ಕೊಣಾಜೆ : ಐಫೋನ್ ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದ ಬಸ್ ಕಂಡಕ್ಟರ್

Update: 2018-07-19 16:06 GMT

ಕೊಣಾಜೆ,ಜು.20: ಮಂಗಳೂರು ವಿಶ್ವವಿದ್ಯಾನಿಲಯಲ್ಲಿ ಪದವಿ ವ್ಯಾಸಾಂಗ ಮಾಡುತ್ತಿರುವ ಅಫ್ಘಾನ್ ಮೂಲದ ವಿದೇಶಿ ವಿದ್ಯಾರ್ಥಿಯೋರ್ವ ಬಸ್‍ನಲ್ಲಿ ತೆರಳುತ್ತಿದ್ದಾಗ ಐಫೋನ್ ಮೊಬೈಲ್ ಕಳೆದುಕೊಂಡಿದ್ದು, ಕಳೆದುಕೊಂಡಿದ್ದ ಐಫೋನನ್ನು ಬಸ್‍ನ ಕಂಡೆಕ್ಟರ್ ಒಬ್ಬರು ವಿದ್ಯಾರ್ಥಿಯ ವಿಳಾಸ ಪತ್ತೆ ಹಚ್ಚಿ ಆತನಿಗೆ ಮರಳಿಸಿ ಪ್ರಾಮಾಣಿಕತೆ ಮೆರೆದಿದ್ದಾರೆ. ಈ ಸಂದರ್ಭದಲ್ಲಿ ವಿದೇಶಿ ವಿದ್ಯಾರ್ಥಿ ಭಾರತೀಯ ಪ್ರಾಮಾಣಿಕತೆಗೆ ಮೆಚ್ಚುಗೆ ವ್ಯಕ್ತಪಡಿಸಿ, ಭಾರತೀಯರ ಮೇಲಿನ ವಿಶ್ವಾಸವನ್ನು ಹೆಚ್ಚಿಸಿದೆ ಎಂದಿದ್ದಾನೆ. 

ಮೂಲತ: ಅಪಘಾನಿಸ್ತಾನದ ಮಿರ್ ಖಾಸೇಂ ನಿವಾಸಿ ಸದ್ದಾಂ ಮುಕ್ರೇಷಿ ಎಂಬಾತ ಕೊಣಾಜೆಯ ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಪದವಿ ವ್ಯಾಸಾಂಗ ಮಾಡುತ್ತಿದ್ದಾನೆ.  

ಬುಧವಾರ ಕಾಲೇಜು ಮುಗಿಸಿ ದೇರಳಕಟ್ಟೆಯಲ್ಲಿರುವ ವಿದ್ಯಾರ್ಥಿ ನಿಲಯಕ್ಕೆ ವಾಪಸ್ಸಾಗುವ ವೇಳೆ ಕಿಸೆಯಲ್ಲಿದ್ದ ಐಫೋನ್ ಮೊಬೈಲ್ ಕಳೆದುಹೋಗಿತ್ತು.  ಅದಕ್ಕಾಗಿ ವಸತಿ ನಿಲಯದ ಸಿಸಿಟಿವಿ, ಕಾಲೇಜಿನ ಆಸುಪಾಸು ವಿವಿದೆಡೆ ಹುಡುಕಾಟ ನಡೆಸಿದರೂ ಪತ್ತೆಯಾಗಿರಲಿಲ್ಲ. 

