ಪಡುಬಿದ್ರಿ: 19 ಕೊರಗ ಕುಟುಂಬಗಳಿಗೆ ಜಮೀನು ಮಂಜೂರು

Update: 2018-07-20 14:57 GMT

ಪಡುಬಿದ್ರಿ,ಜು.20: ಪಡುಬಿದ್ರಿಯ ನಡ್ಸಾಲುವಿನ ಅಬ್ಬೇಡಿ ಸಮೀಪದ ಸುಝ್ಲಾನ್ ಪುವರ್ನಸತಿ ಕಾಲನಿ ಬಳಿ ವಾಸಿಸುತ್ತಿರುವ 19 ಕೊರಗ ಕುಟುಂಬಗಳಿಗೆ ಪಾದೆಬೆಟ್ಟು ಗ್ರಾಮದಲ್ಲಿ ಜಮೀನು ಮಂಜೂರಾಗಿದೆ. 

ಪಾದೆಬೆಟ್ಟು ಶಾಲೆಯ ಬಳಿಯಿರುವ ಡಿಸಿ ಮನ್ನಾ ಜಮೀನಿನಲ್ಲಿ ಸುಮಾರು 95 ಸೆಂಟ್ಸ್ ಜಾಗವನ್ನು ಗೊತ್ತುಪಡಿಸಿ ಕೊರಗ ಕುಟುಂಬಗಳಿಗೆ ಮಂಜೂರಾತಿ ಮಾಡಿದ್ದಾರೆ. 19 ಕುಟುಂಬಗಳಿಗೆ ಹಕ್ಕುಪತ್ರವನ್ನು ಒಂದು ತಿಂಗಳೊಳಗೆ ವಿತರಿಸಲಾಗುವುದು ಎಂದು ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಪತ್ರಿಕೆಗೆ ತಿಳಿಸಿದ್ದಾರೆ. 

ಜಮೀನಿನಲ್ಲಿ ಸುಸಜ್ಜಿತವಾಗಿ ಮನೆಗಳನ್ನು ನಿರ್ಮಿಸಲು ಜಿಲ್ಲಾಡಳಿತ ಯೋಜನೆಯನ್ನೂ  ಸಿದ್ದಪಡಿಸಿದೆ. ನಿವಾಸ್ ಎನ್‍ಜಿಒ ಅವರೊಂದಿಗೆ ಬಡಾವಣೆ ಹಾಗೂ ಮನೆ ವಿನ್ಯಾಸವನ್ನು ಪಡೆದು ಚರ್ಚೆ ನಡೆಸಿದ್ದಾರೆ. 

ಈ 19 ಕೊರಗ ಕುಟುಂಬಗಳಿಗೆ ಸುಝ್ಲಾನ್ ಪುನರ್ವಸತಿ ಕಾಲೋನಿ ಬಳಿ 50 ಸೆಂಟ್ಸ್ ಜಮೀನು ಗುರುತಿಸಿ ವಿಂಗಡಿಸಿ ನೀಡಲಾಗಿತ್ತು. ಆದರೆ ಅಲ್ಲಿ  ವಸತಿ ನಿರ್ಮಾಣ ಮಾಡದಂತೆ ಪುನರ್ವಸತಿ ಕಾಲೊನಿ ಮಂದಿ ಆಕ್ಷೇಪ ವ್ಯಕ್ತಪಡಿಸಿದ್ದರು. ಈ ವಿವಾದ ನ್ಯಾಯಾಲಯದ ಮೆಟ್ಟಿಲೇರಿ ನವೆಂಬರ್ 2016 ರಲ್ಲಿ ಕೊರಗರಿಗೆ ನ್ಯಾಯ ದೊರಕಿತ್ತು. ಆದರೆ ಅಲ್ಲಿ ನಿವೇಶನ ಲಭ್ಯವಾದರೂ ಸುಝ್ಲಾನ್ ಪುನರ್ವಸತಿ ಕಾಲನಿ ಕೆಲ ನಿವಾಸಿಗರ ದೌರ್ಜನ್ಯದಿಂದ ಮನೆ ನಿರ್ಮಾಣ ಮಾಡುವುದು ಕಷ್ಟವಾಗಿದೆ. ನಾವು ಒಂದು ವೇಳೆ ಇಲ್ಲಿ ಮನೆ ನಿರ್ಮಿಸಿ ಕುಳಿತರೂ ಅವರು ಸಮಸ್ಯೆ ಮಾಡದೆ ಇರುತ್ತಾರೆ ಎಂಬ ನಂಬಿಕೆ ನಮಗಿಲ್ಲ ಎಂದು ಜನವರಿ ತಿಂಗಳಿನಲ್ಲಿ ಸ್ಥಳಕ್ಕೆ ಭೇಟಿ ನೀಡಿದ್ದ ಜಿಲ್ಲಾಧಿಕಾರಿಯವರಲ್ಲಿ ಕೊರಗರು ಅಳಲು ತೋಡಿಕೊಂಡಿದ್ದರು. ಹಾಗೂ ಬೇರೆಡೆ ಜಮೀನು ನೀಡುವಂತೆ ಮನವಿ ಮಾಡಿದ್ದರು. ಇದೀಗ ಅವರ ಬೇಡಿಕೆಗೆ ಸ್ಪಂದನೆ ದೊರಕಿದೆ.

ಸಮಗ್ರ ಗಿರಿಜನ ಅಭಿವೃದ್ಧಿ ಯೋಜನೆಯಡಿ ತಲಾ ರೂ 2 ಲಕ್ಷ ವೆಚ್ಚದಲ್ಲಿ 19 ಕುಟುಂಬಗಳಿಗೂ ಮನೆ ನಿರ್ಮಿಸಲಾಗುವುದು. ಮನೆ ನಿರ್ಮಾಣಕ್ಕೆ ಹೆಚ್ಚುವರಿಯಾಗಿ ತಗಲುವ ವೆಚ್ಚವನ್ನು ಸಿಂಡಿಕೇಟ್ ಬ್ಯಾಂಕ್‍ನ ಸಿಎಸ್‍ಆರ್ ನಿಧಿಯಿಂದ ಭರಿಸುವಂತೆ ಅವರಿಗೆ ಬೇಡಿಕೆ ಸಲ್ಲಿಸಲಾಗಿದೆ. ತಲಾ ರೂ. 50 ಸಾವಿರದಂತೆ ರೂ. 11 ಲಕ್ಷ ಮೊತ್ತವನ್ನು ಸಿಎಸ್‍ಆರ್ ನಿಧಿಯಿಂದ ನೀಡುವಂತೆ ತಿಳಿಸಲಾಗಿದೆ. ಬೇಡಿಕೆಗನುಗುಣವಾಗಿ ತಮ್ಮಿಂದಾದಷ್ಟು ಮಟ್ಟಿನ ಅನುದಾನ ನೀಡಲು ಅವರು ಒಪ್ಪಿದ್ದಾರೆ ಎನ್ನುತ್ತಾರೆ ಉಡುಪಿ ಐಟಿಡಿಪಿ ತನಿಖಾ ಸಹಾಯಕ ವಿಶ್ವನಾಥ್. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News