ಮಂಗಳೂರು :ಡೀಸೆಲ್, ಫರ್ನಿಶ್ ಆಯಿಲ್ ಕಳ್ಳತನ ಜಾಲ ಪತ್ತೆ; ಓರ್ವನ ಸೆರೆ

Update: 2018-07-20 14:13 GMT

ಮಂಗಳೂರು, ಜು.20: ನಗರದ ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯ ಬಾಳ ಎಂಬಲ್ಲಿ ಅಕ್ರಮವಾಗಿ ಡೀಸೆಲ್, ಫರ್ನಿಶ್ ಆಯಿಲ್ ಕಳ್ಳತನ ಮಾಡಿ ಸಂಗ್ರಹಿಸಿಟ್ಟ ಸ್ಥಳಕ್ಕೆ ದಾಳಿ ನಡೆಸಿದ ಮಂಗಳೂರು ಸಿಸಿಬಿ ಪೊಲೀಸರು, ಓರ್ವ ಆರೋಪಿ ಸೇರಿದಂತೆ ಡೀಸೆಲ್, ಫರ್ನಿಶ್ ಆಯಿಲ್ ಹಾಗೂ ಇತರ ಉತ್ಪನ್ನ ವಶಪಡಿಸಿಕೊಂಡಿದ್ದಾರೆ.

ವಶಕ್ಕೆ ಪಡೆದ ಆರೋಪಿಯನ್ನು ಕುಳಾಯಿಗುಡ್ಡೆ ನಿವಾಸಿ ಸಂತೋಷ್(36) ಎಂದು ಗುರುತಿಸಲಾಗಿದೆ.

 ಸ್ಥಳದಲ್ಲಿದ್ದ 10 ಬ್ಯಾರೆಲ್ ಫರ್ನಿಶ್ ಆಯಿಲ್, 2 ಬ್ಯಾರೆಲ್ ಡೀಸೆಲ್, 3ಟ್ಯಾಂಕರ್‌ಗಳು, ದ್ವಿಚಕ್ರ ವಾಹನಗಳು, ಹಾಗೂ ಇತರ ಸೊತ್ತುಗಳನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ. ಸ್ವಾಧೀನಪಡಿಸಿಕೊಂಡ ಸೊತ್ತಿನ ಮೌಲ್ಯ 20 ಲಕ್ಷ ರೂ. ಎಂದು ಅಂದಾಜಿಸಲಾಗಿದೆ.

ಆಯಿಲ್‌ನ್ನು ಅಕ್ರಮವಾಗಿ ಕಳ್ಳತನ ಮಾಡಿ ಸಂಗ್ರಹಿಸಿಟ್ಟ ಬಗ್ಗೆ ಬಂದ ಮಾಹಿತಿಯ ಆಧಾರದಲ್ಲಿ ಮಂಗಳೂರು ಸಿಸಿಬಿ ಪೊಲೀಸರು ಹಾಗೂ ಸುರತ್ಕಲ್ ಪೊಲೀಸರು ದಾಳಿ ನಡೆಸಿದ್ದರು.

ಈ ದಂಧೆಯನ್ನು ಆರೋಪಿಯು ಎಂಆರ್‌ಪಿಎಲ್‌ನಿಂದ ಡೀಸೆಲ್ ಹಾಗೂ ಫರ್ನಿಶ್ ಆಯಿಲ್‌ನ್ನು ತುಂಬಿಕೊಂಡು ಬರುವ ಟ್ಯಾಂಕರ್‌ಗಳಿಂದ ಅದರ ಚಾಲಕರ ಜೊತೆ ಸೇರಿ ಕಳ್ಳತನ ಮಾಡುತ್ತಿದ್ದ. ನಂತರ ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿದ್ದ ಎಂದು ತಿಳಿದುಬಂದಿದೆ.

 ಕಾರ್ಯಾಚರಣೆಯಲ್ಲಿ ಸಿಸಿಬಿ ಘಟಕದ ಇನ್‌ಸ್ಪೆಕ್ಟರ್ ಶಾಂತಾರಾಮ, ಪಿಎಸ್ಸೈಗಳಾದ ಶ್ಯಾಮ್ ಸುಂದರ್, ಕಬ್ಬಾಳ್‌ರಾಜ್ ಹಾಗೂ ಸಿಬ್ಬಂದಿ ಹಾಗೂ ಸುರತ್ಕಲ್ ಪೊಲೀಸ್ ಇನ್‌ಸ್ಪೆಕ್ಟರ್ ಕೆ.ಜಿ ರಾಮಕೃಷ್ಣ ಮತ್ತು ಸಿಬ್ಬಂದಿ ಭಾಗವಹಿಸಿದ್ದರು.

ಈ ಕುರಿತು ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News