×
Ad

ಪಡಿತರ ಚೀಟಿ ವಿತರಣೆಗೆ ಪೂರಕ ಕ್ರಮ: ಸಚಿವ ಝಮೀರ್ ಅಹ್ಮದ್

Update: 2018-07-20 20:10 IST

ಮಂಗಳೂರು, ಜು.20: ಹೊಸದಾಗಿ ಆನ್‌ಲೈನ್ ಮೂಲಕ ಪಡಿತರ ಚೀಟಿಯಲ್ಲಿ ಕುಟುಂಬ ಸದಸ್ಯರ ಹೆಸರನ್ನು ಸೇರಿಸುವಾಗ ವೈಯಕ್ತಿಕ ಆದಾಯ ಪ್ರಮಾಣಪತ್ರದ ಅಗತ್ಯವಿಲ್ಲ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಗ್ರಾಹಕರ ವ್ಯವಹಾರಗಳು, ಅಲ್ಪಸಂಖ್ಯಾತರ ಕಲ್ಯಾಣ ಹಾಗೂ ವಕ್ಫ್ ಹಜ್ ಸಚಿವ ಬಿ.ಎಚ್.ಝಮೀರ್ ಅಹ್ಮದ್ ತಿಳಿಸಿದ್ದಾರೆ.

ನಗರದ ಸರ್ಕ್ಯೂಟ್ ಹೌಸ್‌ನಲ್ಲಿ ಶುಕ್ರವಾರ ಪಡಿತರ ಇಲಾಖೆಯ ಪ್ರಗತಿ ಪರಿಶೀಲನೆ ನಡೆಸಿದ ಸಚಿವರು, ಪಡಿತರ ಚೀಟಿಯ ಸುಗಮ್ಯ ವಿತರಣೆಗೆ ಅನುಕೂಲವಾಗುವಂತೆ ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗಿದೆ. ಸದ್ಯ ಎದುರಿಸುತ್ತಿರುವ ತಾಂತ್ರಿಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಕೇಂದ್ರ ಕಚೇರಿಯಲ್ಲಿ ಸಭೆ ನಡೆಸಿ ಮಾರ್ಗದರ್ನಗಳನ್ನು ನೀಡಲಾಗಿದೆ ಎಂದರು.

ಪಡಿತರ ವ್ಯವಸ್ಥೆಯನ್ನು ಸ್ಟ್ರೀಂಲೈನ್‌ಗೊಳಿಸಿರುವುದರಿಂದ ಪಡಿತರದಾರರಿಗೆ ಹಾಗೂ ವಿತರಕರಿಗೆ ಹೆಚ್ಚಿನ ಅನುಕೂಲವಾಗಿದೆ. ಪಡಿತರ ವ್ಯವಸ್ಥೆಯನ್ನು ಇನ್ನಷ್ಟು ಸಮರ್ಪಕ ಅನುಷ್ಠಾನಕ್ಕೆ ಪೂರಕ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಸಚಿವರು ಹೇಳಿದರು.

ಆಹಾರ ಇಲಾಖೆಯ ಉಪನಿರ್ದೇಶಕಿ(ಪ್ರಭಾರ) ಪ್ರಮೀಳಾ ಮಾತನಾಡಿ, ತಿದ್ದುಪಡಿಗೆ ಹೋದ ಸುಮಾರು 15ಸಾವಿರ ಪಡಿತರ ಚೀಟಿಗಳು ಮುದ್ರಣಗೊಂಡು ಬಾರದಿರುವ ಬಗ್ಗೆ ಸಚಿವರ ಗಮನಸೆಳೆದರು. ಜಿಲ್ಲೆಯಲ್ಲಿ ಖಾಲಿ ಇರುವ ಹುದ್ದೆಗಳ ಬಗ್ಗೆಯೂ ಸಚಿವರ ಗಮನ ಸೆಳೆದರು.

ಪಡಿತರ ಚೀಟಿದಾರರು ತೊಗರಿಬೇಳೆಯ ಬದಲಿಗೆ ಹೆಸರುಕಾಳಿಗೆ ಬೇಡಿಕೆ ಇಟ್ಟಿರುವ ಬಗ್ಗೆಯೂ ಇಲಾಖೆಯ ಸಹಾಯಕ ನಿರ್ದೇಶಕರು ಸಚಿವರಿಗೆ ಮಾಹಿತಿ ನೀಡಿದರು. ಇದೇ ತಿಂಗಳ 25ರಿಂದ ಇಲಾಖೆಯ ನ್ಯಾಯಬೆಲೆ ಅಂಗಡಿ ಹಾಗೂ ಪಡಿತರದಾರರನ್ನು ಖುದ್ದು ಭೇಟಿ ನೀಡಿ, ಪರಿಶೀಲನೆ ನಡೆಸಲು ಕಾರವಾರದಿಂದ ಕಾರ್ಯಕ್ರಮ ಆರಂಭಿಸುವುದಾಗಿ ಸಚಿವರು ಹೇಳಿದರು.

ಜಿಲ್ಲೆಯಲ್ಲಿ 466 ನ್ಯಾಯಬೆಲೆ ಅಂಗಡಿಗಳು ಇದ್ದು, 4,35,521 ಪಡಿತರ ಚೀಟಿಗಳು ಇವೆ. ಕಳೆದ ತಿಂಗಳಾಂತ್ಯದವರೆಗೆ 13,413 ಬಿಪಿಎಲ್ ಕಾರ್ಡ್ ವಿತರಣೆಗೆ ಬಾಕಿ ಇದೆ. ಒಟ್ಟು 52,752 ಅರ್ಜಿಗಳನ್ನು ಆನ್‌ಲೈನ್ ಮುಖಾಂತರ ಸ್ವೀಕರಿಸಲಾಗಿದೆ. 37,916 ಕಾರ್ಡ್‌ಗಳ ಅರ್ಜಿ ಸ್ವೀಕೃತಗೊಂಡಿವೆ. 1,423 ಅರ್ಜಿಗಳು ತಿರಸ್ಕತಗೊಂಡಿವೆ ಎಂದರು.

ಸಭೆಯಲ್ಲಿ ಆಹಾರ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News