ಅಷ್ಟಮಠಗಳ ಕಡೆಯಿಂದ ಶಿರೂರುಶ್ರೀಗಳಿಗೆ ವಿಷಪ್ರಾಶನದ ಸಾಧ್ಯತೆ ಇಲ್ಲ : ಪೇಜಾವರಶ್ರೀ

Update: 2018-07-20 15:17 GMT

ಉಡುಪಿ, ಜು.20: ಶಿರೂರು ಮಠದ ಶ್ರೀಲಕ್ಷ್ಮೀವರತೀರ್ಥ ಶ್ರೀಪಾದರ ಸಾವಿಗೆ ವಿಷ ಪ್ರಾಶನವೊ, ಆಹಾರ ದೋಷ ಕಾರಣವೊ ಗೊತ್ತಿಲ್ಲ. ಅವರ ಜೊತೆಗಿದ್ದವರು ಕೊಟ್ಟಿದ್ದಾರೊ ಗೊತ್ತಿಲ್ಲ. ಅತಿಯಾದ ಮದ್ಯಪಾನ, ಇಬ್ಬರು ಮಹಿಳೆಯರ ಜಗಳವೂ ಕಾರಣವಾಗಿರಬಹುದು. ಅಥವಾ ಕಲಾಯಿ ಹಾಕದ ಪಾತ್ರೆಯಲ್ಲಿ ತಯಾರಿಸಿದ ಆಹಾರ ತಿಂದಿದ್ದಾರೊ ಗೊತ್ತಿಲ್ಲ ಎಂದು ಪೇಜಾವರ ಮಠದ ಶ್ರೀವಿಶ್ವೇಶತೀರ್ಥ ಸ್ವಾಮೀಜಿ ಹೇಳಿದ್ದಾರೆ.

ರಥಬೀದಿಯಲ್ಲಿರುವ ಪೇಜಾವರ ಮಠದಲ್ಲಿ ಇಂದು ಕರೆದ ಸುದ್ದಿಗೋಷ್ಠಿ ಯಲ್ಲಿ ಅವರು ಶಿರೂರುಶ್ರೀಗಳ ಹಠಾತ್ ಸಾವಿನ ಹಿನ್ನೆಲೆಯಲ್ಲಿ ಅಷ್ಟಮಠಗಳ ವಿರುದ್ಧ ಕೇಳಿ ಬಂದ ವಿವಿಧ ಆರೋಪಗಳು ಹಾಗೂ ವಿವಾದದ ಕುರಿತು ಸ್ಪಷ್ಟೀಕರಣ ನೀಡುತಿದ್ದರು.

ಅಷ್ಟಮಠಗಳ ಕಡೆಯಿಂದ ವಿಷಪ್ರಾಶನವಾಗುವ ಸಾಧ್ಯತೆಯೇ ಇಲ್ಲ ಎಂದು ಹೇಳಿದ ಸ್ವಾಮೀಜಿ, ಅವರ ಸಾವಿನ ಕುರಿತಂತೆ ಬೇರೆ ಬೇರೆ ರೀತಿಯ ವಿವರಣೆಗಳು, ಆರೋಪಗಳು ಕೇಳಿಬರುತ್ತಿವೆ. ಈ ಬಗ್ಗೆ ಸರಿಯಾದ ವಿಚಾರಣೆ ನಡೆಯಬೇಕು ಎಂದವರು ನುಡಿದರು.

ಶಿರೂರುಶ್ರೀಗಳಿಗೆ ಈವರೆಗೆ ಒಬ್ಬ ಮಹಿಳೆಯ ಜೊತೆ ಸಂಪರ್ಕ ಇತ್ತು. ಈಗ ಹೊಸ ಮಹಿಳೆಯ ಸಂಪರ್ಕ ಆಗಿದ್ದು, ಇಬ್ಬರೊಳಗೆ ಏನಾದರೂ ಜಗಳವಾಗಿರಬಹುದು. ಅವರು ವಿಪರೀತ ಮದ್ಯಪಾನ ಮಾಡುತಿದ್ದು ಅದರಿಂದಲೂ ಸಮಸ್ಯೆ ಆಗಿರಬಹುದು. ಅವರು ಕಲಾಯಿ ಹಾಕದ ಪಾತ್ರೆಯಲ್ಲಿ ತಯಾರಿಸಿದ ಆಹಾರ ತಿಂದಿದ್ದಾರೆ ಎಂದು ಸಹೋದರ ತಮಗೆ ತಿಳಿಸಿದ್ದಾರೆ ಎಂದೂ ಪೇಜಾವರ ಶ್ರೀ ನುಡಿದರು.

