×
Ad

'ವಿವೇಕ ಉದ್ಯೋಗ ಮೇಳ' ಉದ್ಘಾಟನೆ

Update: 2018-07-19 19:39 IST

ಪುತ್ತೂರು,ಜು.19: ಉದ್ಯೋಗಸ್ಥರಾಗಲು ದೂರ ದೂರದ ನಗರಿಗಳಿಗೆ ಹೋಗಬೇಕಿಲ್ಲ. ವಿದೇಶದ ಮುಖವನ್ನು ನೋಡಬೇಕಿಲ್ಲ. ನಮ್ಮ ನಮ್ಮ ಊರುಗಳಲ್ಲೇ ಸ್ವಂತ ನೆಲೆಯಲ್ಲಿ ಉದ್ಯೋಗವನ್ನು ಸೃಷ್ಠಿಸುವ ತನ್ಮೂಲಕ ಒಳ್ಳೆಯ ಬದುಕು ಕಟ್ಟಿಕೊಳ್ಳುವ ಅವಕಾಶ ಈಗಿನ ಯುವ ಸಮುದಾಯಕ್ಕಿದೆ. ಆದರೆ ಪ್ರತಿಯೊಬ್ಬನೂ ತನ್ನೊಳಗಿನ ಶಕ್ತಿಯನ್ನು ಅರಿಯುವುದು ಅತೀ ಅಗತ್ಯ ಎಂದು ಶಾಸಕ ಸಂಜೀವ ಮಠಂದೂರು ಹೇಳಿದರು.

ಅವರು ಪುತ್ತೂರಿನ ವಿವೇಕಾನಂದ ವಿದ್ಯಾವರ್ಧಕ ಸಂಘದ ಆಶ್ರಯದಲ್ಲಿ ವಿವೇಕಾನಂದ ಉದ್ಯೋಗ ಮಾಹಿತಿ ಮತ್ತು ತರಬೇತಿ ಕೇಂದ್ರದ ಸಹಭಾಗಿತ್ವದಲ್ಲಿ ಗುರುವಾರ ವಿವೇಕಾನಂದ ಎಂಜಿನಿಯರಿಂಗ್ ಕಾಲೇಜಿನಲ್ಲಿ ನಡೆದ `ವಿವೇಕ ಉದ್ಯೋಗ ಮೇಳ'ವನ್ನು ಉದ್ಘಾಟಿಸಿ ಮಾತನಾಡಿದರು.

ವ್ಯಕ್ತಿಯೊಳಗೆ ಛಲ ಹಾಗೂ ಉತ್ಕಟ ಬಯಕೆ ಇದ್ದರೆ ಏನನ್ನು ಬೇಕಾದರೂ ಸಾಧಿಸಬಹುದು. ನಾವೇನು ಓದಿದ್ದೇವೆ ಅನ್ನುವುದಕ್ಕಿಂತ ನಮ್ಮೊಳಗಿನ ಕನಸುಗಳೇನು ಅನ್ನುವುದು ಬಹಳ ಮುಖ್ಯ ಎಂದ ಅವರು ಯುವ ಸಮುದಾಯ ಸ್ವ ಉದ್ಯೋಗದ ಕಡೆಗೆ ಮನ ಮಾಡುವಂತೆ ಕರೆ ನೀಡಿದರು.

ಮುಖ್ಯ ಅತಿಥಿಯಾಗಿದ್ದ ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆಗಳ ಸಂಘದ ಅಧ್ಯಕ್ಷ ಬಸವರಾಜ್.ಎಸ್.ಜವಳಿ ಅವರು ಮಾತನಾಡಿ ಒಂದೆಡೆ ಓದಿದವರಿಗೆ ಉದ್ಯೋಗ ದೊರಕುತ್ತಿಲ್ಲ, ಇನ್ನೊಂದೆಡೆ ಉದ್ದಿಮೆದಾರರಿಗೆ ಉದ್ಯೋಗಿಗಳು ಸಿಗುತ್ತಿಲ್ಲ. ಇದನ್ನು ಗಮನಿಸಿದಾಗ ಎಲ್ಲೋ ಸಣ್ಣ ಹೊಂದಾಣಿಕೆಯ ಕೊರತೆ ಕಾಣುತ್ತಿದೆ. ಇದನ್ನು ಸರಿಪಡಿಸಿದಾಗ ವ್ಯವಸ್ಥೆ ಸಸೂತ್ರವಾಗಿ ಮುಂದುವರೆಯುವುದಕ್ಕೆ ಸಾಧ್ಯ ಎಂದರು. 

