ಸುರತ್ಕಲ್ ಟೋಲ್‌ಗೇಟ್ ಮುಚ್ಚಲು ಒತ್ತಾಯ: ಡಿವೈಎಫ್‌ಐ ನೇತೃತ್ವದ ನಿಯೋಗದಿಂದ ಮನವಿ

Update: 2018-07-20 14:20 GMT

ಮಂಗಳೂರು, ಜು.20: ಸುರತ್ಕಲ್ ಟೋಲ್‌ಗೇಟ್ ಮುಚ್ಚಲು ಒತ್ತಾಯಿಸಿ, ಹೆದ್ದಾರಿ ಗುಂಡಿ ಮುಚ್ಚಿ ಸಂಚಾರ ಯೋಗ್ಯ ಹೆದ್ದಾರಿಯಾಗಿ ಮಾರ್ಪಡಿಸಲು ಒತ್ತಾಯಿಸಿ ಡಿವೈಎಫ್‌ಐ ನೇತೃತ್ವದಲ್ಲಿ ಸಾರ್ವಜನಿಕರ ನಿಯೋಗ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕರಿಗೆ ಮನವಿಯನ್ನು ಸಲ್ಲಿಸಲಾಯಿತು.

ಸುರತ್ಕಲ್ ಎನ್‌ಐಟಿಕೆ ಸಮೀಪದ ಟೋಲ್‌ಗೇಟ್‌ನ್ನು ಮುಚ್ಚಬೇಕೆಂದು ಒತ್ತಾಯಿಸಿ, ಸಾರ್ವಜನಿಕರು ಜೊತೆ ಸೇರಿ ಕಳೆದ ಎರಡು ವರ್ಷಗಳಿಂದ ನಿರಂತರ ಹೋರಾಟಗಳನ್ನು ನಡೆಸಲಾಗುತ್ತಿದೆ. ಆ ಸಂದರ್ಭ 2018 ಜು.30ರವರೆಗೆ ಪ್ರಸ್ತುತ ಇರುವ ಟೋಲ್‌ಗೇಟ್ ಗುತ್ತಿಗೆದಾರರ ಅವಧಿ ಮುಕ್ತಾಯಗೊಳ್ಳಲಿದ್ದು, ನಂತರ ಸುರತ್ಕಲ್ ಟೋಲ್‌ಗೇಟನ್ನು ಮುಚ್ಚಲಾಗುವುದೆಂದು ತಿಳಿಸಿದ್ದರು. ಅಲ್ಲದೆ, ಹೆಜಮಾಡಿ ಟೋಲ್‌ಗೇಟ್‌ನೊಂದಿಗೆ ಸುರತ್ಕಲ್ ಟೋಲ್‌ಗೇಟ್ ವಿಲೀನವಾಗಲಿದೆ ಎನ್ನಲಾಗಿತ್ತು. ಈ ಬಗ್ಗೆ ದ.ಕ. ಸಂಸದರಿಂದಲೂ ಸುರತ್ಕಲ್ ಟೋಲ್‌ಗೇಟ್ ಮುಚ್ಚುವ ಬಗ್ಗೆ ಅಭಿಪ್ರಾಯ ತಮ್ಮ ಗಮನಕ್ಕೆ ಬಂದಿತ್ತು ಎಂದು ಮನವಿಯಲ್ಲಿ ತಿಳಿಸಿದ್ದಾರೆ.

