'ವಾಣಿಜ್ಯ ಕಟ್ಟಡದ ಎದುರಿನ ಜಾಗ ಆಕ್ರಮಿಸಿ ಪಾರ್ಕಿಂಗ್; ಮಾಲಕರ ವಿರುದ್ಧ ಕಠಿಣ ಕ್ರಮ'

Update: 2018-07-20 17:50 GMT

ಮಂಗಳೂರು, ಜು.20: ನಗರದ ವಾಣಿಜ್ಯ ಕಟ್ಟಡದ ಎದುರಿನ ಜಾಗವನ್ನು ಆಕ್ರಮಿಸಿ ಪಾರ್ಕಿಂಗ್ ಮಾಡಿರುವ ಮಾಲಕರ ವಿರುದ್ಧ ಪ್ರಕರಣ ದಾಖಲಿಸಿ, ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಟಿ.ಆರ್.ಸುರೇಶ್ ಎಚ್ಚರಿಸಿದ್ದಾರೆ.

ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಶುಕ್ರವಾರ ನಡೆದ ನೇರ ಫೋನ್‌ಇನ್ ಕಾರ್ಯಕ್ರಮದಲ್ಲಿ ಅವರು ಸಾರ್ವಜನಿಕರ ಅಹವಾಲುಗಳಿಗೆ ಸ್ಪಂದಿಸಿ, ಉತ್ತರ ನೀಡಿದರು.

ನಗರದ ಬಹುತೇಕ ವಾಣಿಜ್ಯ ಕಟ್ಟಡಗಳ ತಳ ಮಹಡಿಯಲ್ಲಿ ಪಾರ್ಕಿಂಗ್ ಮೀಸಲಿಟ್ಟ ಜಾಗದಲ್ಲಿ ಅಂಗಡಿ ಕೋಣೆಗಳನ್ನು ತೆರೆಯಲಾಗಿದೆ. ಕಟ್ಟಡದಲ್ಲಿನ ಬಾಡಿಗೆದಾರರು ತಮ್ಮ ವಾಹನಗಳನ್ನು ರಸ್ತೆಯ ಬದಿಯಲ್ಲಿ ದಿನವಿಡೀ ನಿಲ್ಲಿಸುತ್ತಿದ್ದಾರೆ. ಇದರಿಂದ ಅಂಗಡಿಗಳಿಗೆ ಬರುವ ಸಾರ್ವಜನಿಕರು ಕೂಡಾ ರಸ್ತೆಯ ಬದಿಯಲ್ಲೇ ಅನಧಿಕೃತವಾಗಿ ಪಾರ್ಕಿಂಗ್ ಮಾಡುತ್ತಾರೆ. ಇದರಿಂದ ಸುಗಮ ಸಂಚಾರಕ್ಕೆ ಸಮಸ್ಯೆಯಾಗುತ್ತದೆ. ಇದರ ವಿರುದ್ಧ ಕಟ್ಟು ನಿಟ್ಟಿನ ಕ್ರಮ ಅನಿವಾರ್ಯ ಎಂದವರು ಹೇಳಿದರು.

ರಸ್ತೆ ಬದಿಗಳಲ್ಲಿ ಇರುವ ಸಭಾಂಗಣದ ಮಾಲಕರನ್ನು ಕರೆದು ಸಭೆ ನಡೆಸಿ ಸಭಾಂಗಣದ ಆವರಣದ ಒಳಗಡೆಯೇ ಪಾರ್ಕಿಂಗ್ ಅವಕಾಶ ಕಲ್ಪಿಸಬೇಕು ಎಂದು ಸೂಚನೆ ನೀಡಲಾಗಿದೆ. ಆದರೂ ಸಭಾಂಗಣದ ಎದುರಿನ ರಸ್ತೆ ಬದಿಗಳಲ್ಲಿ ವಾಹನ ಪಾರ್ಕಿಂಗ್ ಮಾಡುತ್ತಿರುವುದು ಗಮನಕ್ಕೆ ಬಂದಿದೆ. ಈಗಾಗಲೇ ಹಲವು ಪ್ರಕರಣ ದಾಖಲಿಸಲಾಗಿದೆ. ಕಾರ್ಯಾಚರಣೆ ನಿರಂತರ ಮುಂದುವರಿಯಲಿದೆ ಎಂದು ಆಯುಕ್ತರು ಸ್ಪಷ್ಟಪಡಿಸಿದ್ದಾರೆ.