ಮುಕ್ತ ತನಿಖೆಗೆ ಸಹಮತ: ಶಿರೂರುಶ್ರೀಗಳ ಸಾವಿನ ಕುರಿತು ಉನ್ನತ ಮಠದ ತನಿಖೆಗೆ ತಾವು ಅಷ್ಟಮಠಗಳ ಪರವಾಗಿ ಒತ್ತಾಯಿಸುತ್ತೀರಾ ಎಂದು ಕೇಳಿದಾಗ, ಪೊಲೀಸರು ಮುಕ್ತವಾಗಿ ತನಿಖೆ ನಡೆಸಬಹುದು. ನನ್ನನ್ನು ಸಹ ಅವರು ವಿಚಾರಣೆ ಮಾಡಲಿ ನನ್ನ ಅಭ್ಯಂತರವಿಲ್ಲ. ಆದರೆ ಪೊಲೀಸರು ನಿಷ್ಪಕ್ಷಪಾತ ತನಿಖೆ ನಡೆಸಲಿ ಎಂಬುದೇ ತಮ್ಮ ಆಶಯ ಎಂದರು.

ಈ ಪ್ರಕರಣದಲ್ಲಿ ಯಾವುದೇ ಮಠಾಧೀಶರ ಪಾತ್ರವಿಲ್ಲ ಎಂಬ ಬಗ್ಗೆ ನನಗೆ ವಿಶ್ವಾಸವಿದೆ. ಈ ಬಗ್ಗೆ ಯಾವುದೇ ಸಂಶಯವಿಲ್ಲ. ಸಂಶಯವಿದ್ದರೆ ವಿಚಾರಣೆ ನಡೆಸಬಹುದು.ಬೇಕಾದರೆ ನನ್ನ ವಿಚಾರಣೆಯನ್ನು ಮಾಡಲಿ ಎಂದು ನುಡಿದ ಪೇಜಾವರಶ್ರೀ, ಇದು ಕೊಲೆ ಅಲ್ಲವೇ ಅಲ್ಲ. ಈ ಬಗ್ಗೆ ನನಗೆ ಖಾತ್ರಿ ಇದೆ.
ಶಿರೂರು ಶ್ರೀಗಳ ನಿಧನದ ಬಗ್ಗೆ ತಮಗೆ ಖೇದವಿದೆ. ಅವರ ನಿಧನಕ್ಕೆ ನಿನ್ನೆಯೇ ನಾನು ಸಂತಾಪ ಸೂಚಿಸಿದ್ದೆ. ಆದರೆ ಮಾಧ್ಯಮಗಳು ನಿನ್ನೆ ನಾನು ನೀಡಿದ ಹೇಳಿಕೆಗಳನ್ನು ತಿರುಚಿ ಪ್ರಕಟಿಸಿವೆ. ಅಥವಾ ತಮಗೆ ಬೇಕಾದ ವಾಕ್ಯವನ್ನು ಮಾತ್ರ ಪ್ರಸಾರ ಮಾಡಿವೆ ಎಂದು ಮಾಧ್ಯಮಗಳ ವಿರುದ್ಧ ಅಸಮಧಾನ ವ್ಯಕ್ತಪಡಿಸಿದ ಅವರು, ಅವುಗಳಿಂದ ತಮಗೆ ಸರಿಯಾದ ಸಹಕಾರ ಸಿಕ್ಕಿಲ್ಲ ಎಂದರು.

ಹುಬ್ಬಳ್ಳಿ, ಶಿರಸಿಗಳಲ್ಲಿ ನನಗೆ ಪೂರ್ವನಿಗದಿತ ಕಾರ್ಯಕ್ರಮಗಳಿದ್ದವು. ಹೀಗಾಗಿ ನನಗೆ ಅಂತ್ಯಕ್ರಿಯೆಯಲ್ಲಿ ಬರಲು ಸಾಧ್ಯವಾಗಿರಲಿಲ್ಲ. ಇದನ್ನು ನಾನು ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ್ದೆ. ಆದರೆ ನಾನು ಹೇಳಿದ್ದು ಸರಿಯಾಗಿ ವರದಿಯಾಗಿಲ್ಲ ಎಂದು ಪೇಜಾವರಶ್ರೀ ಬೇಸರ ವ್ಯಕ್ತಪಡಿಸಿದರು.

