ಶ್ರೀಮಠದಲ್ಲಿ ಸಾವಿರಾರು ಮಂದಿಯಿಂದ ಶಿರೂರು ಸ್ವಾಮೀಜಿಯ ಅಂತಿಮ ದರ್ಶನ

Update: 2018-07-19 16:47 GMT

ಉಡುಪಿ, ಜು.19: ಇಂದು ಬೆಳಗ್ಗೆ ಮಣಿಪಾಲದ ಕೆಎಂಸಿ ಆಸ್ಪತ್ರೆಯಲ್ಲಿ ನಿಧನರಾದ ಶಿರೂರು ಮಠದ ಶ್ರೀಲಕ್ಷ್ಮೀವರತೀರ್ಥ ಸ್ವಾಮೀಜಿ ಅವರ ಮೃತದೇಹದ ಮರಣೋತ್ತರ ಪರೀಕ್ಷೆ ನಡೆದ ಬಳಿಕ ಪಾರ್ಥಿವ ಶರೀರವನ್ನು ಸಂಜೆ 4:00 ಗಂಟೆ ಸುಮಾರಿಗೆ ರಥಬೀದಿಯಲ್ಲಿರುವ ಶಿರೂರು ಮಠಕ್ಕೆ ತೆಗೆದುಕೊಂಡು ಬರಲಾಯಿತು. ಶಿರೂರು ಶ್ರೀಗಳ ಪಾರ್ಥಿಕ ಶರೀರವನ್ನು ಶಿರೂರು ಮಠದ ದ್ವಂದ್ವ ಮಠವಾದ ಸೋದೆ ಮಠ ನೀಡಿದ ಬಿದಿರಿನ ಬುಟ್ಟಿಯಲ್ಲಿ ಕುಳ್ಳಿರಿಸಿ ತರಲಾಗಿತ್ತು.

ಮಣಿಪಾಲ ಶವಾಗಾರದಿಂದ ಅಲಂಕೃತ ತೆರೆದ ಜೀಪಿನಲ್ಲಿ ಶ್ರೀಗಳ ಪಾರ್ಥಿವ ಶರೀರವನ್ನು ಮಠಕ್ಕೆ ಕರೆತರುವಾಗ ಮಣಿಪಾಲ-ಉಡುಪಿ ರಸ್ತೆಯ ಇಕ್ಕೆಲಗಳಲ್ಲಿ ನಿಂತ ಜನರು ಅವರ ಅಂತಿಮ ದರ್ಶನ ಪಡೆದರು. ಕಲ್ಸಂಕ, ಬಡಗುಪೇಟೆಯ ಮೂಲಕ ಪಾರ್ಥಿವ ಶರೀರವನ್ನು ಶಿರೂರು ಮಠಕ್ಕೆ ತಂದು ಕೆಲವು ಸಾಂಪ್ರದಾಯಿಕ ವಿಧಿವಿಧಾನಗಳನ್ನು ನೆರವೇರಿಸಲಾಯಿತು. ಮಠದೊಳಗಿನ ಗುಡಿಯ ಮುಂದೆ ಇರಿಸಿ ದೇವರಿಗೆ ಆರತಿ ಬೆಳಗಲಾಯಿತು.

ಬಳಿಕ ಅಲ್ಲಿ ಉಪಸ್ಥಿತರಿದ್ದ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್, ಸಿಇಒ ಶಿವಾನಂದ ಕಾಪಸಿ, ಜಿಪಂ ಅಧ್ಯಕ್ಷ ದಿನಕರಬಾಬು, ತಾಪಂ ಅಧ್ಯಕ್ಷೆ ನಳಿನಿ ಪ್ರದೀಪ್ ರಾವ್ ಅವರು ಅಂತಿಮ ದರ್ಶನ ಪಡೆದರು. ಅನಂತರ ಮಠದಲ್ಲಿ ನೆರೆದಿದ್ದ ನೂರಾರು ಮಂದಿ ಅಭಿಮಾನಿಗಳು, ಭಕ್ತರು ಅವರ ಅಂತಿಮ ದರ್ಶನ ಪಡೆದರು.

ಬಳಿಕ ಪಾರ್ಥಿವ ಶರೀರವನ್ನು ರಥಬೀದಿಯ ಎದುರು ಮಠದ ಜಗಲಿಯಲ್ಲಿ ಸಾರ್ವಜನಿಕರ ದರ್ಶನಕ್ಕೆ ಇರಿಸಲಾಯಿತು. ರಥಬೀದಿಯಲ್ಲಿ ಇಂದು ಅಪರಾಹ್ನದಿಂದಲೇ ಕಾದು ಕುಳಿತಿದ್ದ ಸಾವಿರಾರು ಮಂದಿ ಸರದಿ ಸಾಲಿನಲ್ಲಿ ಬಂದು ಸ್ವಾಮೀಜಿಯ ಅಂತಿಮ ದರ್ಶನ ಪಡೆದರು. ಶಿರೂರು ಮಠ ಹಾಗೂ ರಥಬೀದಿಯಲ್ಲಿ ಪೊಲೀಸರ ಭದ್ರೆಯನ್ನು ವ್ಯವಸ್ಥೆ ಗೊಳಿಸಲಾಗಿತ್ತು.

