ಉಳ್ಳಾಲ ದರ್ಗಾಕ್ಕೆ ಸಚಿವ ಝಮೀರ್ ಅಹ್ಮದ್‍ ಭೇಟಿ

Update: 2018-07-20 17:27 GMT

ಉಳ್ಳಾಲ,ಜು.20: ಉಳ್ಳಾಲ ದರ್ಗಾ ನನಗೆ ಹೊಸತೇನಲ್ಲ. ಕಳೆದ 35 ವರ್ಷಗಳಿಂದ ನಾನು ಕುಟುಂಬ ಸಮೇತವಾಗಿ ದರ್ಗಾಕ್ಕೆ ಪ್ರಾರ್ಥನೆಗೆ ಬರುತ್ತಿದ್ದೆವು. ಬನಾತ್ ಕಾಲೇಜಿಗೆ ಸರಕಾರ ಮಂಜೂರು ಮಾಡಲಾಗಿರುವ 2ಕೋಟಿ ರೂ. ಹಣವನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲಾಗುವುದು ಅಲ್ಲದೇ ಭಕ್ತಾದಿಗಳಿಗೆ ಅನ್ನಾಹಾರ ಒದಗಿಸುವ ಪಾಕಶಾಲೆಗೆ ನನ್ನ ವೈಯ್ಯಕ್ತಿಕವಾಗಿ 10 ಲಕ್ಷ ರೂ ನೀಡುತ್ತೇನೆ ಎಂದು ವಕ್ಫ್ ಖಾತೆ ಸಚಿವ ಝಮೀರ್ ಅಹ್ಮದ್ ಹೇಳಿದರು. 

ಅವರು ಶುಕ್ರವಾರ ಉಳ್ಳಾಲ ದರ್ಗಾಕ್ಕೆ ಭೇಟಿ ನೀಡಿದ ಸಂದರ್ಭ ಪಾಕ ಶಾಲೆಗೆ ಶಂಕು ಸ್ಥಾಪನೆ ನೆರವೇರಿಸಿ  ಮಾತನಾಡಿದರು.

ಉಳ್ಳಾಲ ದರ್ಗಾದಲ್ಲಿ ಭಕ್ತಾದಿಗಳ ಸಂಖ್ಯೆ ಬಹಳಷ್ಟಿದೆ. ಭಕ್ತಾದಿಗಳಿಗೆ ಅನ್ನಾಹಾರ ನೀಡುವುದು ಉತ್ತಮ ಯೋಜನೆ.  ಪಾಕ ಶಾಲೆ ನಿರ್ಮಾಣಕ್ಕೆ ಸರಕಾರದಿಂದ ಸಿಗುವ ಸವಲತ್ತುಗಳನ್ನು ಸಚಿವ ಖಾದರ್ ಜತೆ ಚರ್ಚಿಸಿ ಅನುದಾನ ಬಿಡುಗಡೆ ಮಾಡುವ ವ್ಯವಸ್ಥೆಮಾಡುತ್ತೇನೆ ಎಂದು ಭರವಸೆ ನೀಡಿದರು.

ಈ ಸಂದರ್ಭದಲ್ಲಿ ವಕ್ಫ್ ಸಚಿವರಾದ ಝಮೀರ್ ಅಹ್ಮದ್‍ರವರನ್ನು ಅಧ್ಯಕ್ಷರಾದ ಹಾಜಿ ಅಬ್ದುಲ್ ರಶೀದ್ ರವರು ಸ್ವಾಗತಿಸಿ ಶಾಲು ಹೊದಿಸಿ ಸನ್ಮಾನಿಸಿದರು. ದ.ಕ ಜಿಲ್ಲಾ ವಕ್ಫ್ ಅಧ್ಯಕ್ಶರಾದ ಹಾಜಿ ಯು.ಕೆ ಮೋನು ಕನಚೂರು, ದರ್ಗಾ ಪ್ರಧಾನ ಕಾರ್ಯದರ್ಶಿ ಹಾಜಿ ಮುಹಮ್ಮದ್ ತ್ವಾಹ, ಉಪಾಧ್ಯಕ್ಷರಾದ ಯು.ಕೆ ಮೋನು ಇಸ್ಮಾಯೀಲ್, ಬಾವ ಮುಹಮ್ಮದ್, ಅಡಿಟರ್ ಇಲ್ಯಾಸ್ ತೋಟ, ಜತೆ ಕಾರ್ಯದರ್ಶಿಗಳಾದ ನೌಷಾದ್ ಮೇಲಂಗಡಿ, ಆಝಾದ್ ಇಸ್ಮಾಯೀಲ್, ಅರಬಿಕ್ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಅಮೀರ್ ಹಾಜಿ, ಜತೆ ಕಾರ್ಯದರ್ಶಿ  ಆಸಿಫ್ ಅಬ್ದುಲ್ಲ, ಕೋಶಾಧಿಕಾರಿ ಅಬ್ಬಾಸ್ ಹಾಜಿ, ಚಾರಿಟೇಬಲ್ ಟ್ರಸ್ಟ್ ಉಪಾಧ್ಯಕ್ಷರಾದ ಯು.ಕೆ ಇಬ್ರಾಹೀಮ್ ಹಾಜಿ, ಕಾರ್ಯದರ್ಶಿ ಎ.ಕೆ ಮೊಹಿಯದ್ದೀನ್ ಹಾಜಿ, ಕೋಶಾಧಿಕಾರಿ ಜೆ.ಅಬ್ದುಲ್ ಹಮೀದ್, ದರ್ಗಾ ಮತ್ತು ಟ್ರಸ್ಟ್ ಸಮಿತಿ ಸದಸ್ಯರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News