×
Ad

ಉಡುಪಿ ಜಿಲ್ಲೆಯ 1690 ಮಂದಿಗೆ ವಿದ್ಯಾರ್ಥಿ ವೇತನ ವಿತರಣೆ

Update: 2018-07-21 20:39 IST

ಉಡುಪಿ, ಜು.21: ಉಡುಪಿ ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್ ವತಿಯಿಂದ ಉಡುಪಿ ಜಿಲ್ಲಾ ವ್ಯಾಪ್ತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಎಲ್ಲ ಸಮಾಜದ ಪ್ರತಿಭಾವಂತ ಮತ್ತು ಆರ್ಥಿಕವಾಗಿ ಹಿಂದುಳಿದ 1690 ವಿದ್ಯಾರ್ಥಿಗಳಿಗೆ 2018-19ನೆ ಸಾಲಿನ ವಿದ್ಯಾರ್ಥಿ ವೇತನವನ್ನು ಶನಿವಾರ ಅಂಬಲಪಾಡಿ ಶ್ಯಾಮಿಲಿ ಸಭಾಂಗಣದಲ್ಲಿ ವಿತರಿಸಲಾಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಟ್ರಸ್ಟ್‌ನ ಪ್ರವರ್ತಕ ಡಾ.ಜಿ.ಶಂಕರ್ ಮಾತ ನಾಡಿ, ಕಳೆದ 16ವರ್ಷಗಳಿಂದ ಎಸೆಸೆಲ್ಸಿ, ಎಂಎಸ್ಸಿ, ಇಂಜಿನಿಯರ್, ಎಂಬಿ ಬಿಎಸ್ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವನ್ನು ವಿತರಿಸಲಾಗುತ್ತಿದೆ. ದೇವರು ನಮಗೆ ನೀಡಿರುವುದರಲ್ಲಿ ಒಂದು ಪಾಲನ್ನು ಸಮಾಜಕ್ಕೆ ಕೊಟ್ಟರೆ ಅದರ ಫಲ ಸಿಗುತ್ತದೆ. ವಿದ್ಯಾರ್ಥಿಗಳು ಪೋಷಕರ ಮಾರ್ಗದರ್ಶನದಲ್ಲಿ ಉತ್ತಮ ಸಂಸ್ಕಾರ ದೊಂದಿಗೆ ಶಿಕ್ಷಣ ಪಡೆದು ಸಮಾಜದಲ್ಲಿ ಉತ್ತಮ ವ್ಯಕ್ತಿಗಳಾಗಬೇಕು ಎಂದು ಹಾರೈಸಿದರು.

ಅತ್ಯಧಿಕ ಅಂಕ ಗಳಿಸಿದ ಎಸೆಸೆಲ್ಸಿ ಆಂಗ್ಲ ಮಾಧ್ಯಮದಲ್ಲಿ ಮನೋಜ್ ಎಂ. ಮಲ್ಯ, ಪಿಯುಸಿ ಕಲಾ ವಿಭಾಗದ ವಿಥಿಕಾ ಶೆಟ್ಟಿ, ವಾಣಿಜ್ಯ ವಿಭಾಗದ ವೆಂಕಟೇಶ್ ಪುರಾಣಿಕ್, ವಿಜ್ಞಾನ ವಿಭಾಗದ ನಿಸರ್ಗ್, ಕೃತಿ ಡಿ.ಶೆಟ್ಟಿ, ಸತ್ಯಾಶ್ರೀ ಮತ್ತು ಕಿದಿಯೂರು ಶ್ಯಾಮಿಲಿ ಪದವಿ ಪೂರ್ವ ಕಾಲೇಜಿನ ಪಿಯುಸಿಯಲ್ಲಿ ಅತ್ಯಧಿಕ ಅಂಕ ಗಳಿಸಿದ ವಿಜ್ಞಾನ ವಿಭಾಗದ ಲಾವಣ್ಯ ಹಾಗೂ ವಾಣಿಜ್ಯ ವಿಭಾಗದ ನಿಧಿ ಎನ್. ಅವರಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.

ಈ ಸಂದರ್ಭದಲ್ಲಿ ಅವಿಭಜಿತ ದ.ಕ. ಜಿಲ್ಲೆಯ ಹಿರಿಯ ಅಶಕ್ತ ಯಕ್ಷಗಾನ ಕಲಾವಿದರುಗಳಾದ ಅಂಬಾತನಯ ಮುದ್ರಾಡಿ, ಕುರಿಯ ಗಣಪತಿ ಶಾಸ್ತ್ರೀ, ಮಹಾಬಲೇಶ್ವರ ಶೇಟ್, ಆವರ್ಸೆ ಶೀನ, ಮಾನ್ಯ ತಿಮ್ಮಯ್ಯ, ಕೊಳ್ತಿಗೆ ನಾರಾಯಣ ಗೌಡ, ಎಸ್.ಎಂ.ಹೆಗಡೆ ಮುಡಾರೆ, ಬಾಯಾರು ರಘುನಾಥ ಶೆಟ್ಟಿ, ಕೊಣ್ಕಿ ನಾಗೇಶ್ ಗಾಣಿಗ, ವಿಷ್ಣು ಆಚಾರಿ ಬಳ್ಕೂರು ಅವರಿಗೆ ತಲಾ 25ಸಾವಿರ ರೂ. ಸಹಾಯಧನವನ್ನು ವಿತರಿಸಲಾಯಿತು.

ಅಧ್ಯಕ್ಷತೆಯನ್ನು ಉಡುಪಿ ಜಿಲ್ಲಾ ಮೊಗವೀರ ಯುವ ಸಂಘಟನೆಯ ಅಧ್ಯಕ್ಷ ವಿನಯ ಕರ್ಕೇರ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಸಂಘಟನೆಯ ನಿಕಟ ಪೂರ್ವ ಅಧ್ಯಕ್ಷ ಗಣೇಶ್ ಕಾಂಚನ್, ಉದ್ಯಮಿ ಶಿವಪ್ಪ ಟಿ.ಅಮೀನ್ ಉಪಸ್ಥಿತರಿದ್ದರು. ಟ್ರಸ್ಟಿ ಆನಂದ್ ಎಸ್.ಕೆ. ಸ್ವಾಗತಿಸಿದರು. ಶಂಕರ್ ಸಾಲ್ಯಾನ್ ವಂದಿಸಿದರು. ಶಿವರಾಮ ಕೆ.ಎಂ. ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News