ಸೆಕ್ಯೂರಿಟಿ ಗಾರ್ಡ್‌ಗೆ ಆಟೊರಿಕ್ಷಾ ಢಿಕ್ಕಿ; ಗಾಯ

Update: 2018-07-21 14:38 GMT

ಮಂಗಳೂರು, ಜು.21: ತೆರೆದ ಡಿವೈಡರ್ ಬಳಿ ರಸ್ತೆ ದಾಟುತ್ತಿದ್ದ ಸೆಕ್ಯೂರಿಟಿ ಗಾರ್ಡ್‌ವೊಬ್ಬರಿಗೆ ಆಟೊರಿಕ್ಷಾ ಢಿಕ್ಕಿ ಹೊಡೆದ ಪರಿಣಾಮ ವ್ಯಕ್ತಿ ಗಾಯಗೊಂಡ ಘಟನೆ ಮಂಗಳೂರು ನರ್ಸಿಂಗ್ ಹೋಮ್ ಸಮೀಪ ಶನಿವಾರ ನಡೆದಿದೆ. ಕೊಣಾಜೆ ಅಸೈಗೋಳಿ ಸೈಟ್ ನಿವಾಸಿ ಸುಮಾ ಜೆ.ಶೆಟ್ಟಿ ಗಾಯಗೊಂಡವರು.

ಖಾಸಗಿ ಆಸ್ಪತ್ರೆಯೊಂದರಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡಿಕೊಂಡಿರುವ ಸುಮಾ ಶೆಟ್ಟಿ ರಾತ್ರಿ ಪಾಳಿ ಮುಗಿಸಿ ಶನಿವಾರ ಬೆಳಗ್ಗೆ ತನ್ನ ಮನೆಗೆ ತೆರಳುತ್ತಿದ್ದರು. ವಾಸ್‌ಲೆನ್ ರಸ್ತೆ ಮೂಲಕ ಮಂಗಳೂರು ನರ್ಸಿಂಗ್ ಹೋಮ್ ಸಮೀಪದ ತೆರೆದ ಡಿವೈಡರ್ ಬಳಿ ರಸ್ತೆ ದಾಟುತ್ತಿದ್ದಾಗ ಘಟನೆ ನಡೆದಿದೆ.

ಬೆಂದೂರ್‌ವೆಲ್ ಕಡೆಯಿಂದ ಆಟೊರಿಕ್ಷಾ ಚಲಾಯಿಸಿಕೊಂಡು ಬಂದ ಚಾಲಕ ಮುಸ್ತಫಾ ನಿಯಂತ್ರಣ ತಪ್ಪಿ ಸೆಕ್ಯೂರಿಟಿ ಗಾರ್ಡ್‌ಗೆ ಢಿಕ್ಕಿ ಹೊಡೆಸಿದ್ದಾರೆ. ಪರಿಣಾಮ ಸೆಕ್ಯೂರಿಟಿ ಗಾರ್ಡ್ ರಸ್ತೆಗೆಸೆಯಲ್ಪಟ್ಟು ಗಾಯಗೊಂಡಿದ್ದಾನೆ. ಕೂಡಲೇ ಗಾಯಾಳುವನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಈ ಕುರಿತು ಮಂಗಳೂರು ಸಂಚಾರ ಪೂರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News