ಸ್ವಾಮೀಜಿ ಸಾವಿನ ಕುರಿತು ಸಮಗ್ರ ತನಿಖೆಯಾಗಲಿ : ಶಿರೂರುಶ್ರೀ ವಕೀಲ ರವಿಕಿರಣ ಮುರ್ಡೇಶ್ವರ ಒತ್ತಾಯ

Update: 2018-07-19 17:45 GMT

ಉಡುಪಿ, ಜು.19: ಶಿರೂರು ಮಠದ ಶ್ರೀಲಕ್ಷ್ಮೀವರ ತೀರ್ಥ ಶ್ರೀಪಾದರದು ಸಹಜ ಸಾವಲ್ಲ. ಅಸಹಜ ಸಾವು ಎಂದು ದೂರು ದಾಖಲಾಗಿರುವುದರಿಂದ ಹಾಗೂ ಅವರಿಗೆ ವಿಷ ಪ್ರಾಶನವಾಗಿದೆ ಎಂದು ಕೆಎಂಸಿಯ ವೈದ್ಯರು ತಿಳಿಸಿರುವುದರಿಂದ ಸ್ವಾಮೀಜಿ ಅವರ ಸಾವಿನ ಕುರಿತು ಸಮಗ್ರ ತನಿಖೆಯಾಗಲೇ ಬೇಕು ಎಂದು ಅವರ ವಕೀಲರಾದ ಕುಂದಾಪುರದ ರವಿಕಿರಣ ಮುರ್ಡೇಶ್ವರ ಒತ್ತಾಯಿಸಿದ್ದಾರೆ.

ಪತ್ರಿಕೆಯೊಂದಿಗೆ ಮಾತನಾಡಿದ ಅವರು, ನಾನು ಸ್ವಾಮೀಜಿಗಳ ವಿರುದ್ಧ ಕೇಸು ದಾಖಲಿಸಿದರೆ, ನನ್ನ ಜೀವಕ್ಕೆ ಖಂಡಿತ ಅಪಾಯವಿರುತ್ತದೆ ಎಂದು ನನ್ನೊಂದಿಗೆ ಮಾತನಾಡುತ್ತಾ ತಿಳಿಸಿದ್ದರು ಎಂದವರು ಹೇಳಿದರು.

ತನ್ನ ಪಟ್ಟದ ದೇವರನ್ನು ವಾಪಾಸು ಪಡೆಯಲು ಶಿರೂರು ಶ್ರೀಗಳು ಪರ್ಯಾಯ ಪಲಿಮಾರುಶ್ರೀಗಳ ವಿರುದ್ಧ ಉಡುಪಿ ನ್ಯಾಯಾಲಯದಲ್ಲಿ ನಿನ್ನೆ ಕೇಸು ದಾಖಲಿಸಲು ತಿಳಿಸಿದ್ದರು. ನಾನು ನಿನ್ನೆ ಮೊಕದ್ದಮೆ ದಾಖಲಿಸಲು ಎಲ್ಲಾ ಸಿದ್ಧತೆ ನಡೆಸಿದ್ದೆ. ಆದರೆ ಅವರು ಅಸೌಖ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದರಿಂದ ಅದನ್ನು ದಾಖಲಿಸಿರಲಿಲ್ಲ ಎಂದವರು ವಿವರಿಸಿದರು.

ಪಲಿಮಾರು ಶ್ರೀಗಳು ಈಗ ಪರ್ಯಾಯ ಪೀಠದಲ್ಲಿರುವುದರಿಂದ, ಮಠದ ಉಸ್ತುವಾರಿ ಅವರಾಗಿರುವುದರಿಂದ ತನ್ನ ಪಟ್ಟದ ದೇವರನ್ನು ಹಿಂದಿರುಗಿಸದೇ ನಂಬಿಕೆದ್ರೋಹ ಮಾಡಿರುವುದರಿಂದ ತಾಂತ್ರಿಕ ಕಾರಣಗಳಿಗಾಗಿ ಅವರ ವಿರುದ್ಧ ಮಾತ್ರ ಕ್ರಿಮಿನಲ್ ಮೊಕದ್ದಮೆ ಹೂಡಲು ನಿರ್ಧರಿಸಲಾಗಿತ್ತು ಎಂದು ಮುರ್ಡೇಶ್ವರ ತಿಳಿಸಿದರು.

