‘ಆಧುನಿಕ’ ಉಡುಗೆ ಧರಿಸಿದ ಯುವತಿಗೆ ಪರೀಕ್ಷೆಗೆ ಪ್ರವೇಶ ನಿರಾಕರಿಸಿದ ಶಾಲೆ

Update: 2018-07-21 14:42 GMT

ಹೊಸದಿಲ್ಲಿ, ಜು.21: ಆಧುನಿಕ ಬಟ್ಟೆಯಾದ ಜಂಪ್‌ಸೂಟ್ ಧರಿಸಿದ್ದಾರೆ ಎಂಬ ಕಾರಣಕ್ಕೆ ರಾಷ್ಟ್ರೀಯ ಅರ್ಹತಾ ಪರೀಕ್ಷೆ (ಎನ್‌ಇಟಿ) ಬರೆಯಲು ಬಯಸಿದ್ದ ಯುವತಿಗೆ ದಿಲ್ಲಿಯ ಸಿಲಿಗುರಿಯಲ್ಲಿರುವ ಶಾಲೆ ಅನುಮತಿ ನಿರಾಕರಿಸುವ ಮೂಲಕ ವಿವಾದಕ್ಕೀಡಾಗಿದೆ.

 ಪರೀಕ್ಷೆ ಬರೆಯಲು ಮುಂದಾಗಿದ್ದ ದಿಲ್ಲಿ ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ತೃಣ ಸೇನ್‌ಗುಪ್ತಾ ಅವರಲ್ಲಿ ಶಾಲೆಯ ಸಿಬ್ಬಂದಿ, ನೀವು ಧರಿಸಿರುವ ಬಟ್ಟೆ ಅಸಭ್ಯವಾಗಿದೆ ಹಾಗಾಗಿ ನೀವು ಮನೆಗೆ ತೆರಳಿ ಎಂದು ಹೇಳಿದ್ದಾರೆ ಎಂದು ಆರೋಪಿಸಲಾಗಿದೆ.

 “ನನ್ನ ಬಟ್ಟೆಯ ಆಯ್ಕೆಗಾಗಿದೆ. ಮೊದಲು ಸಿಲಿಗುರಿಯ ದಿಲ್ಲಿ ಪಬ್ಲಿಕ್ ಶಾಲೆಯ ಶಿಕ್ಷಕರೊಬ್ಬರು ಅವಾಚ್ಯ ಶಬ್ದಗಳಿಂದ ನಿಂದಿಸಿದರು. ಆ ಬಟ್ಟೆ ಧರಿಸುವುದರಿಂದ ನನಗೆ ಆರಾಮದ ಅನುಭವವಾಗುವ ಕಾರಣದಿಂದ ನಾನು ಎಲ್ಲ ಪರೀಕ್ಷೆಗಳಿಗೂ ಅದೇ ಬಟ್ಟೆಯನ್ನು ಧರಿಸುತ್ತಿದ್ದೆ” ಎಂದು ಇಂಗ್ಲಿಶ್ ಭಾಷೆಯಲ್ಲಿ ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡುತ್ತಿರುವ ತೃಣ ತಿಳಿಸಿದ್ದಾರೆ. ಯುಜಿಸಿ ಪರವಾಗಿ ಸಿಬಿಎಸ್‌ಇ ಎನ್‌ಇಟಿ ಪರೀಕ್ಷೆಗಳನ್ನು ನಡೆಸುತ್ತದೆ ಮತ್ತು ಅದರ ನಿಯಮಗಳಲ್ಲಿ ವಸ್ತ್ರಸಂಹಿತೆಯ ಬಗ್ಗೆ ಯಾವುದೇ ಉಲ್ಲೇಖವಿಲ್ಲ. ಪರೀಕ್ಷೆಗೆ ಇಲೆಕ್ಟ್ರಾನಿಕ್ಸ್ ವಸ್ತುಗಳು ಮತ್ತು ವಾಚ್‌ಗಳನ್ನು ಕೊಂಡೊಯ್ಯುವುದನ್ನು ನಿಷೇಧಿಸಲಾಗಿದೆ. ಆದರೆ ಹಲವು ವಿದ್ಯಾರ್ಥಿಗಳಿಗೆ ವಾಚ್ ಧರಿಸಿ ಪರೀಕ್ಷಾ ಕೊಠಡಿಗೆ ಪ್ರವೇಶಿಸಲು ಅನುಮತಿ ನೀಡಲಾಗಿದೆ ಎಂದು ತೃಣ ಆರೋಪಿಸಿದ್ದಾರೆ.

 “ನಾನು ಪರೀಕ್ಷೆಗೆ ಹಾಜರಾಗುವ ಮುನ್ನ ಪ್ರವೇಶ ಪತ್ರದಲ್ಲಿ ನೀಡಲಾಗಿದ್ದ ನಿಯಮಗಳನ್ನು ಸಂಪೂರ್ಣವಾಗಿ ಓದಿದೇನೆ. ಅದರಲ್ಲಿ ವಸ್ತ್ರಸಂಹಿತೆ ಬಗ್ಗೆ ಯಾವುದೇ ಉಲ್ಲೇಖವಿರಲಿಲ್ಲ. ಹಾಗೊಂದು ವೇಳೆ ಇದ್ದರೆ ನಾನು ಖಂಡಿತವಾಗಿಯೂ ಪಾಲಿಸುತ್ತಿದ್ದೆ. ಆದರೂ ಅಲ್ಲಿನ ಸಿಬ್ಬಂದಿ ನನ್ನನ್ನು ಸುಖಾಸುಮ್ಮನೆ ಅವಮಾನಿಸಿದ್ದಾರೆ” ಎಂದಾಕೆ ಬೇಸರ ವ್ಯಕ್ತಪಡಿಸಿದ್ದಾರೆ.

“ಶಾಲೆಯ ಸಿಬ್ಬಂದಿ ಜೊತೆ ಚರ್ಚೆ ಮಾಡುವುದರಲ್ಲಿ ಅರ್ಥವಿಲ್ಲ ಎಂದು ಯೋಚಿಸಿದ ನಾನು ಕೂಡಲೇ ಮನೆಗೆ ತೆರಳಿ ಚೂಡಿದಾರ ಧರಿಸಿಕೊಂಡು ಬಂದೆ” “ಎಂದು ತೃಣ ತಿಳಿಸಿದ್ದಾರೆ. ಈ ಬಗ್ಗೆ ಶಾಲೆಯ ಉಪಪ್ರಾಂಶುಪಾಲೆ ಸುಖಾಂತ ಘೋಶ್ ಬಳಿ ಮಾಧ್ಯಮಗಳು ವಿಚಾರಿಸಿದಾಗ”, ವಸ್ತ್ರಸಂಹಿತೆಯ ಬಗ್ಗೆ ನಾನು ಯಾರಿಗೂ ಸೂಚನೆ ನೀಡಿಲ್ಲ. ಯುವತಿಯು ಸಾಮಾಜಿಕ ಜಾಲತಾಣದಲ್ಲಿ ಹಾಕಿರುವ ಪೋಸ್ಟ್ ಮೂಲಕ ನನಗೆ ಈ ಮಾಹಿತಿ ಲಭಿಸಿದೆ. ಆದರೆ ಅಂತಹ ಯಾವುದೇ ಘಟನೆ ನಡೆದಿರುವ ಬಗ್ಗೆ ಶಾಲೆಯ ಸಿಬ್ಬಂದಿ ನಿರಾಕರಿಸಿದ್ದಾರೆ ಎಂದು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News