ಶಿರೂರು ಶ್ರೀ ಸಂಶಯಾಸ್ಪದ ಸಾವು ಪ್ರಕರಣ: ಮರಣೋತ್ತರ ಪರೀಕ್ಷೆಯ ಬಳಿಕ ಮೃತದೇಹ ಮಠಕ್ಕೆ ತರುವುದಕ್ಕೆ ವಿರೋಧ?
ಉಡುಪಿ, ಜು.19: ಅನುಮಾನಾಸ್ಪದ ಸಾವಿನ ಹಿನ್ನೆಲೆಯಲ್ಲಿ ಮರಣೋತ್ತರ ಪರೀಕ್ಷೆಗೆ ಒಳಪಡಿಸಲಾದ ಶಿರೂರು ಸ್ವಾಮೀಜಿಯ ಪಾರ್ಥಿವ ಶರೀವನ್ನು ಉಡುಪಿ ಶ್ರೀಕೃಷ್ಣ ಮಠಕ್ಕೆ ತರುವುದಕ್ಕೆ ಆರಂಭದಲ್ಲಿ ಇತರ ಮಠಾಧೀಶರು ವಿರೋಧ ವ್ಯಕ್ತಪಡಿಸಿರುವ ಬಗ್ಗೆ ವರದಿಯಾಗಿದೆ.
ಈ ವಿಚಾರ ತಿಳಿದ ಶಿರೂರು ಮಠದ ಪ್ರತಿನಿಧಿಗಳು ಉಡುಪಿ ಶಾಸಕ ರಘುಪತಿ ಭಟ್ ಸಂಪರ್ಕಿಸಿ ಚರ್ಚೆ ನಡೆಸಿದ್ದರು. ಅದರಂತೆ ಶಾಸಕರು ಹಾಗೂ ಮಠದ ಪ್ರತಿನಿಧಿಗಳು ಶಿರೂರು ಮಠದ ದ್ವಂದ್ವ ಮಠವಾಗಿರುವ ಸೋದೆ ಮಠಾಧೀಶ ಶ್ರೀವಿಶ್ವವಲ್ಲಭ ತೀರ್ಥ ಸ್ವಾಮೀಜಿ ಜೊತೆ ಮಾತುಕತೆ ನಡೆಸಿ ಈ ವಿವಾದವನ್ನು ಬಗೆಹರಿಸಿದರೆನ್ನಲಾಗಿದೆ.
‘ಶಿರೂರು ಸ್ವಾಮೀಜಿ ಪಾರ್ಥಿವ ಶರೀರವನ್ನು ಮಠಕ್ಕೆ ತರುವ ಕುರಿತ ಎಲ್ಲ ಸಮಸ್ಯೆಯನ್ನು ಮಾತುಕತೆಯ ಮೂಲಕ ಬಗೆಹರಿಸಲಾಗಿದೆ. ಶಿರೂರು ಸ್ವಾಮೀಜಿ ಪೂರ್ವಾಶ್ರಮದ ಸಹೋದರನೊಂದಿಗೆ ಸೂಚಿಸಿದ ಶಿರೂರು ಮೂಲ ಮಠದ ಸ್ಥಳದಲ್ಲೇ ಅಂತ್ಯಸಂಸ್ಕಾರ ನೆರವೇರಿಸಲಾಗುವುದು. ಇದಕ್ಕೆ ಸೋದೆ ಸ್ವಾಮೀಜಿ ಒಪ್ಪಿದ್ದಾರೆ. ಇದರ ಪೂರ್ತಿ ಜವಾಬ್ದಾರಿಯನ್ನು ಸೋದೆ ಮಠ ಮಾಡಬೇಕಾಗುತ್ತದೆ’ ಎಂದು ಶಾಸಕ ಕೆ.ರಘುಪತಿ ಭಟ್ ತಿಳಿಸಿದರು.