾದಳದ ಕಾರ್ಯಕರ್ತರು ಕೇಂದ್ರ ಸರಕಾರ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮತ್ತು ಜಿಲ್ಲಾ ಸಂಸದರ ವಿರುದ್ಧ ಘೋಷಣೆಗಳನ್ನು ಕೂಗಿದರು.
ಪ್ರತಿಭಟನೆಯಲ್ಲಿ ದ.ಕ. ಜೆಡಿಎಸ್ ಅಧ್ಯಕ್ಷ ಮುಹಮ್ಮದ್ ಕುಂಞಿ ವಿಟ್ಲ, ರಾಜ್ಯ ಸಂಘಟನಾ ಕಾರ್ಯದರ್ಶಿ ಫೈಝಲ್ ರಹ್ಮಾನ್, ಜಿಲ್ಲಾ ಯುವ ಪ್ರಧಾನ ಕಾರ್ಯದರ್ಶಿ ಮದುಸೂದನ್ ಗೌಡ, ಯುವ ಜನತಾ ದಳ ಪ್ರಧಾನ ಕಾರ್ಯದರ್ಶಿ ಶ್ರೀನಾಥ್ ರೈ, ಜಿಲ್ಲಾ ಜನತಾದಳ ಕಾರ್ಯದರ್ಶಿ ರಾಮ್ ಗಣೇಶ್, ರಾಜ್ಯ ನಾಯಕರಾದ ಗೋಪಾಲಕೃಷ್ಣ ಅತ್ತಾವರ, ಜಿಲ್ಲಾ ನಾಯಕಿ ಸುಮತಿ ಹೆಗ್ಡೆ, ರಮೇಶ್ ಎಸ್., ಸುಶೀಲ್ ನೋರೋನ. ಶ್ರೀನಾಥ್ ರೈ, ರತ್ನಾಕರ್ ಸುವರ್ಣ, ಲತೀಫ್, ಮಂಗಳೂರು ದಕ್ಷಿಣ ಯುವ ಅಧ್ಯಕ್ಷ ಮಹಮ್ಮದ್ ರಝಾಕ್, ಉತ್ತರ ಅಧ್ಯಕ್ಷ ರತೀಶ್ ಕರ್ಕೇರ, ಜಿಲ್ಲಾ ಯುವ ನಾಯಕರಾದ ಲಿಖಿತ್ ರಾಜ್, ಮಹಮ್ಮದ್ ಆಸೀಫ್, ಹಿತೇಶ್ ರೈ, ಭರತ್ ಹೆಗ್ಡೆ, ಕಿಶೋರ್ ಶೆಟ್ಟಿ, ಶರೀಫ್ ಪುತ್ತೂರು, ಸತ್ಯನಾರಾಯಣ, ಕಲೀಲ್, ಕಲದಂರ್, ಮುಸಾಫರ್, ಅನೀಶ್, ಕೌಶಿಕ್, ಸುರತ್ಕಲ್ ಬ್ಲಾಕ್ ಅಧ್ಯಕ್ಷ ಅಬ್ದುಲ್ ಅಝೀಝ್ ಮತ್ತಿತರರು ಪಾಲ್ಗೊಂಡಿದ್ದರು.