ಮಂಗಳೂರು; ಐಶಾರಾಮಿ ಕಾರುಗಳ ಲೋಗೋ ಕಳವು: ಐವರ ಬಂಧನ

Update: 2018-07-20 18:00 GMT

ಮಂಗಳೂರು, ಜು.20: ನಗರದ ವಿವಿಧೆಡೆ ಬೈಕ್‌ನಲ್ಲಿ ಬಂದು ಐಶಾರಾಮಿ ಕಾರುಗಳ ಲೋಗೋ ಮತ್ತು ಅಪಾರ್ಟ್‌ಮೆಂಟ್‌ನ ಸೆಕ್ಯುರಿಟಿಗಳ ಸ್ಮಾರ್ಟ್‌ಫೋನ್ ಕಳವು ಮಾಡುತ್ತಿದ್ದ ಇಬ್ಬರನ್ನು ಹಾಗೂ ಕಳವುಗೈದ ಮೊಬೈಲ್ ಸ್ವೀಕರಿಸಿದ ಮೂವರನ್ನು ಕದ್ರಿ ಪೊಲೀಸರು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಕಳವು ಮಾಡುತ್ತಿದ್ದ ಆರೋಪಿಗಳನ್ನು ಪದವಿನಂಗಡಿಯ ಪಚ್ಚನಾಡಿ ನಿವಾಸಿ ವಿಶಾಲ್ ನಾಯಕ್(18), ಪದವಿನಂಗಡಿ ನಿವಾಸಿ ಅಭಿಷೇಕ್ ಪೂಜಾರಿ(18) ಹಾಗೂ ಕಳವು ಮಾಲು ಸ್ವೀಕರಿಸಿದವರಾದ ತಲಪಾಡಿಯ ಕೆ.ಸಿ.ನಗರ ನಿವಾಸಿ ಅಬ್ದುಲ್ ಸಿನಾನ್(25), ಬಜಾಲ್ ನಿವಾಸಿ ಮುಹಮ್ಮದ್ ಸವಾದ್(26), ಸುರತ್ಕಲ್ ನಿವಾಸಿ ಸದಕ್ ತುಲ್ಲಾ(30) ಎಂಬವರನ್ನು ಬಂಧಿಸಲಾಗಿದೆ.

ಬಂಧಿತರಿಂದ 60 ಸಾವಿರ ರೂ. ಮೌಲ್ಯದ ಆರು ಸ್ಮಾರ್ಟ್‌ಫೋನ್ ಮತ್ತು ಸುಮಾರು 20 ಸಾವಿರ ರೂ. ಮೌಲ್ಯದ ಐಷಾರಾಮಿ ಕಾರಿನ 11 ಲೋಗೋ ಮತ್ತು ಕೃತ್ಯಕ್ಕೆ ಉಪಯೋಗಿಸಿದ 30 ಸಾವಿರ ರೂ. ಮೌಲ್ಯದ ಹೋಂಡಾ ಲಿವೊ ಬೈಕ್ ಸೇರಿದಂತೆ ಒಟ್ಟು ಸುಮಾರು 1,10,000 ರೂ. ಮೌಲ್ಯದ ಸೊತ್ತುಗಳನ್ನು ಸಾಧೀನಪಡಿಸಿಕೊಳ್ಳಲಾಗಿದೆ.

ಬಂಧಿತ ಆರೋಪಿಗಳು ಐಶಾರಾಮಿ ಕಾರುಗಳಾದ ಬಿಎಂಡಬ್ಲೂ, ಜಾಗುವಾರ್, ಆಡಿ ಕಾರುಗಳನ್ನೇ ಗುರುತಿಸಿ ಕೃತ್ಯ ಎಸಗುತ್ತಿದ್ದರು. ಬಳಿಕ ಕಳವುಗೈದ ಲೋಗೋಗಳನ್ನು ಮಾರಾಟ ಮಾಡಲು ಪ್ರಯತ್ನಿಸಿದ್ದರು ಎಂದು ತಿಳಿದುಬಂದಿದೆ.

ಮಂಗಳೂರು ನಗರ ಪೊಲೀಸ್ ಆಯುಕ್ತ ಟಿ.ಆರ್.ಸುರೇಶ್ ಮಾರ್ಗದರ್ಶನದಂತೆ ಡಿಸಿಪಿಗಳಾದ ಹನುಮಂತರಾಯ, ಉಮಾ ಪ್ರಶಾಂತ್ ನಿರ್ದೇಶನದಂತೆ ಕೇಂದ್ರ ವಿಭಾಗದ ಸಹಾಯಕ ಪೊಲೀಸ್ ಆಯುಕ್ತ ಎಂ.ಉದಯ ನಾಯಕ್ ನೇತೃತ್ವದಲ್ಲಿ ಕದ್ರಿ ಪೊಲೀಸ್ ಠಾಣೆಯ ನಿರೀಕ್ಷಕ ಮಾರುತಿ ಜಿ. ನಾಯಕ್, ಪಿಎಸ್ಸೈ ಮಾರುತಿ ಎಚ್.ವಿ., ಸಿಬ್ಬಂದಿ ವೆಂಕಟೇಶ್ ಕುಂಬ್ಲೆ, ಜಯಾನಂದ, ಉಮೇಶ್ ಕೊಟ್ಟಾರಿ, ಗಿರೀಶ್ ಜೋಗಿ, ಅಜಿತ್ ಮ್ಯಾಥ್ಯೂ, ಪ್ರಶಾಂತ್ ಶೆಟ್ಟಿ, ರಾಘವೇಂದ್ರ ಆರೋಪಿಗಳ ಪತ್ತೆ ಕಾರ್ಯದಲ್ಲಿ ಭಾಗವಹಿಸಿದ್ದರು.
ಈ ಕುರಿತು ಕದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News