ಪ್ರೀತಿ, ವಿಶ್ವಾಸವಿತ್ತು: ತಮಗೆ ಶಿರೂರುಶ್ರೀಗಳ ಮೇಲೆ ಮೊದಲಿನಿಂದಲೂ ಪ್ರೀತಿ ಇತ್ತು. ತಮ್ಮ ಪರ್ಯಾಯ ಕಾಲದಲ್ಲಿ ಅವರಿಗೆ ದೇವರ ಪೂಜೆಗೆ ಅವಕಾಶ ನೀಡಿರಲಿಲ್ಲ. ಇದರಿಂದ ಅವರಿಗೆ ನನ್ನ ಮೇಲೆ ಅಸಮಧಾನವಿತ್ತು. ನಿಮ್ಮ ಮೇಲೆ ನಮಗೆ ವಿಶ್ವಾಸವಿದೆ. ಆದರೆ ಮಠದ ದೇವರಿಗೆ (ಶ್ರೀಕೃಷ್ಣ ಮುಖ್ಯಪ್ರಾಣ) ಪೂಜೆ ಬೇಡ ಎಂದಿದ್ದೆ. ಅವರ ಪರ್ಯಾಯ ಸಮಯದಲ್ಲೂ (2010-12) ಪೂಜೆಗೆ ಹೋಗಿದ್ದೆ. ಆದರೆ ನನ್ನ ಪರ್ಯಾಯಾವಧಿಯಲ್ಲಿ ಅವರಿಗೆ ದೇವರ ಪೂಜೆಗೆ ಅವಕಾಶ ನೀಡಿಲ್ಲ ಎಂದರು.

ಅವರು ಇತ್ತೀಚೆಗೆ ಹಲವು ಸಂದರ್ಭಗಳಲ್ಲಿ ತಮಗೆ ಮಕ್ಕಳಿರುವುದನ್ನು ಒಪ್ಪಿಕೊಂಡಿದ್ದರು. ಶೃಂಗೇರಿ ಮಠದಲ್ಲಿ ಒಪ್ಪಿಕೊಂಡಂತೆ ಮಕ್ಕಳಿದ್ದರೆ ಅಂಥವರಿಗೆ ಸ್ವಾಮೀಜಿಯಾಗುವ ಅರ್ಹತೆ ಕಳೆದುಕೊಳ್ಳುತ್ತಾರೆ. ಶಿರೂರುಶ್ರೀಗಳು ಮಕ್ಕಳಿದ್ದಾರೆಂದು ಒಪ್ಪಿಕೊಂಡಿರುವುದು ಸನ್ಯಾಸಧರ್ಮಕ್ಕೆ ವಿರುದ್ಧವಾದುದರಿಂದ ಅವರಿಗೆ ನಾನು ದೇವರ ಪೂಜೆಗೆ ಅವಕಾಶ ನೀಡಿರಲಿಲ್ಲ ಎಂದರು.

ಒಳ್ಳೆಯ ಗುಣಗಳೂ ಇದ್ದವು: ಶಿರೂರುಶ್ರೀಗಳಿಗೆ ಅನೇಕ ಒಳ್ಳೆಯ ಗುಣಗಳಿದ್ದವು. ಅವರು ಕೇವಲ ಬ್ರಾಹ್ಮಣರು ಮಾತ್ರವಲ್ಲದೇ ಎಲ್ಲಾ ಜಾತಿ-ಧರ್ಮದವರೊಂದಿಗೂ ಮುಕ್ತವಾಗಿ ಬೆರೆತು ಸಮಾನತೆಯನ್ನು ತೋರುತಿದ್ದರು. ಎಲ್ಲರೊಂದಿಗೆ ಸಂಪರ್ಕ ಹೊಂದಿ ಜನಪ್ರಿಯರಾಗಿದ್ದರು. ಅನೇಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುತಿದ್ದರು. ವಿವಿಧ ಕಲೆ, ಸಂಸ್ಕೃತಿಯಲ್ಲಿ ಅಪಾರ ಆಸಕ್ತಿ ಹೊಂದಿದ್ದರು. ಸ್ವತಹ ಕಲಾವಿದನಾಗಿ ಉಳಿದ ಕಲಾವಿದರಿಗೆ ಕಲೆಗೆ ಪ್ರೋತ್ಸಾಹವನ್ನೂ ನೀಡುತಿದ್ದರು. ವಿದ್ಯಾರ್ಥಿಗಳಿಗೆ ಉದಾರವಾಗಿ ಸಹಾಯ ಮಾಡುತಿದ್ದರು. ಅವರು ಕಳೆದೆರಡು ಪರ್ಯಾಯ ಗಳನ್ನು ಅತ್ಯಂತ ಉತ್ತಮ ರೀತಿಯಲ್ಲಿ ನಡೆಸಿದ್ದಾರೆ ಎಂದು ಪೇಜಾವರಶ್ರೀ ಹೊಗಳಿದರು.