ಸುರತ್ಕಲ್ ಟೋಲ್‌ಗೇಟ್ ಮತ್ತು ಹೆಜಮಾಡಿ ಟೋಲ್‌ಗೇಟ್‌ಗೂ ಕೇವಲ 8 ಕಿ.ಮೀ. ಅಂತರವಿದ್ದು, ಸಣ್ಣ ಅಂತರದಲ್ಲಿ ಎರಡೆರಡು ಟೋಲ್‌ಗೇಟ್‌ಗಳಿಗೆ ಸುಂಕ ನೀಡಬೇಕಿರುವುದರಿಂದ ಸಾರ್ವಜನಿಕರು, ಲಾರಿ, ಬಸ್, ಕಾರು ಮಾಲಕರು ನಷ್ಟ ಅನುಭವಿಸುತ್ತಿದ್ದಾರೆ. ಯಾವುದೇ ಕಾರಣಕ್ಕೂ ಮತ್ತೆ ಸುರತ್ಕಲ್ ಟೋಲ್‌ಗೇಟಿನ ಸುಂಕ ವಸೂಲಿ ಗುತ್ತಿಗೆಯನ್ನು ನವೀಕರಿಸಬಾರದು ಎಂದು ಮನವಿಯಲ್ಲಿ ಆಗ್ರಹಿಸಲಾಯಿತು.

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಸುಂಕ ವಸೂಲಿ ಗುತ್ತಿಗೆಯನ್ನು ನವೀಕರಿಸಿದಲ್ಲಿ ಸಾರ್ವಜನಿಕರನ್ನು ಸಂಘಟಿಸಿ ತೀವ್ರತರವಾದ ಹೋರಾಟಗಳನ್ನು ಹಮ್ಮಿಕೊಳ್ಳಲಾಗುವುದೆಂದು ಡಿವೈಎಫ್‌ಐ ಮನವಿಯಲ್ಲಿ ಎಚ್ಚರಿಕೆ ನೀಡಿದೆ.

ಸುರತ್ಕಲ್‌ನಿಂದ ನಂತೂರುವರೆಗಿನ ರಾಷ್ಟ್ರೀಯ ಹೆದ್ದಾರಿ 66 ಸಂಪೂರ್ಣ ಹಾಳಾಗಿದ್ದು, ವಾಹನ ಸಂಚಾರಕ್ಕೆ ಅಯೋಗ್ಯವಾಗಿದೆ. ಇತ್ತೀಚಿಗೆ ಡಾಂಬರೀಕರಣ ಹೊಂದಿದ್ದ ಈ ರಸ್ತೆಯು ಗುಂಡಿಗಳಿಂದ ತುಂಬಿ ಹೋಗಿದೆ, ಕಳಪೆ ಮತ್ತು ಅವೈಜ್ಞಾನಿಕ ಕಾಮಗಾರಿಗಳು ಹೆದ್ದಾರಿಯ ಈ ದುಃಸ್ಥಿತಿಗೆ ಕಾರಣವಾಗಿದೆ. ಕೂಡಲೇ ಹೆದ್ದಾರಿ ಗುಂಡಿಗಳನ್ನು ಮುಚ್ಚಬೇಕು ಮತ್ತು ಸುರತ್ಕಲ್ ಟೋಲ್‌ಗೇಟ್‌ನ ಸುಂಕ ವಸೂಲಿಯನ್ನು ತಕ್ಷಣ ನಿಲ್ಲಿಸಬೇಕೆಂದು ಮನವಿಯಲ್ಲಿ ಒತ್ತಾಯಿಸಿದೆ.

ನಿಯೋಗದಲ್ಲಿ ಡಿವೈಎಫ್‌ಐನ ಜಿಲ್ಲಾಧ್ಯಕ್ಷ ಬಿ.ಕೆ. ಇಮ್ತಿಯಾಝ್, ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್, ನಗರ ಪಾಲಿಕೆ ಸದಸ್ಯರಾದ ರೇವತಿ ಕೆ.ಪುತ್ರನ್, ಕೆ.ಯು. ಮೂಸಬ್ಬ, ಅಬ್ದುಲ್ ರಹಿಮಾನ್ ಪಕ್ಷಿಕೆರೆ, ರಶೀದ್ ಮುಕ್ಕ, ರಂಜಿತ್, ಅಬ್ದುಲ್ ಸಲಾಂ ಅಂಗರಗುಂಡಿ, ಸತ್ಯಜಿತ್ ಮುಂತಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News