ಶ್ರೀಲಕ್ಷ್ಮೀವರ ತೀರ್ಥರು ಕಳೆದ ತಿಂಗಳು 28ಕ್ಕೆ ಕುಂದಾಪುರದ ನನ್ನ ಕಚೇರಿಗೆ ಆಗಮಿಸಿ ಕೇಸಿನ ಕುರಿತಂತೆ ಎರಡು ಗಂಟೆಗಳ ಕಾಲ ಚರ್ಚಿಸಿದ್ದರು. ಈ ಸಂದರ್ಭದಲ್ಲಿ ಅಷ್ಟಮಠಗಳ ಉಳಿದ ಸ್ವಾಮೀಜಿಗಳ ವಿರುದ್ಧ ಇರುವ ಭಿನ್ನಾಭಿಪ್ರಾಯಗಳ ಕುರಿತು ವಿಸ್ತೃತವಾಗಿ ಮಾತನಾಡಿದ್ದರು. ಆಗ ಅವರು ನ್ಯಾಯಾಲಯದಲ್ಲಿ ಕೇಸು ದಾಖಲಿಸುವುದರಿಂದ ತನಗೆ ಜೀವ ಬೆದರಿಕೆ ಬರಬಹುದು ಎಂಬ ಸಂಶಯ ವ್ಯಕ್ತಪಡಿಸಿದ್ದರು ಎಂದರು.

ಪಟ್ಟದ ದೇವರು ವಿಠಲ ದೇವರು ತನ್ನ ಮಠಕ್ಕೆ ಸಂಬಂಧಿಸಿದ್ದು, ಅದು ಕೃಷ್ಣ ಮಠಕ್ಕೆ ಸಂಬಂಧಿಸಿದ್ದಲ್ಲ. ಪಟ್ಟದ ದೇವರನ್ನು ತನ್ನ ಅನಾರೋಗ್ಯ ಕಾಲದಲ್ಲಿ ಮಠದಲ್ಲಿ ಇರಿಸಿದ್ದು, ಈಗ ಕೇಳಿದರೆ ಹಿಂದಿರುಗಿಸದೇ ಇರುವುದರಿಂದ ಕ್ರಿಮಿನಲ್ ಕೇಸು ಹಾಕಬೇಕು ಎಂದು ಬಯಸಿದ್ದರು. ಈ ಸಂಬಂಧ ಕೆವಿಯಟ್‌ನ್ನು ಸಹ ಸಲ್ಲಿಸಲಾಗಿತ್ತು. ಆದರೆ ಈಗ ಕೇಸು ದಾಖಲಿಸುವ ಮುನ್ನವೇ ಅವರ ಅಕಾಲಿಕ, ಅಸಹಜ ಸಾವಿನ ಸುದ್ದಿ ಬಂದಿದೆ ಎಂದರು.

ಅವರ ಸಾವು ತುಂಬಾ ಅನುಮಾನಾಸ್ಪದ. ಅವರಿಂದ ಬಹಳಷ್ಟು ಮಂದಿಗೆ ತೊಂದರೆಯಾಗಿದೆ. ತುಂಬಾ ವಿರೋಧಿಗಳು ಸೃಷ್ಟಿಯಾಗಿದ್ದರು. ಅವರು ಆರೋಗ್ಯದಲ್ಲೂ ಚೆನ್ನಾಗಿದ್ದರು. ಅವರ ಮರಣದಿಂದ ಲಾಭ ಪಡೆಯುವವರು ತುಂಬಾ ಜನರಿದ್ದಾರೆ. ಇದೀಗ ವಿಷಪ್ರಾಶನದಿಂದ ಸಾವು ಸಂಭವಿಸಿರುವುದು ಖಚಿತವಾಗಿರುವುದರಿಂದ ಸಮಗ್ರ ತನಿಖೆ ನಡೆದು ನಿಜವಾದ ತಪ್ಪಿತಸ್ಥರು ಯಾರೇ ಆಗಿದ್ದರೂ ಕ್ರಮ ಜರಗಿಸಬೇಕು ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News