ಇಸ್ರೇಲಿ ಪಡೆಗಳಿಂದ ಗಾಝಾ ನಗರದ ಮೇಲೆ ಸರಣಿ ದಾಳಿ

Update: 2018-07-21 14:52 GMT

ಗಾಝಾ ಸಿಟಿ (ಫೆಲೆಸ್ತೀನ್), ಜು. 21: ಇಸ್ರೇಲಿ ಪಡೆಗಳು ಶುಕ್ರವಾರ ಗಾಝಾ ಪಟ್ಟಿಯಲ್ಲಿ ಸರಣಿ ದಾಳಿಗಳನ್ನು ನಡೆಸಿದ್ದು, ಹಮಾಸ್ ಸಂಘಟನೆಯ ಮೂವರು ಸದಸ್ಯರು ಮೃತಪಟ್ಟಿದ್ದಾರೆ.

ಗಾಝಾ ಸಿಟಿಯ ಆಕಾಶದಲ್ಲಿ ಬೆಂಕಿಯುಂಡೆಗಳು ಸ್ಫೋಟಗೊಂಡರೆ, ತನ್ನ ಭೂಭಾಗಗಳತ್ತ ಪೆಟ್ರೋಲ್ ಬಾಂಬ್‌ಗಳನ್ನು ಎಸೆಯಲಾಗಿದೆ ಎಂದು ಇಸ್ರೇಲ್ ಹೇಳಿದೆ.

ಈ ನಡುವೆ, ಮಧ್ಯಪ್ರವೇಶಿಸಿರುವ ವಿಶ್ವಸಂಸ್ಥೆಯು ಸಂಘರ್ಷ ವಲಯದಿಂದ ಹಿಂದೆ ಸರಿಯುವಂತೆ ಸಂಬಂಧಪಟ್ಟ ಎಲ್ಲ ಪಕ್ಷಗಳನ್ನು ಒತ್ತಾಯಿಸಿದೆ.

ಇಸ್ರೇಲ್ ಜೊತೆಗಿನ ಗಡಿ ಸಮೀಪ ಪ್ರತಿಭಟನೆ ಮಾಡುತ್ತಿದ್ದ ಫೆಲೆಸ್ತೀನಿಯರ ಮೇಲೆ ಇಸ್ರೇಲ್ ಪಡೆಗಳು ಗುಂಡು ಹಾರಿಸಿದಾಗ ಇನ್ನೋರ್ವ ಫೆಲೆಸ್ತೀನಿ ಮೃತಪಟ್ಟಿದ್ದು, ಮೃತರ ಸಂಖ್ಯೆ ನಾಲ್ಕಕ್ಕೇರಿದೆ ಎಂದು ಗಾಝಾದ ಆರೋಗ್ಯ ಸಚಿವಾಲಯ ತಿಳಿಸಿದೆ.

ಹಮಾಸ್ ಹೊಸದಾಗಿ ಕ್ಷಿಪಣಿ ಹಾರಿಸಿದರೆ ‘ಮತ್ತಷ್ಟು ಕಠಿಣ’ ಪ್ರತಿಕ್ರಿಯೆಯನ್ನು ನೀಡುವುದಾಗಿ ಇಸ್ರೇಲ್ ರಕ್ಷಣಾ ಸಚಿವ ಅವಿಗ್ಡರ್ ಲೀಬರ್‌ಮನ್ ಎಚ್ಚರಿಸಿದ್ದಾರೆ. ಈಗಾಗಲೇ ಫೆಲೆಸ್ತೀನ್ ನೆಲದಿಂದ ಮೂರು ಕ್ಷಿಪಣಿಗಳು ಇಸ್ರೇಲ್ ಭೂಭಾಗದತ್ತ ಹಾರಿವೆ ಎಂದು ಇಸ್ರೇಲ್ ಸೇನೆ ಹೇಳಿದೆ. ಆ ಪೈಕಿ ಎರಡು ಕ್ಷಿಪಣಿಗಳನ್ನು ಇಸ್ರೇಲ್ ಸೇನೆ ಹೊಡೆದುರುಳಿಸಿದೆ.

ಗಾಝಾ-ಇಸ್ರೇಲ್ ಗಡಿಯಲ್ಲಿ ಹೊಸದಾಗಿ ಪ್ರತಿಭಟನೆಗಳು ನಡೆದ ವೇಳೆ, ತನ್ನ ಸೈನಿಕರ ಮೇಲೆ ಗುಂಡಿನ ದಾಳಿ ನಡೆದಾಗ ತನ್ನ ವಿಮಾನ ಮತ್ತು ಟ್ಯಾಂಕ್‌ಗಳು ಪ್ರತಿದಾಳಿ ನಡೆಸಿದವು ಎಂದು ಇಸ್ರೇಲ್ ಸೇನೆ ಹೇಳಿದೆ.

ಎಲ್ಲರೂ ಸಂಘರ್ಷದ ಹೊಸ್ತಿಲಿನಿಂದ ಹಿಂದೆ ಸರಿಯಬೇಕು: ವಿಶ್ವಸಂಸ್ಥೆ

ವಲಯದಲ್ಲಿ ಸಂಘರ್ಷ ಸ್ಫೋಟಗೊಳ್ಳದಂತೆ ತಡೆಯುವ ಜವಾಬ್ದಾರಿ ಎಲ್ಲರ ಮೇಲಿದೆ ಎಂದು ಮಧ್ಯಪ್ರಾಚ್ಯ ಶಾಂತಿ ಪ್ರಕ್ರಿಯೆಯಲ್ಲಿ ವಿಶ್ವಸಂಸ್ಥೆಯ ಪ್ರತಿನಿಧಿಯಾಗಿರುವ ನಿಕೊಲೇ ಮ್ಲಾದೆನೊವ್ ಹೇಳಿದ್ದಾರೆ.

‘‘ಗಾಝಾದಲ್ಲಿರುವ ಪ್ರತಿಯೊಬ್ಬರೂ ಸಂಘರ್ಷದ ಹೊಸ್ತಿಲಿನಿಂದ ಹಿಂದೆ ಬರಬೇಕಾದ ಅಗತ್ಯವಿದೆ. ಮುಂದಿನ ವಾರವಲ್ಲ, ನಾಳೆಯಲ್ಲ, ಇಂದೇ ಸಂಘರ್ಷ ನಿಲ್ಲಿಸಬೇಕು’’ ಎಂದು ಅವರು ಹೇಳಿದರು.

‘‘ಫೆಲೆಸ್ತೀನಿಯರು ಮತ್ತು ಇಸ್ರೇಲಿಗರನ್ನು ಇನ್ನೊಂದು ಯುದ್ಧಕ್ಕೆ ಪ್ರಚೋದಿಸುವವರು ಯಶಸ್ವಿಯಾಗಬಾರದು’’ ಎಂದು ಅವರು ಟ್ವಿಟರ್‌ನಲ್ಲಿ ಬರೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News