ಪಟ್ಟದ ದೇವರಿಗಾಗಿ ಶಿರೂರು ಸ್ವಾಮೀಜಿ ಬಿಕ್ಕಿಬಿಕ್ಕಿ ಅಳುತ್ತಿದ್ದರು, ಕನವರಿಸುತ್ತಿದ್ದರು : ಕೇಮಾರು ಸ್ವಾಮೀಜಿ
ಉಡುಪಿ, ಜು.19: ಶಿರೂರು ಸ್ವಾಮೀಜಿ ಮಡಿವಂತಿಕೆಯನ್ನು ಬಿಟ್ಟು ಹೊರಗೆ ಬಂದಿದ್ದರು. ಬಡವರ್ಗದ ಜನರನ್ನು ಜಾತಿ ನೋಡದೆ ಪ್ರೀತಿಸುತ್ತಿದ್ದರು. ಅದರಿಂದಲೇ ಅವರಿಗೆ ಈ ರೀತಿಯ ತೊಂದರೆ ಎದುರಾಯಿತೇ ಎಂಬ ಸಂಶಯ ನನಗೆ ಬರುತ್ತದೆ. ಆದುದರಿಂದ ತಕ್ಷಣವೇ ಸರಕಾರ ಹಾಗೂ ಜಿಲ್ಲಾಡಳಿತ ಮಧ್ಯ ಪ್ರವೇಶಿಸಿ ಸ್ವಾಮೀಜಿಯ ಸಾವಿನ ಕುರಿತು ಉನ್ನತ ಮಟ್ಟದ ಸಮಗ್ರ ತನಿಖೆ ನಡೆಸಬೇಕು ಎಂದು ಕೇಮಾರು ಸಾಂದಿಪನಿ ಮಠದ ಶ್ರೀಈಶ ವಿಠಲ ಸ್ವಾಮೀಜಿ ಒತ್ತಾಯಿಸಿದ್ದಾರೆ.
ಮಣಿಪಾಲದ ಶವಗಾರದ ಎದುರು ಗುರುವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸ್ವಾಮೀಜಿ ಆತ್ಮತ್ಯೆ ಮಾಡಿಕೊಳ್ಳುವಷ್ಟು ಮಾನಸಿಕವಾಗಿ ಕುಗ್ಗಿಲ್ಲ. ಮಾಧ್ಯಮದಲ್ಲಿ ಪ್ರಸಾರವಾದ ಸಿಡಿ ಪ್ರಕರಣದ ಬಗ್ಗೆ ಅವರಿಗೆ ಯಾವುದೇ ಆತಂಕ ಇರಲಿಲ್ಲ. ಅದನ್ನು ಅವರು ಗಂಭೀರವಾಗಿ ಪರಿಗಣಿಸಿರ ಲಿಲ್ಲ. ಸಾಮಾನ್ಯವಾಗಿ ಅವರು ಹಣ್ಣಿನ ರಸವನ್ನು ಸ್ವೀಕರಿಸುತ್ತಿದ್ದರು. ಆಹಾರ ವನ್ನು ಸೇವಿಸುತ್ತಿರಲಿಲ್ಲ. ಆಹಾರದಲ್ಲಿ ವಿಷ ಇದ್ದಿದ್ದರೆ ಯಾರು ತಂದದ್ದು ಹೇಗೆ ಬಂತು ಎಂಬುದರ ಬಗ್ಗೆ ಸಮಗ್ರ ತನಿಖೆ ಆಗಬೇಕು ಎಂದರು.
ಪಟ್ಟದ ದೇವರಿಗಾಗಿ ಅವರು ನನ್ನ ಜೊತೆ ಬಿಕ್ಕಿ ಬಿಕ್ಕಿ ಅಳುತ್ತಿದ್ದರು. ರಾತ್ರಿ ಕನವಕರಿಕೆಯಲ್ಲಿ ನನಗೆ ವಿಠಲ ದೇವರು ಬೇಕು ಎಂದು ಹೇಳುತ್ತಿದ್ದರು. ಆದರೂ ಅವರಿಗೆ ಕಾನೂನು ಹೋರಾಟದ ಮೂಲಕ ಜಯ ದೊರೆಯುವ ವಿಶ್ವಾಸ ಇತ್ತು. ಆ ಬಗ್ಗೆ ವಕೀಲರು ಕೂಡ ಭರವಸೆ ನೀಡಿದ್ದರು ಎಂದು ಅವರು ಹೇಳಿದರು.
