ಶಿರೂರು ಸ್ವಾಮೀಜಿ ಸಾವಿನ ತನಿಖೆ ಆರಂಭ

Update: 2018-07-20 16:51 GMT

ಉಡುಪಿ, ಜು.20: ಶಿರೂರು ಮಠದ ಶ್ರೀಲಕ್ಷ್ಮೀವರತೀರ್ಥ ಶ್ರೀ ನಿಗೂಢ ಸಾವಿನ ಕುರಿತು ಪೊಲೀಸ್ ತನಿಖೆಯನ್ನು ಪ್ರಾರಂಭಿಸಲಾಗಿದೆ ಎಂದು ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ್ ನಿಂಬರ್ಗಿ ತಿಳಿಸಿದ್ದಾರೆ.

ಪೊಲೀಸರ ತನಿಖೆ ಪ್ರಾರಂಭಗೊಂಡಿದೆ. ಜಿಲ್ಲೆಯ ದಕ್ಷ ಅಧಿಕಾರಿಗಳು ತನಿಖೆ ನಡೆಸುತಿದ್ದಾರೆ ಎಂದು ಹೇಳಿದ ನಿಂಬರ್ಗಿ, ಈ ಕುರಿತು ಹೆಚ್ಚಿನ ಯಾವುದೇ ಮಾಹಿತಿ ಹಂಚಿಕೊಳ್ಳಲು ನಿರಾಕರಿಸಿದರು.

ತನಿಖೆ ನಡೆಸುತ್ತಿರುವ ತಂಡದ ಕುರಿತು, ಯಾರ್ಯಾರ ವಿಚಾರಣೆ ನಡೆಸಿದ್ದಾರೆ ಎಂಬ ಕುರಿತು ಯಾವುದೇ ಮಾಹಿತಿ ನೀಡಲು ಅವರು ನಿರಾಕರಿಸಿದರು. ತನಿಖೆ ಈಗಷ್ಟೇ ಪ್ರಾರಂಭಗೊಂಡಿದ್ದು, ಒಂದು ಹಂತದ ತನಿಖೆ ಮುಗಿದ ಬಳಿಕ ವಿವರಗಳನ್ನು ನೀಡುವುದಾಗಿ ನುಡಿದರು.

ಶಿರೂರು ಮೂಲ ಮಠಕ್ಕೆ ಯಾರಿಗೂ ಪ್ರವೇಶ ನೀಡದ ಕುರಿತು ಪ್ರಶ್ನಿಸಿದಾಗ, ಅಲ್ಲಿ ಪೂಜೆಗೆ ಸಂಬಂಧಿಸಿದವರಿಗೆ ಹೋಗಿ-ಬರಲು ಅವಕಾಶ ನೀಡಲಾಗುತ್ತಿದೆ ಎಂದರು. ಪೋಸ್ಟ್‌ಮಾರ್ಟಂ ವರದಿಯ ಕುರಿತು ಕೇಳಿದಾಗ, ಇನ್ನೂ ಸಿಕ್ಕಿಲ್ಲ. ಯಾವಾಗ ಸಿಗುತ್ತದೆ ಎಂಬುದನ್ನು ವೈದ್ಯರು ಹೇಳಬೇಕು ಎಂದರು.

ಬಿಕೋ ಎನ್ನುತ್ತಿರುವ ಮೂಲಮಠ: ಶಿರೂರು ಶ್ರೀಗಳು ಬದುಕಿದ್ದಾಗ, ತಮ್ಮ ಹೆಚ್ಚಿನ ಸಮಯವನ್ನು ಮೂಲ ಮಠದಲ್ಲೇ ಕಳೆಯುತಿದ್ದುದರಿಂದ ಸದಾ ಚಟುವಟಿಕೆಯಿಂದ ಕೂಡಿದ್ದ ಶಿರೂರಿನ ಮೂಲಮಠ ಈಗ ಜನರೇ ಇಲ್ಲದೇ ಬಿಕೋ ಎನ್ನುತ್ತಿದೆ. ಶಿರೂರು ಮಠದ ಪಕ್ಕದಲ್ಲೇ ಇರುವ ಹಟ್ಟಿಯಲ್ಲಿದ್ದ ಹತ್ತಾರು ದನಕರುಗಳು ಮಠದ ಪ್ರವೇಶದ್ವಾರದ ಮುಂದೆ ಯಜಮಾನನಿಗೆ ಕಾಯುವಂತೆ ನಿಂತಿದ್ದವು.

ಸ್ಥಳದಲ್ಲಿ ಪೊಲೀಸರ ತುಕಡಿಯೊಂದು ಮೊಕ್ಕಾಂ ಹೂಡಿದ್ದು, ಯಾರಿಗೂ ಮಠದೊಳಗೆ ಪ್ರವೇಶಕ್ಕೆ ಅವಕಾಶ ನೀಡುತ್ತಿಲ್ಲ. ಹಿರಿಯ ಅಧಿಕಾರಿಗಳು ಸೂಚಿಸಿದವರಿಗೆ ಮಾತ್ರದ ಮಠದ ಒಳಗೆ ಪ್ರವೇಶಿಸಲು ಅವಕಾಶ ನೀಡಲಾಗುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News