ಸೂಕಿಯ ರೊಹಿಂಗ್ಯಾ ಬಿಕ್ಕಟ್ಟು ಕುರಿತ ಮಂಡಳಿಗೆ ಕಾರ್ಯದರ್ಶಿ ರಾಜೀನಾಮೆ

Update: 2018-07-21 15:45 GMT

ಯಾಂಗನ್, ಜು. 21: ಮ್ಯಾನ್ಮಾರ್‌ನ ಸಂಘರ್ಷಪೀಡಿತ ರಖೈನ್ ರಾಜ್ಯಕ್ಕೆ ಸಂಬಂಧಿಸಿದ ಅಂತಾರಾಷ್ಟ್ರೀಯ ಸಲಹಾ ಮಂಡಳಿಯ ಪ್ರಮುಖ ಸದಸ್ಯರೊಬ್ಬರು ರಾಜೀನಾಮೆ ನೀಡಿದ್ದಾರೆ.

ಮ್ಯಾನ್ಮಾರ್ ಮುಖ್ಯಸ್ಥೆ ಆಂಗ್ ಸಾನ್ ಸೂ ಕಿ ಸ್ಥಾಪಿಸಿರುವ ಮಂಡಳಿಯು, ಸಂಘರ್ಷಕ್ಕೆ ಕಾರಣವಾದ ಸಮಸ್ಯೆಯ ಒಂದು ಭಾಗವಾಗುವ ಅಪಾಯವನ್ನು ಎದುರಿಸುತ್ತಿದೆ ಎಂದು ಥಾಯ್ಲೆಂಡ್‌ನ ನಿವೃತ್ತ ಸಂಸದ ಹಾಗೂ ಮ್ಯಾನ್ಮಾರ್ ರಾಯಭಾರಿ ಕೊಬ್ಸಕ್ ಚುಟಿಕುಲ್ ಹೇಳಿದ್ದಾರೆ.

ಅವರು ಮಂಡಳಿಯ ಕಾರ್ಯದರ್ಶಿಯಾಗಿದ್ದಾರೆ.

ಕಳೆದ ವರ್ಷದ ಆಗಸ್ಟ್‌ನಲ್ಲಿ ಮ್ಯಾನ್ಮಾರ್‌ನ ರಖೈನ್ ರಾಜ್ಯದಲ್ಲಿ ಸೇನಾ ಕಾರ್ಯಾಚರಣೆಗೆ ಬೆದರಿ ಸುಮಾರು 7 ಲಕ್ಷ ರೊಹಿಂಗ್ಯಾ ಮುಸ್ಲಿಮರು ನೆರೆಯ ಬಾಂಗ್ಲಾದೇಶಕ್ಕೆ ಪಲಾಯನಗೈದಿರುವುದನ್ನು ಸ್ಮರಿಸಬಹುದಾಗಿದೆ.

ಅಲ್ಪಸಂಖ್ಯಾತರ ಪಲಾಯನಕ್ಕೆ ಕಾರಣವಾದ ಸೇನಾ ಕಾರ್ಯಾಚರಣೆಯಿಂದ ಉದ್ಭವಿಸಿದ ಪರಿಸ್ಥಿತಿಯನ್ನು ಹೇಗೆ ನಿಭಾಯಿಸಬಹುದು ಎಂಬ ವಿಷಯದಲ್ಲಿ ತನ್ನ ಸರಕಾರಕ್ಕೆ ಸಲಹೆ ನೀಡುವುದಕ್ಕಾಗಿ ಆಂಗ್ ಸಾನ್ ಸೂ ಕಿ ಈ ಮಂಡಳಿಯನ್ನು ನೇಮಿಸಿದ್ದರು.

ಮ್ಯಾನ್ಮಾರ್ ಸೈನಿಕರು ರಖೈನ್ ರಾಜ್ಯದಲ್ಲಿ ರೊಹಿಂಗ್ಯಾ ಮುಸ್ಲಿಮರ ವಿರುದ್ಧ ಭಾರೀ ಪ್ರಮಾಣದಲ್ಲಿ ನಡೆಸಿದ ಹಿಂಸಾಚಾರ, ಕೊಲೆ ಮತ್ತು ಅತ್ಯಾಚಾರಗಳ ಭಯಾನಕ ವಿವರಗಳನ್ನು ಬಾಂಗ್ಲಾದೇಶದಲ್ಲಿ ಆಶ್ರಯ ಪಡೆದಿರುವ ನಿರಾಶ್ರಿತರು ನೀಡಿರುವುದನ್ನು ಸ್ಮರಿಸಬಹುದಾಗಿದೆ.

ಮ್ಯಾನ್ಮಾರ್ ರಾಜಧಾನಿ ನೇಪಿಟವ್‌ನಲ್ಲಿ ಮಂಡಳಿಯು ಮ್ಯಾನ್ಮಾರ್ ಸರಕಾರದ ಅಧಿಕಾರಿಗಳೊಂದಿಗೆ ಶೀಘ್ರದಲ್ಲೇ ನಡೆಸಲಿದೆ. ಆದರೆ, ತನ್ನ ಹುದ್ದೆಯಲ್ಲಿ ಮುಂದುವರಿಯುವುದು ಅಸಾಧ್ಯವಾದ ಕಾರಣ ತಾನು ರಾಜೀನಾಮೆ ನೀಡುತ್ತಿದ್ದೇನೆ ಎಂದು ಅವರು ಎಎಫ್‌ಪಿ ಸುದ್ದಿ ಸಂಸ್ಥೆಗೆ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News