ಆದರೆ ಮದ್ಯಪಾನ, ಸನ್ಯಾಸ ಧರ್ಮಕ್ಕೆ ವಿರುದ್ಧವಾದ ಮಹಿಳೆಯರ ಸಂಪರ್ಕ ಅವರಲ್ಲಿದ್ದ ದೋಷಗಳಾಗಿದ್ದವು. ಪುಂಡಾಟಿಕೆಯೂ ಅವರಲ್ಲಿತ್ತು. ಈ ಬಗ್ಗೆ ಅವರು ಅನೇಕ ಸಲ ತಮ್ಮ ಬಳಿ ತಪ್ಪೊಪ್ಪಿಕೊಂಡಿದ್ದರು. ಆದರೆ ತಪ್ಪುಗಳನ್ನು ತಿದ್ದಿಕೊಂಡಿರಲಿಲ್ಲ ಎಂದರು.

ಮಠಾಧೀಶರ ವಿರೋಧ: ಶಿರೂರು ಮಠದ ಪಟ್ಟದ ದೇವರನ್ನು ಕೊಡಬಾರದೆಂದು ನಾನು ಹೇಳಿರಲಿಲ್ಲ. ನಿಜವಾಗಿಯೂ ಆ ನಿರ್ಧಾರ ತೆಗೆದುಕೊಂಡ ಸಭೆಯಲ್ಲಿ ನಾನು ಉಪಸ್ಥಿತನಿರಲೂ ಇಲ್ಲ. ಉಳಿದ ಸ್ವಾಮೀಜಿಗಳು ಈ ನಿರ್ಧಾರವನ್ನು ತೆಗೆದುಕೊಂಡಿದ್ದರು. ಅಷ್ಟ ಮಠಾಧೀಶರಿಗೆ ಮಕ್ಕಳಿದ್ದಾರೆ ಎಂದು ಅವರು ನೀಡಿದ ಹೇಳಿಕೆಯಿಂದ ಉಳಿದ ಮಠಾಧೀಶರಿಗೆ ನೋವಾಗಿತ್ತು ಎಂದು ಪೇಜಾವರಶ್ರೀ ನುಡಿದರು.

ಶಿರೂರುಶ್ರೀಗಳು ತಾವೇ ತಮಗೆ ಮಕ್ಕಳಿದ್ದಾರೆ ಎಂದು ಒಪ್ಪಿಕೊಂಡ ಮೇಲೆ ಅವರನ್ನು ಸನ್ಯಾಸಿ ಎಂದು ಒಪ್ಪಲು ಸಾಧ್ಯವಿಲ್ಲ ಎಂಬುದು ಉಳಿದ ಮಠಾಧೀಶರ ನಿಲುವಾಗಿತ್ತು. ಅವರಿಗೆ ಪಟ್ಟದ ದೇವರನ್ನು ನೀಡಲು ಶಿಷ್ಯ ಸ್ವೀಕಾರ ಮಾಡಬೇಕೆಂಬುದು ಅವರ ಆಗ್ರಹವಾಗಿತ್ತು ಎಂದರು.

ನನ್ನ ಮೇಲೂ ಆರೋಪ ಮಾಡಲಾಗಿತ್ತು: ಸ್ವಾಮೀಜಿಗಳಾರೂ ವಿಷ ಹಾಕಲು ಸಾಧ್ಯವಿಲ್ಲ. ಹಿಂದೆಲ್ಲಾ ಹಲವು ಸ್ವಾಮೀಜಿಗಳ ಮೇಲೆ ಆರೋಪ ಬಂದಿರಬಹುದು. ಆರೋಪ ಎಲ್ಲರ ಮೇಲೂ ಬರುತ್ತದೆ. ನನ್ನ ಮೇಲೂ ಆರೋಪ ಮಾಡಲಾಗಿತ್ತು. ತಾರುಣ್ಯದಲ್ಲಿ ನನಗೆ ಮಹಿಳೆಯರ ಸಂಪರ್ಕ ಇತ್ತು. ನನಗೆ ಮಕ್ಕಳಿದ್ದಾರೆ ಎಂದು ಒಬ್ಬರು ಹೇಳಿದ್ದರು. ಈ ಬಗ್ಗೆ 10,000 ಕರಪತ್ರ ಮಾಡಿ ಹಂಚುವುದಾಗಿಯೂ ಬೆದರಿಸಿದ್ದರು. ಆದರೆ ಆರೋಪ ಮಾಡಿದಾಕ್ಷಣ ಅವೆಲ್ಲಾ ಸತ್ಯವಾಗುತ್ತಾ ಎಂದರು.

