2014ರ ನಂತರ ಪ್ರಧಾನಿ ಮೋದಿಯ ವಿದೇಶ ಪ್ರವಾಸಗಳಿಗೆ 1,484 ಕೋಟಿ ರೂ. ವೆಚ್ಚ

Update: 2018-07-19 17:14 GMT

ಹೊಸದಿಲ್ಲಿ, ಜು.19: 2014ರಿಂದ ಪ್ರಧಾನಿ ಮೋದಿಯವರು 84 ದೇಶಗಳಿಗೆ ವಿದೇಶ ಪ್ರವಾಸಕ್ಕೆ ತೆರಳಿದ ಸಂದರ್ಭ ಬಾಡಿಗೆ ವಿಮಾನಗಳು, ವಿಮಾನಗಳ ನಿರ್ವಹಣೆಗಳಿಗಾಗಿ 1,484 ಕೋಟಿ ರೂ.ಗಳನ್ನು ವ್ಯಯಿಸಲಾಗಿದೆ ಎಂದು ಸರಕಾರ ಮಾಹಿತಿ ನೀಡಿದೆ.

ಪ್ರಧಾನಿ ಮೋದಿಯವರ ವಿದೇಶ ಪ್ರವಾಸದ ವಿವರಗಳನ್ನು ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ವಿಕೆ ಸಿಂಗ್ ಇಂದು ರಾಜ್ಯಸಭೆಯಲ್ಲಿ ಹಂಚಿಕೊಂಡರು.

ಪ್ರಧಾನಿಯವರ ವಿಮಾನದ ನಿರ್ವಹಣೆಗಾಗಿ 1.088.42 ಕೋಟಿ ರೂ. ವ್ಯಯಿಸಲಾಗಿದ್ದರೆ, 2014ರ ಜೂನ್ 15ರಿಂದ 2018ರ ಜೂನ್ 10ರ ಅವಧಿಯಲ್ಲಿ ಬಾಡಿಗೆ ವಿಮಾನಗಳಿಗಾಗಿ 387.26 ಕೋಟಿ ರೂ.ಗಳನ್ನು ಖರ್ಚು ಮಾಡಲಾಗಿದೆ ಎನ್ನುವುದು ಸರಕಾರ ಸಲ್ಲಿಸಿದ ವಿವರದಲ್ಲಿದೆ. ಹಾಟ್ ಲೈನ್ ಗಾಗಿ 9.12 ಕೋಟಿ ರೂ.ಗಳನ್ನು ವ್ಯಯಿಸಲಾಗಿದೆ.

2014ರ ಮೇ ತಿಂಗಳಲ್ಲಿ ಪ್ರಧಾನಿಯಾದ ನಂತರ ಮೋದಿಯವರು 42 ವಿದೇಶ ಪ್ರವಾಸಗಳಲ್ಲಿ 84 ದೇಶಗಳಿಗೆ ಭೇಟಿ ನೀಡಿದ್ದಾರೆ. 2017-18 ಮತ್ತು 2018-19ರ ಅವಧಿಯಲ್ಲಿನ ವಿದೇಶ ಪ್ರವಾಸದ ಸಂದರ್ಭ ಹಾಟ್ ಲೈನ್ ವ್ಯವಸ್ಥೆಗಳ ಖರ್ಚಿನ ಬಗ್ಗೆ ವಿಕೆ ಸಿಂಗ್ ಸಲ್ಲಿಸಿರುವ ವಿವರಗಳಲ್ಲಿ ಮಾಹಿತಿಯಿಲ್ಲ. 2018-19ರ ಅವಧಿಯಲ್ಲಿ ಬಳಸಲಾದ ಬಾಡಿಗೆ ವಿಮಾನಗಳ ಖರ್ಚಿನ ಬಗ್ಗೆಯೂ ಇದರಲ್ಲಿ ಮಾಹಿತಿಯಿಲ್ಲ.

2015-16ರಲ್ಲಿ ಪ್ರಧಾನಿ ಅತೀ ಹೆಚ್ಚು ಅಂದರೆ 24 ದೇಶಗಳಿಗೆ ಭೇಟಿ ನೀಡಿದ್ದಾರೆ. 2017-18ರಲ್ಲಿ 19 ಹಾಗು 2016-17ರಲ್ಲಿ 18 ದೇಶಗಳಿಗೆ ಭೇಟಿ ನೀಡಿದ್ದಾರೆ. 2014-15ರಲ್ಲಿ 13 ದೇಶಗಳಿಗೆ ಭೇಟಿ ನೀಡಿದ್ದಾರೆ. 2018ರಲ್ಲಿ 10 ದೇಶಗಳಿಗೆ ಭೇಟಿ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News