ಪೊಳಲಿ ಕ್ಯಾಂಡಲ್ ಸಂತು ಕೊಲೆ ಪ್ರಕರಣ : ಇಬ್ಬರು ಆರೋಪಿಗಳಿಗೆ ಜೀವಾವಧಿ ಶಿಕ್ಷೆ

Update: 2018-07-20 15:26 GMT
ಇಕ್ಬಾಲ್, ಫಾರೂಕ್

ಮಂಗಳೂರು, ಜು.20: ಪೊಳಲಿ ಬಡಕಬೈಲು ನಿವಾಸಿ ಕ್ಯಾಂಡಲ್ ಸಂತು ಯಾನೆ ಸಂತೋಷ್ ಕೊಲೆ ಪ್ರಕರಣದ ಇಬ್ಬರು ಆರೋಪಿಗಳಿಗೆ 4ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಜೀವಾವಧಿ ಶಿಕ್ಷೆ ಮತ್ತು ತಲಾ 1ಲಕ್ಷ ರೂ. ದಂಡ ವಿಧಿಸಿ ಮಹತ್ವದ ತೀರ್ಪು ನೀಡಿದೆ.

ನಗರದ ಬಂದರು ಅನ್ಸಾರ್ ರಸ್ತೆ ನಿವಾಸಿ ಇಕ್ಬಾಲ್(39) ಹಾಗೂ ಕಾರ್ಕಳ ಕುಕ್ಕುಂದೂರು ಬಂಗ್ಲೆಗುಡ್ಡೆ ನಿವಾಸಿ ಫಾರೂಕ್ (30) ಶಿಕ್ಷೆಗೊಳಗಾದ ಆರೋಪಿಗಳು. ಪರಿಹಾರದ 2 ಲಕ್ಷ ರೂ. ಹಣದಲ್ಲಿ 1.80 ಲಕ್ಷ ರೂ. ಕೊಲೆಯಾದ ಕ್ಯಾಂಡಲ್ ಸಂತುವಿನ ಪೋಷಕರಿಗೆ ನೀಡಬೇಕು. 20ಸಾವಿರ ರೂ. ಸರಕಾರಕ್ಕೆ ಸಲ್ಲಿಕೆಯಾಗಬೇಕೆಂದು ತೀರ್ಪಿನಲ್ಲಿ ತಿಳಿಸಿದೆ.

ಈ ಕೊಲೆ ಪ್ರಕರಣದಲ್ಲಿ ಒಟ್ಟು 22ಮಂದಿ ಆರೋಪಿಗಳಿದ್ದು, 13ಮಂದಿ ಖುಲಾಸೆಗೊಂಡು, 3 ಮಂದಿ ತಲೆ ಮರೆಸಿಕೊಂಡಿದ್ದಾರೆ. 4 ಮಂದಿ ವಿವಿಧ ಕಾರಣಗಳಲ್ಲಿ ಮೃತರಾಗಿದ್ದಾರೆ. ಶಿಕ್ಷೆಗೊಳಗಾದ ಇಕ್ಬಾಲ್ ಪ್ರಕರಣದ ಪ್ರಮುಖ ಆರೋಪಿ. ಫಾರೂಕ್ 6ನೇ ಆರೋಪಿಗಳಾಗಿದ್ದರು.

ಪ್ರಕರಣ ವಿವರ: 2009 ಫೆ.18ರಂದು ಬೆಳಗ್ಗೆ 9:30ರ ವೇಳೆಗೆ ಕ್ಯಾಂಡಲ್ ಸಂತು ಬಂಟ್ವಾಳ ತಾಲೂಕಿನ ಬಡಕಬೈಲು ಮೋರಿಯಲ್ಲಿ ಕುಳಿತುಕೊಂಡಿದ್ದ ವೇಳೆ ಸ್ಕಾರ್ಪಿಯೋ ಹಾಗೂ ಬೈಕ್‌ನಲ್ಲಿ ಬಂದ ದುಷ್ಕರ್ಮಿಗಳ ತಂಡ ತಲವಾರ್ ದಾಳಿ ಮಾಡಿತ್ತು. ವಾಹನಗಳು ಬಂದು ನಿಲ್ಲುತ್ತಿದ್ದಂತೆ ಗಮನಿಸಿದ ಕ್ಯಾಂಡಲ್ ಸಂತು ತನಗೆ ಬಂದ ಅಪಾಯವನ್ನು ಅರಿತು ಅಲ್ಲಿಂದ ಓಡಲು ಪ್ರಯತ್ನಿಸಿದ್ದ. ಆದರೆ ಸಂತುವಿನ ಕಾಲು ಮತ್ತು ಕೈ ಮೊದಲೇ ಘಟನೆಯೊಂದರಲ್ಲಿ ಗಾಯಗೊಂಡ ಕಾರಣ ಓಡಲು ಸಾಧ್ಯವಾಗಲಿಲ್ಲ. ಈ ಸಂದರ್ಭ ಆರೋಪಿಗಳು ಬೆನ್ನಟ್ಟಿ ಗಂಭೀರ ಹಲ್ಲೆ ಮಾಡಿ ಪರಾರಿಯಾಗಿದ್ದರು. ಸ್ಥಳೀಯರು ಕೂಡಲೇ ಸಂತೋಷ್‌ನನ್ನು ಆಸ್ಪತ್ರೆಗೆ ಸಾಗಿಸಿದರಾದರೂ ಯಾವುದೇ ಪ್ರಯೋಜನವಾಗದೆ ಮೃತಪಟ್ಟಿದ್ದ.