ಪಟ್ಟದ ದೇವರನ್ನು ಹಸ್ತಾಂತರಿಸುವ ವಿಚಾರವು ರಾಜಿ ಸಂದಾನದ ಮೂಲಕ ಪರಿಹಾರವಾಗುತ್ತದೆ ಎಂದು ನಾವು ಭಾವಿಸಿದ್ದೆವು. ಇಲ್ಲದಿದ್ದರೆ ನಾವು ಒಂದು ತಿಂಗಳ ಮೊದಲೇ ಕೋರ್ಟ್ ಮೊರೆ ಹೋಗುತ್ತಿದ್ದೆವು. ಈ ವಿಚಾರವಾಗಿ ಐದು ದಿನಗಳ ಹಿಂದೆ ನನ್ನ ಜೊತೆ ಸ್ವಾಮೀಜಿ ಮಾತನಾಡಿದ್ದರು. ಕಾನೂನು ಹೋರಾಟ ಮಾಡುವ ಬಗ್ಗೆ ವಕೀಲ ರವಿಕಿರಣ ಮುರ್ಡೇಶ್ವರ ಜೊತೆ ಮಾತನಾಡಿದ್ದೇವೆ. ಜು.25ರೊಳಗೆ ಕೇಸು ದಾಖಲಿಸುವ ಕುರಿತು ನಿರ್ಧಾರ ಮಾಡಲಾಗಿತ್ತು. ಸ್ವಾಮೀಜಿ ಸಾಯುವ ಸ್ಥಿತಿಯಲ್ಲಿ ಇರಲಿಲ್ಲ ಎಂದು ಅವರು ತಿಳಿಸಿದರು.
ಉತ್ತರಾಧಿಕಾರಿ ನೇಮಕಕ್ಕೆ ಸಿದ್ಧತೆ ನಡೆದಿತ್ತು!
ಶಿರೂರು ಸ್ವಾಮೀಜಿ ತನ್ನ ಉತ್ತರಾಧಿಕಾರಿ ನೇಮಕಕ್ಕೆ ಐದು ವರ್ಷಗಳ ಹಿಂದೆಯೇ ಸಿದ್ಧತೆ ನಡೆಸಿದ್ದು, ಈ ಬಾರಿಯ ಚಾತುರ್ಮಾಸ ಮುಗಿದ ಬಳಿಕ ಶಿಷ್ಯನನ್ನು ನೇಮಕ ಮಾಡುವ ಬಗ್ಗೆ ನಿರ್ಧರಿಸಿದ್ದರು. ಬೆಂಗಳೂರಿನ ಪ್ರಶಾಂತ್ ಎಂಬವರನ್ನು ಶಿರೂರು ಮಠದ ಉತ್ತರಾಧಿಕಾರಿಯನ್ನಾಗಿ ಮಾಡುವ ಕುರಿತು ಶಿರೂರು ಸ್ವಾಮೀಜಿ ಐದು ವರ್ಷಗಳ ಹಿಂದೆಯೇ ಮಾತುಕತೆ ನಡೆಸಿದ್ದರು. ಇದಕ್ಕೆ ಪ್ರಶಾಂತ್ ಅವರ ಮನೆಯವರು ಕೂಡ ಒಪ್ಪಿಗೆ ಸೂಚಿಸಿದ್ದರು ಎಂದು ಕೇಮಾರು ಸ್ವಾಮೀಜಿ ತಿಳಿಸಿದ್ದಾರೆ.
ಸಾಕಷ್ಟು ಶಿಕ್ಷಿತರಾಗಿದ್ದ ಪ್ರಶಾಂತ್, ಆಗಾಗ ಶಿರೂರು ಮಠಕ್ಕೆ ಭೇಟಿ ನೀಡುತ್ತಿದ್ದರು. ಚಾತುರ್ಮಾಸ ಮುಗಿದ ನಂತರ ಪ್ರಶಾಂತ್‌ನನ್ನು ಉತ್ತರಾಧಿಕಾರಿ ಯಾಗಿ ನೇಮಕ ಮಾಡುವ ಬಗ್ಗೆ ಸ್ವಾಮೀಜಿ ಇಚ್ಛೆ ವ್ಯಕ್ತಪಡಿಸಿದ್ದರು. ಈ ವಿಚಾರವನ್ನು ಅವರು ಬೇರೆ ಸ್ವಾಮೀಜಿಗಳ ಜೊತೆ ಹೇಳಿಕೊಂಡಿಲ್ಲ. ಅವರಿಗೆ ಆಪ್ತರಾಗಿರುವ ಕೆಲವರಲ್ಲಿ ಮಾತ್ರ ಹೇಳಿದ್ದರು. ಆದರೆ ಈಗ ಅದು ಮುಗಿದ ಅಧ್ಯಾಯ ಎಂದು ಅವರು ತಿಳಿಸಿದರು.