ಶರೀಫ್, ಪುತ್ರಿ ಭೇಟಿ ರದ್ದು : ವಕೀಲರ ತಂಡದ ಆರೋಪ

Update: 2018-07-20 15:15 GMT

ಇಸ್ಲಾಮಾಬಾದ್, ಜು. 20: ಪಾಕಿಸ್ತಾನದ ಮಾಜಿ ಪ್ರಧಾನಿ ನವಾಝ್ ಶರೀಫ್, ಅವರ ಪುತ್ರಿ ಮರ್ಯಮ್ ಮತ್ತು ಅಳಿಯ ಕ್ಯಾಪ್ಟನ್ (ನಿವೃತ್ತ) ಮುಹಮ್ಮದ್ ಸಫ್ದರ್ ಹಾಗೂ ಅವರ ವಕೀಲರ ನಡುವೆ ನಡೆಯಬೇಕಾಗಿದ್ದ ಸಭೆಯೊಂದನ್ನು ಅಡಿಯಾಲ ಜೈಲು ಅಧಿಕಾರಿಗಳು ಗುರುವಾರ ‘ಏಕಪಕ್ಷೀಯವಾಗಿ’ ರದ್ದುಪಡಿಸಿದ್ದಾರೆ ಎಂದು ಮಾಧ್ಯಮ ವರದಿಯೊಂದು ಹೇಳಿದೆ.

ಏವನ್‌ಫೀಲ್ಡ್ ಪ್ರಾಪರ್ಟೀಸ್ ಪ್ರಕರಣದಲ್ಲಿ ಶರೀಫ್ ಕುಟುಂಬ ಸದಸ್ಯರು ತಪ್ಪಿತಸ್ಥರು ಎಂಬುದಾಗಿ ವಿಚಾರಣಾ ನ್ಯಾಯಾಲಯವೊಂದು ಜುಲೈ 6ರಂದು ತೀರ್ಪು ನೀಡಿತ್ತು.

ಹಾಗಾಗಿ, ಲಂಡನ್‌ನಿಂದ ಪಾಕಿಸ್ತಾನಕ್ಕೆ ಮರಳಿದ ಅವರನ್ನು ಲಾಹೋರ್ ವಿಮಾನ ನಿಲ್ದಾಣದಲ್ಲೇ ಬಂಧಿಸಿ ಅಡಿಯಾಲ ಜೈಲಿಗೆ ಕಳುಹಿಸಲಾಗಿತ್ತು.

ಜೈಲಿನಲ್ಲಿರುವ ಶರೀಫ್ ಕುಟುಂಬವನ್ನು ಭೇಟಿಯಾಗಲು ಅವರ ವಕೀಲರ ತಂಡವು ಪ್ರಯತ್ನಗಳನ್ನು ನಡೆಸುತ್ತಿತ್ತು.

ತಮ್ಮ ಕಕ್ಷಿಗಾರ ನವಾಝ್ ಶರೀಫ್‌ರನ್ನು ಭೇಟಿಯಾಗಲು ಜೈಲು ಅಧಿಕಾರಿಗಳು ಬಿಡುತ್ತಿಲ್ಲ ಎಂಬುದಾಗಿ ವಕೀಲರ ತಂಡದ ಸದಸ್ಯ ಹಾರಿಸ್ ಬುಧವಾರ ಭ್ರಷ್ಟಾಚಾರ ನಿಗ್ರಹ ನ್ಯಾಯಾಲಯಕ್ಕೆ ದೂರು ಸಲ್ಲಿಸಿದ್ದರು ಎಂದು ‘ಡಾನ್’ ವರದಿ ಮಾಡಿದೆ.

ಜೈಲಿನ ಕಲಾಪಗಳು ಮುಗಿದ ಬಳಿಕ, ಹಾರಿಸ್‌ರನ್ನು ಕರೆದ ಜೈಲು ಸೂಪರಿಂಟೆಂಡೆಂಟ್, ಶರೀಫ್ ಕುಟುಂಬವನ್ನು ಭೇಟಿ ಮಾಡಲು ವಕೀಲರ ತಂಡಕ್ಕೆ ಅನುಮತಿ ನೀಡಿದ್ದರು ಎಂದು ಪತ್ರಿಕೆ ಹೇಳಿದೆ.

ಗುರುವಾರ ಬೆಳಗ್ಗೆ 11 ಗಂಟೆಗೆ ಭೇಟಿಯನ್ನು ನಿಗದಿಪಡಿಸಲಾಗಿತ್ತು.

ಈ ಸಮಯಕ್ಕೆ ವಕೀಲರ ತಂಡವು ಜೈಲಿಗೆ ಹೋದಾಗ, ಸಭೆಯನ್ನು ರದ್ದುಪಡಿಸಲಾಗಿದೆ ಎಂಬುದಾಗಿ ಜೈಲು ಸೂಪರಿಂಟೆಂಡೆಂಟ್ ತಿಳಿಸಿದರು ಎಂದು ಪತ್ರಿಕೆ ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News