ನಿಜವಾಗಿ ಉದ್ಯೋಗಿಗಳ ಕೈಹಿಡಿಯುವವರು ಸಣ್ಣ ಕೈಗಾರಿಕೋದ್ಯಮಿಗಳೇ ಹೊರತು ದೊಡ್ಡವರಲ್ಲ. ಉದ್ಯೋಗ ಆರಂಭಿಸುವಾಗ ಹೊಸಬರಿಗೆ ಅವಕಾಶ ಕಲ್ಪಿಸಿಕೊಡುತ್ತಿರುವವರು ಸಣ್ಣ ಉದ್ಯೋಗದಾತರು. ಆದರೆ ಒಮ್ಮೆ ಕೆಲಸ ಕಲಿತ ನಂತರ ಉದ್ಯೋಗಿಗಳು ದೊಡ್ಡ ದೊಡ್ಡ ಕೈಗಾರಿಕೆಗಳೆಡೆಗೆ ಮನ ಮಾಡುವುದು ಸಮಸ್ಯೆಯಾಗಿ ಪರಿಣಮಿಸುತ್ತಿದೆ ಎಂದ ಅವರು ಸ್ವಂತ ಉದ್ದಿಮೆ ಸ್ಥಾಪಿಸಬಯಸುವವರಿಗೆ ಕೈಗಾರಿಕಾ ಸಂಘದಿಂದ ಸಕಲ ನೆರವು ನೀಡಲಾಗುವುದು ಎಂದು ಭರವಸೆ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ.ಪ್ರಭಾಕರ ಭಟ್ ಕಲ್ಲಡ್ಕ  ಅವರು ಮಾತನಾಡಿ ಪ್ರತಿಯೊಬ್ಬನೂ ಸ್ವಾಭಿಮಾನದ ಬದುಕನ್ನು ಕಟ್ಟಿಕೊಳ್ಳಬೇಕು. ಭಾರತದಲ್ಲಿ ನೂತನ ಉದ್ದಿಮೆ ಸ್ಥಾಪಿಸುವುದಕ್ಕೆ ಎಷ್ಟು ಅವಕಾಶವಿದೆಯೋ ಅಷ್ಟೇ ಅವಕಾಶ ಒಬ್ಬ ಉದ್ಯೋಗಿಯಾಗಿ ಬೆಳೆಯುವುದಕ್ಕೂ ಇದೆ. ಆದರೆ ತಾನು ಕೆಲಸ ಮಾಡುತ್ತಿರುವ ಸಂಸ್ಥೆಯಲ್ಲಿ ಇನ್ನಷ್ಟು ಹೊಸತನ ತರುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುವ ಕುರಿತು ಉದ್ಯೋಗಿಗಳು ಯೋಚಿಸಬೇಕು ಎಂದರು. 

ವಿವೇಕಾನಂದ ವಿದ್ಯಾವರ್ಧಕ ಸಂಘ ಹಾಗೂ ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆ ಸಂಘದ ನಡುವಿನ `ಸಹಕಾರ' ಒಡಂಬಡಿಕೆಗೆ ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಡಾ.ಕೆ.ಎಂ.ಕೃಷ್ಣ ಭಟ್ ಮತ್ತು ಸಣ್ಣ ಕೈಗಾರಿಕೆ ಸಂಘದ ಗೌರವ ಪ್ರಧಾನ ಕಾರ್ಯದರ್ಶಿ ರವಿ ಕುಮಾರ್ ಕುಲಕರ್ಣಿ ಅವರು ಸಹಿ ಹಾಕಿದರು.

ವಿವೇಕಾನಂದ ಉದ್ಯೋಗ ಮತ್ತು ಮಾಹಿತಿ ಕೇಂದ್ರದ ಕಾರ್ಯದರ್ಶಿ ರಾಜಗೋಪಾಲ್ ಸ್ವಾಗತಿಸಿದರು. ವಿವೇಕಾನಂದ ವಿದ್ಯಾವರ್ಧಕ ಸಂಘದ ವಿಶೇಷ ಅಧಿಕಾರಿ ವೆಂಕಟೇಶ್ ಪ್ರಸ್ತಾವನೆಗೈದರು. ವಿವೇಕಾನಂದ ಎಂಜಿನಿಯರಿಂಗ್ ಕಾಲೇಜಿನ ಅಧ್ಯಕ್ಷ ಸತೀಶ್ ರಾವ್ ವಂದಿಸಿದರು. ವಿವೇಕಾನಂದ ಪದವಿ ಕಾಲೇಜಿನ ಕನ್ನಡ ಪ್ರಾಧ್ಯಾಪಕ ಡಾ.ರೋಹಿಣಾಕ್ಷ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News