ಶಿರೂರುಶ್ರೀಗಳಿಗೆ ನಾವು ಸಾಕಷ್ಟು ಬುದ್ಧಿ ಮಾತು ಹೇಳಿದ್ದೆವು. ದುಶ್ಚಟ ಬಿಡುವಂತೆ ಮುಖ:ತ ತಿಳಿಸಿದ್ದೆ. ಶಿರೂರುಶ್ರೀಗಳು ಹೇಗೆ ಕಿರಿಯ ಯತಿಗಳಿಗೆ ಮಾದರಿಯಾಗುತ್ತಾರೆ ಎಂಬುದು ಉಳಿದ ಮಠಾಧೀಶರ ವಾದವಾಗಿತ್ತು. ಸನ್ಯಾಸ ಧರ್ಮ ಪಾಲಿಸದ ಶಿರೂರುಶ್ರೀ ಅಷ್ಟ ಮಠಾಧೀಶರಲ್ಲ ಎಂದು ಅವರು ಬದುಕಿದ್ದಾಗಲೇ ಹೇಳಿದ್ದೆವು. ಹೀಗಾಗಿ ನಿನ್ನೆ ಮಠದಲ್ಲಿ ಉಳಿದ ಸ್ವಾಮೀಜಿಗಳು ಅವರ ಅಂತಿಮ ದರ್ಶನಕ್ಕೆ ಹೋಗಿಲ್ಲ. ಪರ್ಯಾಯ ಪಲಿಮಾರು ಶ್ರೀಗಳು ಕನಕಗೋಪುರದ ಬಳಿ ಭಾಗವಹಿಸಿದ್ದರು. ಮೂವರು ಸ್ವಾಮೀಜಿಗಳು ಬಳಿಕ ಶಿರೂರು ಮೂಲಮಠಕ್ಕೆ ಹೋಗಿದ್ದರು ಎಂದು ಪೇಜಾವರ ಶ್ರೀ ನುಡಿದರು.

ಲಿಖಿತ ಸಂವಿಧಾನ: ಶ್ರೀಕೃಷ್ಣ ಮಠಕ್ಕೆ ಲಿಖಿತ ಸಂವಿಧಾನ ರಚಿಸುವ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ನಮ್ಮ ಹಿಂದಿನ ಶಿಷ್ಯರಾಗಿದ್ದ ವಿಶ್ವವಿಜೇತರು ಕರಡು ಪ್ರತಿಯೊಂದನ್ನು ರಚಿಸಿ ನೀಡಿದ್ದಾರೆ. ಈ ಬಗ್ಗೆ ಅಷ್ಟ ಮಠದ ಸ್ವಾಮೀಜಿಗಳು ಸಭೆಗಳನ್ನು ನಡೆಸಿದ್ದೇವೆ. ಆದರೆ ನಮ್ಮೊಳಗೆ ಹಲವು ವಿಷಯಗಳಲ್ಲಿ ಸರ್ವಾನುಮತ ಮೂಡಿಲ್ಲ. ಎಲ್ಲರೂ ಒಪ್ಪದೇ, ಭಿನ್ನಾಭಿಪ್ರಾಯ ತಲೆದೋರಿ ಯಾವುದೇ ಪ್ರಗತಿಯಾಗಿಲ್ಲ.

ಸ್ವಾಮೀಜಿಗಳಿಗೆ ಮನವಿ
ಶಿರೂರುಶ್ರೀಗಳ ಸಾವಿನ ಕುರಿತಂತೆ ಯಾವುದೇ ರೀತಿಯ ವಿವಾದಾತ್ಮಕ ಹೇಳಿಕೆಗಳನ್ನು ನೀಡದೇ ಸಂಯಮ ವಹಿಸುವಂತೆ ವಿಶ್ವವಿಜೇತ, ಕೇಮಾರುಶ್ರೀಗಳು ಹಾಗೂ ಸಂತೋಷ ಗುರೂಜಿ ಅವರಲ್ಲಿ ಮನವಿ ಮಾಡುವುದಾಗಿ ಪೇಜಾವರ ಶ್ರೀ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News