ಶೃಂಗ ಸಮ್ಮೇಳನದ ಯಶಸ್ಸು ಕೆಡಿಸುತ್ತಿರುವ ಅಮೆರಿಕದ ಶಕ್ತಿಗಳು: ರಶ್ಯ ಅಧ್ಯಕ್ಷ ಪುಟಿನ್ ಆರೋಪ

Update: 2018-07-20 15:20 GMT

ವಾಶಿಂಗ್ಟನ್, ಜು. 20: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜೊತೆಗಿನ ತನ್ನ ಪ್ರಥಮ ಶೃಂಗಸಭೆಯ ಯಶಸ್ಸನ್ನು ಕೆಡಿಸಲು ಅಮೆರಿಕದಲ್ಲಿರುವ ಕೆಲವು ಶಕ್ತಿಗಳು ಯತ್ನಿಸುತ್ತಿವೆ ಎಂದು ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಗುರುವಾರ ಆರೋಪಿಸಿದ್ದಾರೆ.

ಅದೇ ವೇಳೆ, ಪುಟಿನ್ ಜೊತೆ ಇನ್ನೊಂದು ಶೃಂಸ ಸಮ್ಮೇಳನವನ್ನು ತಾನು ಎದುರು ನೋಡುತ್ತಿದ್ದೇನೆ ಎಂದು ಟ್ರಂಪ್ ಹೇಳಿದ್ದಾರೆ.

ಫಿನ್‌ಲ್ಯಾಂಡ್ ರಾಜಧಾನಿ ಹೆಲ್ಸಿಂಕಿಯಲ್ಲಿ ಟ್ರಂಪ್ ಜೊತೆ ಸೋಮವಾರ ನಡೆದ ತನ್ನ ಶೃಂಗ ಸಮ್ಮೇಳನ ಯಶಸ್ವಿಯಾಗಿದೆ ಎಂದು ಮಾಸ್ಕೊದಲ್ಲಿ ಜಮಾಯಿಸಿದ ವಿಶ್ವದಾದ್ಯಂತ ನಿಯೋಜನೆಯಾಗಿರುವ ರಶ್ಯ ರಾಜತಾಂತ್ರಿಕರನ್ನು ಉದ್ದೇಶಿಸಿ ಮಾತನಾಡಿದ ಪುಟಿನ್ ಹೇಳಿದರು.

‘‘ಅದು ಒಟ್ಟಾರೆಯಾಗಿ ಯಶಸ್ವಿಯಾಯಿತು ಹಾಗೂ ಹಲವು ಉಪಯುಕ್ತ ಒಪ್ಪಂದಗಳಿಗೆ ಕಾರಣವಾಯಿತು. ಭವಿಷ್ಯದಲ್ಲಿ ಇದು ಯಾವ ರೂಪವನ್ನು ಪಡೆಯುತ್ತದೆಯೋ ನೋಡಬೇಕು’’ ಎಂದು ತಿಳಿಸಿದರು.

ಆದಾಗ್ಯೂ, ಯಾವ ಒಪ್ಪಂದಗಳಿಗೆ ಸಹಿ ಹಾಕಲಾಯಿತು ಎಂಬುದನ್ನು ತಿಳಿಸಲು ಅವರು ನಿರಾಕರಿಸಿದರು.

ಆದರೆ, ಶೃಂಗಸಭೆ ಮಾಡಿದ ಸಾಧನೆಗಳನ್ನು ಬುಡಮೇಲುಗೊಳಿಸಲು ಅಮೆರಿಕದ ಬಲಿಷ್ಠ ಶಕ್ತಿಗಳು ಪ್ರಯತ್ನಿಸುತ್ತಿವೆ ಎಂದು ಅವರು ಆರೋಪಿಸಿದರು.

‘‘ಅಮೆರಿಕದಲ್ಲಿ ಕೆಲವು ಶಕ್ತಿಗಳಿದ್ದು, ರಶ್ಯ-ಅಮೆರಿಕ ಬಾಂಧವ್ಯವನ್ನು ನಾಶಪಡಿಸಲು ಅವು ಮುಂದಾಗಿರುವುದನ್ನು ನಾವು ನೋಡುತ್ತಿದ್ದೇವೆ. ಅಮೆರಿಕದ ಆಂತರಿಕ ರಾಜಕೀಯ ಸಮರದಲ್ಲಿ ತಮ್ಮ ಮಹತ್ವಾಕಾಂಕ್ಷೆಗಳನ್ನು ನೆರವೇರಿಸಿಕೊಳ್ಳುವುದಕ್ಕಾಗಿ ಅವರು ಹೀಗೆ ಮಾಡುತ್ತಿದ್ದಾರೆ’’ ಎಂದರು.

2ನೇ ಶೃಂಗ ಸಮ್ಮೇಳನವನ್ನು ಎದುರು ನೋಡುತ್ತಿದ್ದೇನೆ: ಟ್ರಂಪ್

ಗುರುವಾರ ರಾತ್ರಿ ಟ್ವೀಟ್ ಮಾಡಿದ ಟ್ರಂಪ್ ರಶ್ಯ ಜೊತೆಗಿನ ಶೃಂಗ ಸಭೆಯನ್ನು ಸಮರ್ಥಿಸಿಕೊಂಡಿದ್ದಾರೆ.

 ‘‘ಜನರ ನಿಜವಾದ ಶತ್ರುಗಳಾಗಿರುವ ‘ಫೇಕ್‌ನ್ಯೂಸ್’ ಮಾಧ್ಯಮಗಳನ್ನು ಹೊರತುಪಡಿಸಿದರೆ, ರಶ್ಯದೊಂದಿಗಿನ ಶೃಂಗ ಸಮ್ಮೇಳನ ಅಭೂತಪೂರ್ವ ಯಶಸ್ಸಾಗಿದೆ. ನಾನು ಪುಟಿನ್ ಜೊತೆ ಇನ್ನೊಂದು ಶೃಂಗ ಸಮ್ಮೇಳನವನ್ನು ಎದುರು ನೋಡುತ್ತಿದ್ದೇನೆ. ಅಲ್ಲಿ ಮೊದಲ ಸಮ್ಮೇಳನದಲ್ಲಿ ಚರ್ಚಿಸಲಾದ ವಿಷಯಗಳನ್ನು ಜಾರಿಗೊಳಿಸಬಹುದಾಗಿದೆ’’ ಎಂದು ಟ್ರಂಪ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News