ಏಕದಿನ ಇತಿಹಾಸದಲ್ಲಿ ದ್ವಿಶತಕ ಬಾರಿಸಿದ ಪಾಕ್ ನ ಪ್ರಥಮ ದಾಂಡಿಗ ಝಮಾನ್

Update: 2018-07-20 12:07 GMT

ಹರಾರೆ, ಜು.20: ಪಾಕಿಸ್ತಾನದ ಆರಂಭಿಕ ಆಟಗಾರ ಫಖರ್ ಝಮಾನ್ ತನ್ನ ದೇಶದ ಪರ ಏಕದಿನ ಕ್ರಿಕೆಟ್‌ನಲ್ಲಿ ದ್ವಿಶತಕ ಸಿಡಿಸಿದ ಮೊದಲ ದಾಂಡಿಗ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಎಡಗೈ ದಾಂಡಿಗ ಝಮಾನ್ ಝಿಂಬಾಬ್ವೆ ವಿರುದ್ಧ ಶುಕ್ರವಾರ ಇಲ್ಲಿ ನಡೆದ ನಾಲ್ಕನೇ ಏಕದಿನ ಪಂದ್ಯದ ವೇಳೆ ಈ ಸಾಧನೆ ಮಾಡಿದ್ದಾರೆ. ಕೇವಲ 156 ಎಸೆತಗಳಲ್ಲಿ 24 ಬೌಂಡರಿ, 5 ಸಿಕ್ಸರ್‌ಗಳ ನೆರವಿನಿಂದ ಔಟಾಗದೆ 210 ರನ್ ಗಳಿಸಿರುವ ಝಮಾನ್ ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ದ್ವಿಶತಕ ಸಿಡಿಸಿರುವ ವಿಶ್ವದ ಆರನೇ ಬ್ಯಾಟ್ಸ್‌ಮನ್ ಆಗಿದ್ದಾರೆ.

ಕೇವಲ 148 ಎಸೆತಗಳಲ್ಲಿ 200 ರನ್ ಪೂರೈಸಿದ ಝಮಾನ್ ಅತ್ಯಂತ ವೇಗವಾಗಿ ಈ ಮೈಲುಗಲ್ಲು ತಲುಪಿದ ನಾಲ್ಕನೇ ದಾಂಡಿಗನಾಗಿದ್ದಾರೆ. 28ರ ಹರೆಯದ ಝಮಾನ್ ಪಾಕ್ ಪರ ಗರಿಷ್ಠ ವೈಯಕ್ತಿಕ ಸ್ಕೋರ್ ಗಳಿಸಿರುವ ಸಯೀದ್ ಅನ್ವರ್(194) ದಾಖಲೆ ಮುರಿದರು.

ಇಮಾಮ್ ಉಲ್ ಹಕ್(113 ರನ್) ಅವರೊಂದಿಗೆ ಮೊದಲ ವಿಕೆಟ್‌ಗೆ 304 ರನ್ ಜೊತೆಯಾಟ ನಡೆಸಿ ಹೊಸ ದಾಖಲೆ ನಿರ್ಮಿಸಿರುವ ಫಕರ್ ದ್ವಿಶತಕದ ಬೆಂಬಲದಿಂದ ಪಾಕ್ ನಿಗದಿತ 50 ಓವರ್‌ಗಳಲ್ಲಿ 1 ವಿಕೆಟ್ ನಷ್ಟಕ್ಕೆ 399 ರನ್ ಗಳಿಸಿದೆ. ಹಕ್ ಹಾಗೂ ಝಮಾನ್ ಏಕದಿನ ಕ್ರಿಕೆಟ್‌ನಲ್ಲಿ ಮೊದಲ ವಿಕೆಟ್‌ಗೆ ಗರಿಷ್ಠ ಜೊತೆಯಾಟ ನಡೆಸಿ ದಾಖಲೆ ನಿರ್ಮಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News