×
Ad

ಇಂಗ್ಲೆಂಡ್‍ನಲ್ಲಿ ನಡೆದ ಅಂತಾರಾಷ್ಟ್ರೀಯ ಚೆಸ್ ಪಂದ್ಯಾಟ: ಬಂಟ್ವಾಳದ ಯಶಸ್ವಿಗೆ ಕಂಚಿನ ಪದಕ

Update: 2018-07-19 18:38 IST

ಬಂಟ್ವಾಳ, ಜು.19: ಇಂಗ್ಲೆಂಡ್‍ನ ಮ್ಯಾಂಚೆಸ್ಟರ್ ನಲ್ಲಿ ಶ್ರವಣಶಕ್ತಿಯ ಕೊರತೆ ಇರುವವರಿಗಾಗಿ ನಡೆದ ಅಂತಾರಾಷ್ಟ್ರೀಯ ಚೆಸ್ ಪಂದ್ಯಾಟದ ಮಹಿಳಾ ವಿಭಾಗದಲ್ಲಿ ಭಾಗವಹಿಸಿದ ಪುತ್ತೂರು ಜೀನಿಯಸ್ ಚೆಸ್ ಅಕಾಡೆಮಿ ವಿದ್ಯಾರ್ಥಿನಿ, ಬಂಟ್ವಾಳ ಕಡೇಶಿವಾಲಯ ಪ್ರೌಢಶಾಲೆಯ 10ನೆ ತರಗತಿಯಲ್ಲಿ ಕಲಿಯುತ್ತಿರುವ ಯಶಸ್ವಿ ಕಂಚಿನ ಪದಕಗಳಿಸಿದ್ದಾಳೆ.

ಜುಲೈ 6ರಿಂದ 16ರವರೆಗೆ ಶ್ರವಣಶಕ್ತಿಯ ಕೊರತೆ ಇರುವ ಮಹಿಳೆಯರಿಗಾಗಿ ಇರುವ ಅಂತಾರಾಷ್ಟ್ರೀಯ ಮಟ್ಟದ ಚೆಸ್ ಸ್ಪರ್ಧೆಯಲ್ಲಿ ಈಕೆ ಭಾಗವಹಿಸಿದ್ದಳು.
ಬುದ್ಧಿವಂತರ ಆಟವೆಂದೇ ಹೆಸರಾಗಿರುವ ಚದುರಂಗದಾಟ (ಚೆಸ್)ದಲ್ಲಿ ಫಿಡೆಯ 1300ನೆ ರೇಟಿಂಗ್ ಗಳಿಸಿರುವ ಯಶಸ್ವಿ, ಬಂಟ್ವಾಳ ಎಸ್‍ವಿಎಸ್ ಕಾಲೇಜಿನ ಪ್ರಾಣಿಶಾಸ್ತ್ರ ವಿಭಾಗದ ಲ್ಯಾಬ್ ಅಸಿಸ್ಟೆಂಟ್ ತಿಮ್ಮಪ್ಪ ಮೂಲ್ಯ ಮತ್ತು ಬಂಟ್ವಾಳ ತಾಲೂಕಿನ ಸರಕಾರಿ ಶಾಲಾ ಶಿಕ್ಷಕಿ ಯಶೋಧಾ ದಂಪತಿಯ ಇಬ್ಬರು ಹೆಣ್ಣುಮಕ್ಕಳಲ್ಲಿ ಎರಡನೆಯವಳು.

ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ಚೆಸ್ ಪಂದ್ಯಾಕೂಟಕ್ಕೆ ತೆರಳುವ ಮುನ್ನ ಆಕೆಯನ್ನು ಗೌರವಿಸಿದ್ದರು. ಯಶಸ್ವಿ ಕಲಿಯುತ್ತಿರುವ ಕಡೇಶಿವಾಲಯ ಸರಕಾರಿ ಹೈಸ್ಕೂಲಿನಲ್ಲಿ ಆಕೆಯನ್ನು ಗುರುವಾರ ಮೆರವಣಿಗೆ ಮೂಲಕ ಸ್ವಾಗತಿಸಲಾಯಿತು.

ಅಂತಾರಾಷ್ಟ್ರೀಯ ಮಟ್ಟದ ಪ್ರಶಸ್ತಿ ಗಳಿಸಿರುವ ಗ್ರಾಮೀಣ ಪ್ರತಿಭೆಯನ್ನು ಶಾಲಾ ಶಿಕ್ಷಕ ವೃಂದ, ವಿದ್ಯಾರ್ಥಿಗಳು ಮೆರವಣಿಗೆ ಮೂಲಕ ಸ್ವಾಗತಿಸಿದರು. ಯಶಸ್ವಿ ಸಾಧನೆಗೆ ಶಾಸಕ ರಾಜೇಶ್ ನಾಯ್ಕ್ ಅವರೂ ಅಭಿನಂದಿಸಿದ್ದಾರೆ.

ಮಗಳ ಸಾಧನೆಯ ಬಗ್ಗೆ ನಮಗೆ ಹೆಮ್ಮೆ ಹಾಗೂ ಖುಷಿ ತಂದಿದೆ. ಅವಳನ್ನು ಎಲ್ಲರ ಜೊತೆ ಎಲ್ಲರಂತೆ ಬೆಳೆಸಿದ ಖುಷಿಯಿದ್ದು, ಮುಂದೆ ಮತ್ತಷ್ಟು ಸಾಧನೆ ಮಾಡಬೇಕೆಂಬುದು ನಮ್ಮ ಹಾರೈಕೆ.
-ತಿಮ್ಮಪ್ಪ ಮೂಲ್ಯ-ಯಶೋಧ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News