ಸಿಂಗಾಪುರ ಸೈಬರ್ ದಾಳಿಯ ಹಿಂದೆ ವಿದೇಶಿ ಸರಕಾರಗಳು?

Update: 2018-07-21 15:40 GMT

ಸಿಂಗಾಪುರ, ಜು. 21: ಸಿಂಗಾಪುರದ ಇತಿಹಾಸದ ಅತಿ ದೊಡ್ಡ ಸೈಬರ್ ದಾಳಿಯ ಹಿಂದೆ ವಿದೇಶಿ ಸರಕಾರಗಳ ಸಂಸ್ಥೆಗಳು ಇರುವ ಸಾಧ್ಯತೆಯಿದೆ ಎಂದು ಭದ್ರತಾ ಪರಿಣತರು ಹೇಳುತ್ತಾರೆ.

ಸಿಂಗಾಪುರದ ಸರಕಾರಿ ಮಾಹಿತಿಕೋಶವೊಂದಕ್ಕೆ ಕನ್ನ ಹಾಕಿದ ವ್ಯಕ್ತಿಗಳು, ಪ್ರಧಾನಿ ಲೀ ಹಸಿಯನ್ ಲೂಂಗ್ ಸೇರಿದಂತೆ 15 ಲಕ್ಷಕ್ಕೂ ಅಧಿಕ ಸಿಂಗಾಪುರ ಪ್ರಜೆಗಳ ಆರೋಗ್ಯ ದಾಖಲೆಗಳನ್ನು ಕದ್ದಿದ್ದಾರೆ ಎಂದು ಸಿಂಗಾಪುರ ಸರಕಾರ ಶುಕ್ರವಾರ ತಿಳಿಸಿರುವುದನ್ನು ಸ್ಮರಿಸಬಹುದಾಗಿದೆ.

ಅತ್ಯಂತ ವ್ಯವಸ್ಥಿತವಾಗಿ ನಡೆದ ಈ ದಾಳಿಯಲ್ಲಿ ವಿಶೇಷವಾಗಿ ಪ್ರಧಾನಿಯನ್ನು ಗುರಿ ಮಾಡಲಾಗಿದೆ ಎಂದು ಅದು ಹೇಳಿದೆ.

ಈ ಸೈಬರ್ ದಾಳಿಯು ‘‘ಉದ್ದೇಶಪೂರ್ವಕ ಹಾಗೂ ಪೂರ್ವಯೋಜಿತವಾಗಿದೆ ಹಾಗೂ ಇದು ಬಿಡಿ ಹ್ಯಾಕರ್‌ಗಳು ಅಥವಾ ಕ್ರಿಮಿನಲ್ ತಂಡಗಳ ಕೃತ್ಯವಲ್ಲ ಎಂದು ಸಿಂಗಾಪುರದ ಆರೋಗ್ಯ ಸಚಿವ ಹೇಳಿದ್ದಾರೆ.

ಬ್ಲಾಕ್‌ಮೇಲ್ ಮಾಡಲು ಕದ್ದ ಮಾಹಿತಿಯ ಬಳಕೆ ಸಾಧ್ಯ

‘‘ಉನ್ನತ ಹುದ್ದೆಯಲ್ಲಿರುವ ವ್ಯಕ್ತಿಯನ್ನು ನಿರ್ದಿಷ್ಟ ಗುಂಪು ಅಥವಾ ದೇಶದ ಪರವಾಗಿ ಬೇಹುಗಾರಿಕೆ ನಡೆಸುವಂತೆ ಬಲವಂತಪಡಿಸಲು ಅವರ ಆರೋಗ್ಯ ಮಾಹಿತಿಯನ್ನು ಕನ್ನಗಾರರು ದಾಳವಾಗಿ ಬಳಸಬಹುದಾಗಿದೆ. ತಮ್ಮ ಪರವಾಗಿ ಬೇಹುಗಾರಿಕೆ ನಡೆಸದಿದ್ದರೆ ಈ ಸೂಕ್ಷ್ಮ ಆರೋಗ್ಯ ಮಾಹಿತಿಗಳನ್ನು ಬಹಿರಂಗಪಡಿಸುವ ಬೆದರಿಕೆಯನ್ನು ಕನ್ನಗಾರರು ಹಾಕುವ ಸಾಧ್ಯತೆಯಿದೆ’’ ಎಂದು ಸೈಬರ್ ಭದ್ರತೆ ಸಂಸ್ಥೆ ‘ಫಯರ್‌ಐ’ನ ಏಶ್ಯ-ಪೆಸಿಫಿಕ್ ಅಧ್ಯಕ್ಷ ಎರಿಕ್ ಹೊಹ್ ಹೇಳುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News