ಪಲಿಮಾರು ಶ್ರೀಗಳಿಂದ ತುಳಸಿ ಮಾಲಾರ್ಪಣೆ: ಸಾರ್ವಜನಿಕರ ದರ್ಶನದ ಬಳಿಕ ಶಿರೂರುಶ್ರೀಗಳ ಪಾರ್ಥಿವ ಶರೀರವನ್ನು ಅಲ್ಲೇ ಹತ್ತಿರದಲ್ಲಿದ್ದ ಕನಕ ಗೋಪುರಕ್ಕೆ ತಂದು ಕನಕನ ಕಿಂಡಿಯ ಎದಿರು ಇರಿಸಲಾಯಿತು. ಇಲ್ಲಿಗೆ ಆಗಮಿಸಿದ ಪರ್ಯಾಯ ಪಲಿಮಾರು ಮಠದ ಶ್ರೀವಿದ್ಯಾಧೀಶ ತೀರ್ಥ ಶ್ರೀಪಾದರು ಕನಕನ ಕಿಂಡಿಯ ಮೂಲಕ ದೇವರ ದರ್ಶನ ಮಾಡಿಸಿ ಆರತಿಯನ್ನು ಬೆಳಗಿಸಿ ಹರಿಪಾದಗೈದ ಶಿರೂರು ಶ್ರೀಪಾದರ ದೇಹಕ್ಕೆ ತುಳಸಿ ಮಾಲಾರ್ಪಣೆ ಮಾಡಿದರು.

ಇದೇ ಸಂದರ್ಭದಲ್ಲಿ ರಾಜ್ಯ ಪಶುಸಂಗೋಪನೆ ಮತ್ತು ಮೀನುಗಾರಿಕಾ ಸಚಿವ ವೆಂಕಟರಾವ್ ನಾಡಗೌಡ ಹಾಗೂ ಜೆಡಿಎಸ್ ಜಿಲ್ಲಾಧ್ಯಕ್ಷ ಯೋಗೀಶ್ ಶೆಟ್ಟಿ ಕಾಪು ಇವರು ಪಾರ್ಥಿವ ಶರೀರಕ್ಕೆ ಮಾಲಾರ್ಪಣೆ ಮಾಡಿ ಅಂತಿಮ ನಮನ ಸಲ್ಲಿಸಿದರು.

ನಂತರ ರಥಬೀದಿಗೆ ಒಂದು ಸುತ್ತು ಬಂದು ವಿದ್ಯೋದಯ ಶಾಲಾ ಮಾರ್ಗವಾಗಿ ಕಲ್ಸಂಕಕ್ಕೆ ಸಾಗಿ ಅಲ್ಲಿಂದ ಹಿರಿಯಡ್ಕದ ಸಮೀಪ ಇರುವ ಶಿರೂರು ಮೂಲ ಮಠಕ್ಕೆ ತೆರೆದ ಜೀಪಿನಲ್ಲಿ ಪಾರ್ಥಿಕ ಶರೀರವನ್ನು ಅಂತಿಮ ಕ್ರಿಯೆಗಾಗಿ ಕೊಂಡೊಯ್ಯಲಾಯಿತು.

ಶಿರೂರು ಶ್ರೀಗಳು ಉಡುಪಿಯ ಅಷ್ಟಮಠಗಳ ಸ್ವಾಮೀಜಿಗಳಲ್ಲಿ ಒಬ್ಬರಾಗಿದ್ದರೂ, ಅವರ ಅಂತಿಮ ದರ್ಶನಕ್ಕೆ ಪರ್ಯಾಯ ಪಲಿಮಾರು ಶ್ರೀಗಳನ್ನು ಹೊರತು ಪಡಿಸಿ ದ್ವಂದ್ವ ಮಠವಾದ ಸೋದೆ ಮಠದ ಸ್ವಾಮೀಜಿ ಸೇರಿದಂತೆ ಯಾರೊಬ್ಬರು ಬಾರದೇ ತಮ್ಮ ಅಸಮಧಾನವನ್ನು ಹೊರಹಾಕಿದರು. ಪೇಜಾವರ ಮಠಾಧೀಶರಾದ ಶ್ರೀವಿಶ್ವೇಶತೀರ್ಥರು ದೂರದ ಹುಬ್ಬಳ್ಳಿಯಲಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News