ಉಚಿತ ಬಸ್‌ಪಾಸ್ ಆಗ್ರಹಿಸಿ ಕ್ಯಾಂಪಸ್ ಫ್ರಂಟ್ ಪ್ರತಿಭಟನೆ

Update: 2018-07-20 14:44 GMT

ಮಂಗಳೂರು, ಜು.20: ವಿದ್ಯಾರ್ಥಿಗಳಿಗೆ ಉಚಿತ ಬಸ್‌ಪಾಸ್‌ಗೆ ಆಗ್ರಹಿಸಿ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಮಂಗಳೂರು ತಾಲೂಕು ವತಿಯಿಂದ ನಗರದ ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟನೆ ನಡೆಸಲಾಯಿತು.

ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದ ಕ್ಯಾಂಪಸ್ ಫ್ರಂಟ್ ರಾಜ್ಯ ರಾಜ್ಯ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಶಾಕೀರ್, ಕಳೆದ ಸಿದ್ದರಾಮಯ್ಯ ಸರಕಾರ ಬಜೆಟ್‌ನಲ್ಲಿ ಘೋಷಿಸಿದ್ದ ಉಚಿತ ಬಸ್ ಪಾಸ್ 2018-19ರ ಪ್ರಸ್ತುತ ಶೈಕ್ಷಣಿಕ ಸಾಲಿನಲ್ಲಿ ನೀಡಬೇಕಿತ್ತು. ಆದರೆ ಈಗಿನ ಸರಕಾರ ವಿದ್ಯಾರ್ಥಿಗಳಿಗೆ ಉಚಿತ ಬಸ್‌ಪಾಸ್ ನೀಡದೆ ನಿರ್ಲಕ್ಷ ವಹಿಸಿದೆ ಎಂದು ದೂರಿದರು.

ಶಾಲಾ ಕಾಲೇಜುಗಳು ಪ್ರಾರಂಭವಾಗಿ ತಿಂಗಳುಗಳು ಕಳೆದಿದ್ದು, ವಿದ್ಯಾರ್ಥಿಗಳು ಉಚಿತ ಬಸ್‌ಪಾಸ್ ಯೋಜನೆಯನ್ನು ಕಾದು ಹಣ ಪಾವತಿಸಿ ಪಾಸ್ ಪಡೆದಿದ್ದಾರೆ. ಅಲ್ಲದೆ, ಇನ್ನೂ ಹಲವು ವಿದ್ಯಾರ್ಥಿಗಳು ಉಚಿತ ಬಸ್‌ಪಾಸ್‌ಗಾಗಿ ಕಾಯುತ್ತಿದ್ದಾರೆ. ಸರಕಾರ ವಿದ್ಯಾರ್ಥಿಗಳ ಶಿಕ್ಷಣವನ್ನು ಉತ್ತೇಜಿಸಲು ಈ ರೀತಿಯಾದ ಯೋಜನೆಗಳನ್ನು ಆಯೋಜಿಸಿ ಸರಿಯಾದ ಸಮಯಕ್ಕೆ ಅನುಷ್ಠಾನಗೊಳಿಸದೆ ಇರುವುದು ಸ್ಟರಕಾರದ ಬೇಜವಾಬ್ದಾರಿಯನ್ನು ಎತ್ತಿತೋರಿಸುತ್ತದೆ ಎಂದು ಹೇಳಿದರು.

ಕ್ಯಾಂಪಸ್ ಫ್ರಂಟ್ ದ.ಕ. ಜಿಲ್ಲಾಧ್ಯಕ್ಷ ಇಮ್ರಾನ್ ಪಿ.ಜೆ. ಮಾತನಾಡಿ, ಸರಕಾರ ರಚನೆಯ ಮುಂಚೆ ಕೊಟ್ಟ ಭರವಸೆಯನ್ನು ಈಡೇರಿಸದೆ ವಿದ್ಯಾರ್ಥಿಗಳನ್ನು ವಂಚಿಸುತ್ತಿದೆ. ಸರಕಾರದ ಈ ನಡೆಯನ್ನು ನೋಡುವಾಗ ಚಂದಮಾಮ ಕಥೆ ನೆನಪಾಗುತ್ತಿದೆ ಎಂದು ವ್ಯಂಗವಾಡಿದರು.

ಒಂದು ವೇಳೆ 15 ದಿನಗಳ ಒಳಗೆ ಸರಕಾರ ವಿದ್ಯಾರ್ಥಿಗಳಿಗೆ ಉಚಿತ ಬಸ್‌ಪಾಸ್ ಯೋಜನೆಯನ್ನು ಅನುಷ್ಠಾನಗೊಳಿಸದಿದ್ದರೆ ಹೋರಾಟವನ್ನು ತೀವ್ರಗೊಳಿಸಲಾಗುವುದು ಎಂದು ಎಚ್ಚರಿಸಿದರು. ವಿದ್ಯಾರ್ಥಿಗಳು ಸರಕಾರದ ವಿದ್ಯಾರ್ಥಿ ವಿರೋಧಿ ನಡೆಗೆ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ನಗರದ ಕಾಲೇಜಿನಿಂದ ಹಲವಾರು ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಮಂಗಳೂರು ತಾಲೂಕು ಕಾರ್ಯದರ್ಶಿ ಫರಾಝ್, ತಾಜುದ್ದೀನ್ ಹಾಗೂ ವಿವಿಧ ಕಾಲೇಜು ನಾಯಕರುಗಳಾದ ಅಫ್ರೀದ್, ಹಕೀಂ, ಅಫೀಲ್ ಮತ್ತು ಶಾಹಿದ್ ಉಪಸ್ಥಿತರಿದ್ದರು. ಜಿಲ್ಲಾ ಜೊತೆ ಕಾರ್ಯದರ್ಶಿ ಫಹದ್ ಕಾರ್ಯಕ್ರಮ ನಿರೂಪಿಸಿದರು. ಜಿಲ್ಲಾ ಕಾರ್ಯದರ್ಶಿ ನಿಝಾಂ ನಿಝಾಂ ಸ್ವಾಗತಿಸಿ, ವಂದಿಸಿದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News