ವ್ಯಕ್ತಿತ್ವ ವಿಕಸನ ಕಾರ್ಯಗಾರ ಹಾಗು ಮಾರ್ಗದರ್ಶನ ಕಾರ್ಯಕ್ರಮ
ಮೂಡುಬಿದಿರೆ, ಜು.19: “ಮನುಷ್ಯ ತನ್ನ ಭೌತಿಕ ಬೆಳವಣಿಗೆಯೊಂದಿಗೆ, ಮಾನಸಿಕ ಬೆಳವಣಿಗೆಯನ್ನು ಕಾಪಾಡಿಗೊಂಡಾಗ ಮಾತ್ರ, ಸಮಾಜದಲ್ಲಿ ನೆಮ್ಮದಿ ನಿರ್ಮಿಸಿ, ಆಹ್ಲಾದಕರವಾದ ಜೀವನ ನಡೆಸಲು ಸಾಧ್ಯ" ಎಂದು ಆಳ್ವಾಸ್ ಪದವಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಕುರಿಯನ್ ಹೇಳಿದರು.
ಆಳ್ವಾಸ್ ಪದವಿ ಕಾಲೇಜಿನ ವಿದ್ಯಾಗಿರಿಯ ಕುವೆಂಪು ಹಾಲ್ ನಲ್ಲಿ ಮಾನವೀಯ ವಿಭಾಗದಿಂದ ನಡೆದ ವ್ಯಕ್ತಿತ್ವ ವಿಕಸನ ಕಾರ್ಯಗಾರ ಹಾಗೂ ಮಾರ್ಗದರ್ಶನ ಕಾರ್ಯಕ್ರಮದಲ್ಲಿ ಮಾತನಾಡಿದರು.
ನಮ್ಮ ಸುತ್ತಮುತ್ತ ನಡೆಯುವ ಯಾವುದೇ ಕ್ರೀಯೆಗೆ ಧನಾತ್ಮಕವಾಗಿ ಪ್ರತಿಕ್ರಿಯಿಸಬೇಕೇ ಹೊರತು, ಗೊಂದಲವನ್ನು ನಿರ್ಮಿಸುವ, ಸಂದರ್ಭವನ್ನು ಇನ್ನಷ್ಟು ಬಿಗಡಾಯಿಸುವ ಕೆಲಸದಲ್ಲಿ ತೊಡಗಬಾರದು. ಆದರೆ ಇಂದಿನ ಯುವಜನತೆ ಸಮಸ್ಯೆಯನ್ನು ಉಲ್ಬಣಿಸುವಂತ ಕ್ರಿಯೆಯಲ್ಲಿ ತೊಡಗಿರುವುದು ದುಃಖಕರ ಎಂದರು. ವಿದ್ಯಾರ್ಥಿಗಳು ಸದಾ ಧನಾತ್ಮಕ ಚಿಂತನೆಯೊಂದಿಗೆ ಕಾರ್ಯಚರಿಸುತ್ತಾ, ತಮ್ಮ ಜೀವನವನ್ನು ಉನ್ನತ ಹಂತಕ್ಕೆ ಒಯ್ಯಬೇಕು ಎಂದರು. ತಾಳ್ಮೆ, ಸಂಯಮ, ಶಿಸ್ತು, ಸಮಯಪಾಲನೆ ನಮ್ಮ ದಿನನಿತ್ಯದ ಕಾಯಕವಾಗಬೇಕು ಎಂದರು.
ಜೆಸಿಐನ ರಾಷ್ಟ್ರೀಯ ತರಬೇತುದಾರ ಹಾಗೂ ಆಳ್ವಾಸ್ ನರ್ಸಿಂಗ್ ಕಾಲೇಜಿನ ಉಪನ್ಯಾಸಕ ದೀರೇಂದ್ರ ಜೈನ್ ಮಾತನಾಡಿ '' ದೊರಕಿದ ಅವಕಾಶಗಳನ್ನು ಸಮರ್ಪಕವಾಗಿ ಬಳಸಿಕೊಂಡಾಗ ಮಾತ್ರ ಸ್ಪರ್ಧಾತ್ಮಕಯುಗದಲ್ಲಿ ನಮ್ಮ ಭದ್ರ ನೆಲೆಯನ್ನು ಕಂಡುಕೊಳ್ಳಬಹುದು ಎಂದರು. ವಿದ್ಯಾರ್ಥಿಗಳು ತಮ್ಮ ಪಾಲಕರ, ಶಿಕ್ಷಕರ ಹಾಗೂ ಸಮಾಜದ ನಿರೀಕ್ಷೆಯನ್ನು ಈಡೇರಿಸುವಲ್ಲಿ ಕಾರ್ಯ ಪ್ರವೃತ್ತರಾಗಬೇಕು. ಇಂದಿನ ನಮ್ಮ ಜೀವನ ಪದ್ದತಿ ನಮ್ಮನ್ನು ಹಲವು ಸಮಸ್ಯೆಗಳಿಗೆ ತಳ್ಳುತ್ತಿದೆ. ಒತ್ತಡದ ಪರಿಸ್ಥಿತಿಯನ್ನು ಸಮರ್ಪಕವಾಗಿ ನಿಭಾಯಿಸಲಾಗದೆ ವಿದ್ಯಾರ್ಥಿಗಳು ಆತ್ಮಹತ್ಯೆಯಂತಹ ಕ್ರೂರ ನಿರ್ಧಾರಕ್ಕೆ ಬಲಿಯಾಗುತ್ತಿದ್ದಾರೆ. ಮನೋಸ್ಥೈರ್ಯದ ವರ್ಧನೆ ನಮ್ಮ ಯುವಜನತೆಯಲ್ಲಿ ಆಗಬೇಕಾದ ಪ್ರಮುಖ ಅಂಶ ಎಂದರು. ನಂತರ ಅನೇಕ ಚಟುವಟಿಕೆಗಳ ಮೂಲಕ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸಕ್ಕೆ ಪ್ರೇರಣೆ ನೀಡಿದರು.
ಪತ್ರಿಕೋದ್ಯಮ ವಿಭಾಗದ ಉಪನ್ಯಾಸಕಿ ಸ್ವಾತಿ ಶೆಟ್ಟಿ ಸ್ವಾಗತಿಸಿ, ಪತ್ರಿಕೋದ್ಯಮ ವಿದ್ಯಾರ್ಥಿನಿ ಸೋನಿಯ ಕಾರ್ಯಕ್ರಮ ನಿರೂಪಿಸಿದರು. ಕಲಾ ವಿಭಾಗದ ಡೀನ್ ಸಂಧ್ಯಾ, ಪದವಿ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥೆ ರೇಶ್ಮಾ ಉದಯ್‍ಕುಮಾರ್, ಸಮಾಜ ಶಾಸ್ರ್ತ ವಿಭಾಗದ ಉಪನ್ಯಾಸಕ ವಸಂತ್ ಉಪಸ್ಥಿತರಿದ್ದರು.