ಕೊಲೆಗೆ ವಿದೇಶದಲ್ಲಿ ಸ್ಕೆಚ್: ವಿದೇಶದಲ್ಲಿದ್ದುಕೊಂಡೇ ಕ್ಯಾಂಡಲ್ ಸಂತು ಕೊಲೆಗೆ ಸ್ಕೆಚ್ ಹಾಕಿ, ಆರೋಪಿಗಳಿಗೆ ಸುಪಾರಿ ನೀಡಿದ್ದ ಮಾಡೂರು ಇಸುಬು ಈ ಪ್ರಕರಣದ ಆರೋಪಿಯಾಗಿದ್ದು, 2015ರಲ್ಲಿ ನಗರ ಜೈಲ್‌ನಲ್ಲಿ ಕೊಲೆಯಾಗಿದ್ದ. ಆರೋಪಿಗಳ ಬಂಧನ ವೇಳೆ 2 ಲಕ್ಷ ರೂ. ಸುಪಾರಿ ಹವಾಲ ಹಣವನ್ನು ಮುಟ್ಟುಗೋಲು ಹಾಕಲಾಗಿತ್ತು. ಸಂತು ಕೊಲೆ ಪ್ರಕರಣದ ಇನ್ನುಳಿದ ಆರೋಪಿಗಳಾದ ಮಾಡೂರು ಇಸ್ಮಾಯೀಲ್ ಹೃದಯಾಘಾತಗೊಂಡು ಸಾವನ್ನಪ್ಪಿದ್ದರೆ, ಕುಕ್ಕುಂದೂರು ನಿವಾಸಿ ಸುಲೈಮಾನ್ ಯಾನೆ ಖಾದರ್ ಕಾರ್ಕಳದಲ್ಲಿ ಕೊಲೆಯಾಗಿದ್ದ.

ಕೊಲೆಗೆ ಕಾರಣ ಏನು?: 2006ರ ಎ.9ರಂದು ಬಂಟ್ವಾಳ ತಾಲೂಕು ಕರಿಯಂಗಳ ಗ್ರಾಮದ ಪೊಳಲಿ ದ್ವಾರದ ಬಳಿ ಗುಜರಿ ಅಂಗಡಿ ಹೊಂದಿದ್ದ ಮಲ್ಲೂರು ಹಮೀದ್ ಎಂಬಾತನನ್ನು ಕೊಲೆಗೈದ ಪ್ರಕರಣ ಮತ್ತು 2000 ಡಿ.23ರಂದು ಮಂಗಳೂರು ಗುರುಪುರ ಕೈಕಂಬದ ರಫೀಕ್ ಎಂಬವರನ್ನು ಕೊಲೆಗೈದ ಪ್ರಕರಣದಲ್ಲಿ ಆರೋಪಿಯಾಗಿದ್ದ. ಈ ಸೇಡಿನಿಂದ ಮಾಡೂರು ಇಸುಬು ಕ್ಯಾಂಡಲ್ ಸಂತುವಿನ ಕೊಲೆಗೆ ಸ್ಕೆಚ್ ರೂಪಿಸಿದ್ದ ಎನ್ನುವುದನ್ನು ಆರೋಪಿಗಳು ವಿಚಾರಣೆ ವೇಳೆ ತಿಳಿಸಿದ್ದರು.

ಕ್ಯಾಂಡಲ್ ಸಂತು ಪ್ರಕರಣದ ವಿಚಾರಣೆ ಕೈಗೆತ್ತಿಕೊಂಡ 4ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶರಾದ ನೇರಳೆ ವೀರಭದ್ರಯ್ಯ ಭವಾನಿ 25 ಮಂದಿ ಸಾಕ್ಷಿದಾರರನ್ನು ವಿಚಾರಣೆ ನಡೆಸಿ, ಶಿಕ್ಷೆ ಪ್ರಕಟಿಸಿದ್ದಾರೆ. ಬಂಟ್ವಾಳ ಗ್ರಾಮಾಂತರ ಠಾಣಾ ಹಿಂದಿನ ಇನ್‌ಸ್ಪೆಕ್ಟರ್ ನಂಜುಂಡೇಗೌಡ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದ್ದರು. ಸರಕಾರಿ ಅಭಿಯೋಜಕ ಹರಿಶ್ಚಂದ್ರ ಉದಿಯಾವರ ಸರಕಾರದ ಪರವಾಗಿ ವಾದಿಸಿದ್ದರು.

ಎಸ್ಪಿ ರವಿಕಾಂತೇಗೌಡ ಪ್ರಶಂಸೆ
ಪ್ರಕರಣದ ತನಿಖೆಯನ್ನು ನಡೆಸಿದ ಆಗಿನ ಬಂಟ್ವಾಳ ಗ್ರಾಮಾಂತರ ವೃತ್ತ ನಿರೀಕ್ಷಕ ನಂಜುಂಡೇಗೌಡ ಹಾಗೂ ಪೊಲೀಸ್ ಸಿಬ್ಬಂದಿಗೆ ಪೊಲೀಸ್ ಅಧೀಕ್ಷಕ ಬಿ.ಆರ್. ರವಿಕಾಂತೇಗೌಡ ಪ್ರಶಂಶಿಸಿದ್ದು, ಸೂಕ್ತ ಬಹುಮಾನವನ್ನು ಘೋಷಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News