ಅಳಪೆಯಲ್ಲಿ ವಾಹನಗಳು ವೇಗವಾಗಿ ಸಂಚರಿಸುವುದರಿಂದ ಮಕ್ಕಳಿಗೆ, ಮಹಿಳೆಯರಿಗೆ ರಸ್ತೆ ದಾಟಲು ಸಮಸ್ಯೆಯಾಗುತ್ತಿದೆ. ಅಲ್ಲಿ ಹಂಪ್ಸ್ ಅಳವಡಿಸಬೇಕು ಎಂದು ಸಾರ್ವಜನಿಕರೊಬ್ಬರು ಒತ್ತಾಯಿಸಿದ್ದಾರೆ. ಸಂಚಾರ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಲಿದ್ದಾರೆ ಎಂದು ಆಯುಕ್ತರು ಉತ್ತರಿಸಿದರು.

ಬೈಕಂಪಾಡಿ ಬಳಿಯ ಜೋಕಟ್ಟೆ ಮೇಲ್ಸೇತುವೆಯಲ್ಲಿ ವಾಹನ ಪಾರ್ಕಿಂಗ್ ಮಾಡುತ್ತಿದ್ದಾರೆ. ಇದನ್ನು ತೆರವು ಮಾಡಬೇಕು. ಅಲ್ಲಿ ನೋ ಪಾರ್ಕಿಂಗ್ ನಾಮಫಲಕ ಅಳವಡಿಸಬೇಕು ಎಂದು ಸಾರ್ವಜನಿಕರೊಬ್ಬರು ಒತ್ತಾಯಿಸಿದರು. ಪಾರ್ಕಿಂಗ್ ತೆರವು ಮಾಡುವುದಾಗಿ ಆಯುಕ್ತರು ಉತ್ತರಿಸಿದರು.

ಕದ್ರಿ ದ್ವಾರದ ಬಳಿ ವಾಹನ ಪಾರ್ಕಿಂಗ್ ಮಾಡುತ್ತಿದ್ದಾರೆ. ಬಸ್‌ಗಳನ್ನು ರಸ್ತೆಯಲ್ಲೇ ನಿಲ್ಲಿಸಿ ಪ್ರಯಾಣಿಕರನ್ನು ಹತ್ತಿಸಿಕೊಳ್ಳುತ್ತಿದ್ದಾರೆ ಎಂದು ಸ್ಥಳೀಯ ನಿವಾಸಿಯೊಬ್ಬರು ದೂರಿದರು.

ಕೋಡಿಕಲ್‌ಗೆ ಸ್ಟೇಟ್‌ಬ್ಯಾಂಕ್‌ನಿಂದ 6 ಟ್ರಿಪ್ ಹಾಗೂ ಕಂಕನಾಡಿಯಿಂದ 2 ಟ್ರಿಪ್ ಬಸ್ ಬರುತ್ತಿತ್ತು. ಸ್ಟೇಟ್‌ಬ್ಯಾಂಕ್‌ನಿಂದ ರಾತ್ರಿ 8ಗಂಟೆಯಿಂದ ಬಳಿಕ ಟ್ರಿಪ್ ಕಟ್ ಮಾಡುತ್ತಾರೆ. ರವಿವಾರ ಕಂಕನಾಡಿಯಿಂದ ಒಂದು ಟ್ರಿಪ್ ಕೂಡಾ ಬಸ್ ಬರುವುದಿಲ್ಲ ಎಂದು ಸ್ಥಳೀಯ ನಿವಾಸಿಯೊಬ್ಬರು ದೂರಿದರು. ಈ ಬಗ್ಗೆ ಕ್ರಮ ಕೈಗೊಳ್ಳುವುದಾಗಿ ಆಯುಕ್ತರು ಭರವಸೆ ನೀಡಿದರು.

ಡಿಸಿಪಿಗಳಾದ ಹನುಂತರಾಯ, ಉಮಾ ಪ್ರಶಾಂತ್, ಎಸಿಪಿ ಮಂಜುನಾಥ ಶೆಟ್ಟಿ, ಇನ್‌ಸ್ಪೆಕ್ಟರ್‌ಗಳಾದ ಅಮಾನುಲ್ಲಾ, ಮಂಜುನಾಥ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News