ಮೊಬೈಲ್ ಬಸ್ ನಿರ್ವಾಹಕನಿಗೆ ಸಿಕ್ಕಿತ್ತು:
ಬುಧವಾರದಂದು ಕೊಣಾಜೆಯಿಂದ ಮಂಗಳೂರಿಗೆ ಸಂಚರಿಸುವಾಗ ಬಸ್ ನಿರ್ವಾಹಕ ನಾರಾಯಣರಿಗೆ ಬಸ್ಸಿನಲ್ಲಿ ಐಫೋನ್ ಮೊಬೈಲ್ ದೊರೆತಿತ್ತು. ಮೊಬೈಲಿಗೆ ಕರೆ ಬಂದರೆ ತಿಳಿಸಿ ಅವರಿಗೆ ವಾಪಸ್ಸು ಕೊಡುವ ನಿರ್ಧಾರ ಮಾಡಿದ್ದರು. ಆದರೆ ಗಂಟೆಗಳಾದರೂ ಕರೆ ಬಂದಿರಲಿಲ್ಲ. ಇನ್ನು ಪೊಲೀಸರಿಗೆ ಮೊಬೈಲನ್ನು ಗುರುವಾರ ಬೆಳಿಗ್ಗೆ ನೀಡುವುದಾಗಿ ತಿಳಿದುಕೊಂಡ ನಿರ್ವಾಹಕರಿಗೆ ಮೊಬೈಲಿನ ಕವರಿನ ಒಳಗಡೆ ರಶೀದಿಯೊಂದು ಪತ್ತೆಯಾಗಿತ್ತು. ಅದು ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಚಲನ್ ಕಟ್ಟಿದ ರಶೀದಿಯಾಗಿತ್ತು. ಅದರ ಬೆನ್ನು ಹಿಡಿದ  ನಿರ್ವಾಹಕ ನಾರಾಯಣ ಅವರಿಗೆ ಆತ ಕೊಣಾಜೆ ಮಂಗಳೂರು ವಿ.ವಿ ವಿದ್ಯಾರ್ಥಿಯಾಗಿರುವುದಾಗಿ ತಿಳಿದುಬಂತು. ಖುದ್ದು ತಾವೇ ಕೊಣಾಜೆಯ ಆಡಳಿತ ಸೌಧಕ್ಕೆ ತೆರಳಿ ಅಲ್ಲಿನ ಅಧಿಕಾರಿಗಳಲ್ಲಿ ವಿಚಾರಿಸಿ ಆತನಿಗೆ ಮೊಬೈಲನ್ನು ನೀಡಿದರು.

ಭಾರತೀಯರು ಪ್ರಾಮಾಣಿಕರೆಂದ ಅಫ್ಘಾನ್ ವಿದ್ಯಾರ್ಥಿ:
ಕಳೆದು ಕೊಂಡಿದ್ದ ಐಫೋನ್ ಮತ್ತೆ ಸಿಕ್ಕಿದಾಗ ಬಹಳ ಸಂತಸ ಪಟ್ಟ ಅಫ್ಘಾನ್ ವಿದ್ಯಾರ್ಥಿ, ಭಾರತೀಯರೆಲ್ಲರೂ ಒಳ್ಳೆಯವರು ಪ್ರಾಮಾಣಿಕರೆನ್ನುವ ವಿಶ್ವಾಸವಿದೆ.  ಐಫೋನ್ ಕಳೆದುಕೊಂಡು ಚಿಂತಿತನಾಗಿದ್ದೆ.  ಬಸ್ಸಿನಲ್ಲಿ ಕಳೆದುಕೊಂಡಿರುವ ಐಫೋನ್ ಮೊಬೈಲನ್ನು ಹಿಂತಿರುಗಿಸಿದ ಬಸ್ಸು ನಿರ್ವಾಹಕರ ಪ್ರಾಮಾಣಿಕತನ ನನ್ನನ್ನು ಭಾರತೀಯರ ಮೇಲಿನ ಪ್ರೀತಿಯನ್ನು ಹಾಗೂ ವಿಶ್ವಾಸವನ್ನು ಇನ್ನಷ್ಟು ಹೆಚ್ಚಿಸಿದೆ, ಬಸ್ ನಿರ್ವಾಹಕ ನಾರಾಯಣರಿಗೆ ನಾನು ಕೃತಜ್ಞನಾಗಿದ್ದೇನೆ ಎಂದಿದ್ದಾನೆ. 
- ಮಿರ್ ಖಾಸೇಂ, ವಿದೇಶಿ ವಿದ್ಯಾರ್ಥಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News