ಭಟ್ಕಳ: ಸ್ವಾಮಿ ಅಗ್ನಿವೇಶ್ ಮೇಲೆ ಹಲ್ಲೆಗೈದವರ ಮೇಲೆ ಕಠಿಣ ಕ್ರಮಕ್ಕೆ ಆಗ್ರಹಿಸಿ ಎಸ್.ಡಿ.ಪಿ.ಐ ಧರಣಿ

Update: 2018-07-21 18:12 GMT

ಭಟ್ಕಳ,ಜು.21: ಸಾಮಾಜಿಕ ಹೋರಾಟಗಾರ, ಹಿರಿಯ ಆರ್ಯಸಮಾಜದ ಸಂತ ಸ್ವಾಮಿ ಅಗ್ನಿವೇಶರ ಮೇಲೆ ಜಾರ್ಖಂಡ್ ನಲ್ಲಿ ಬಿಜೆಪಿ ಯುವ ಮೋರ್ಚಾ ಹಾಗೂ ಎಬಿವಿಪಿ ಯವರಿಂದ ನಡೆದ ಮಾರಾಣಾಂತಿಕ ಅಮಾನವೀಯ ದಾಳಿಯನ್ನು ಉಗ್ರವಾಗಿ ಖಂಡಿಸಿರುವ ಎಸ್.ಡಿ.ಪಿ.ಐ, ದಾಳಿಮಾಡಿದವರ ಮೇಲೆ ಕಠಿಣ ಕಾನೂನು ಜರಗಿಸಬೇಕೆಂದು ಆಗ್ರಹಿಸಿದೆ.

ಶನಿವಾರ ಇಲ್ಲಿನ ತಹಸಿಲ್ದಾರ್ ಕಚೇರಿ ಆವರಣದಲ್ಲಿ ಸೇರಿ ಪ್ರತಿಭಟನೆ ನಡೆಸಿದ ಎಸ್.ಡಿ.ಪಿ.ಐ ಕಾರ್ಯಕರ್ತರು ತಹಸಿಲ್ದಾರರ ಮೂಲಕ ರಾಷ್ಟ್ರಪತಿಗಳಿಗೆ ಮನವಿಯನ್ನು ಅರ್ಪಿಸಿದ್ದಾರೆ. 

ಜಾರ್ಖಂಡ್ ನ ಆದಿವಾಸಿ ಸಭೆಯೊಂದರಲ್ಲಿ ಭಾಗವಹಿಸಿದ್ದ ಸ್ವಾಮಿಜೀಯ ಮೇಲೆ ಸಂಘಪರಿವಾರ ಪೂರ್ವ ನಿಯೋಜಿತ ದಾಳಿ ನಡೆಸಿದೆ. ಹಿಂದುತ್ವ ಫ್ಯಾಸಿಸ್ಟ್ ರು ದೇಶದಾದ್ಯಂತ ಪ್ರಜಾಪ್ರುಭುತ್ವ ವ್ಯವಸ್ಥೇಯನ್ನೇ ಬುಡಮೇಲುಗೊಳಿಸಲು ಪ್ರಯತ್ನಿಸುತ್ತಿವೆ ಎಂದು ಮನವಿ ಪತ್ರದಲ್ಲಿ ಆರೋಪಿಸಲಾಗಿದ್ದು, ಹಿಂದುತ್ವದ ವಿರುದ್ಧವಾಗಿ ಸೈದ್ಧಾಂತಿಕ ಹೋರಾಟ ಮಾಡುತ್ತಿರುವ ವಿಚಾರವಾಗಿಗಳನ್ನು ಸೈದ್ಧಾಂತಿಕವಾಗಿ ಎದುರಿಸಲು ಸಾಧ್ಯವಾಗದೇ ಅವರ ಸುಳ್ಳು ಸಿದ್ಧಾಂತಗಳು ದೇಶದಲ್ಲಿ ಬಯಲಾಗುತ್ತಿರುವಾಗ ಅದನ್ನು ಮರೆಮಾಚಲು ಈ ರೀತಿಯ ದೈಹಿಕ ಹಲ್ಲೆಯನ್ನು ನಡಸುತ್ತಿದ್ದಾರೆ. ಗೋವಿಂದ ಪನ್ಸಾರೆ, ದಾಬೋಲ್ಕರ್, ಎಂ.ಎಂ.ಕಲ್ಬುರ್ಗಿ, ಗೌರಿ ಲಂಕೇಶ್ ಮೊದಲಾದ ವಿಚಾರವಾದಿಗಳನ್ನು ಹತ್ಯೆಗೈದಿರುವುದು ಈಗ ಜಗಜ್ಜಾಹೀರಾಗುತ್ತಿದೆ. ಇದನ್ನು ಕಂಡು ದೇಶದ ಪ್ರಧಾನಿ ಮೌನ ವಹಿಸಿರುವುದು ಗೂಂಡಾಗಳಿಗೆ ಕಾನೂನು ಕೈಗೆತ್ತಿಕೊಳ್ಳಲು ಅನುಮತಿ ನೀಡಿದಂತಾಗಿದೆ ಎಂದು ಮನವಿಯಲ್ಲಿ ತಿಳಿಸಿದ್ದು, ದೇಶದಲ್ಲಿ ಶಾಂತಿ ನೆಮ್ಮದಿ ಮತ್ತು ಎಲ್ಲರಿಗೂ ಬದುಕುವ ಅವಕಾಶ ಮತ್ತು ಹಕ್ಕು ಸಿಗಬೇಕಾದಲ್ಲಿ ಹಿಂದುತ್ವ ಫ್ಯಾಶಿಸಂನ್ನು ದೇಶದಿಂದ ನಿರ್ಮೂಲನೆ ಮಾಡಬೇಕಾಗಿದೆ ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.

ದೇಶದಲ್ಲಿ ನಡೆಯುತ್ತಿರುವ ಗುಂಪು ಹತ್ಯೆಗಳನ್ನು ಬಲವಾಗಿ ಖಂಡಿಸಿರುವ ಎಸ್.ಡಿ.ಪಿ.ಐ ಈಗ ನಮ್ಮ ರಾಜ್ಯದಲ್ಲೂ ಗುಂಪುಹತ್ಯೆಗಳು ಕಾಲಿಟ್ಟಿದ್ದು ಬೀದರ್ ಜಿಲ್ಲೆಯಲ್ಲಿ ಗುಂಪೊಂದು ಮಕ್ಕಳ ಕಳ್ಳ ಸಾಗಾಣಿಕೆ ನಡೆಸುತ್ತಿದ್ದಾರೆ ಎಂಬ ಸುಳ್ಳನ್ನು ಹಬ್ಬಿಸಿ ಆಂಧ್ರಪ್ರದೇಶ ಮೂಲಕ ಟೆಕ್ಕಿ ಮುಹಮ್ಮದ್ ಅಝಂ ಎಂಬುವವರನ್ನು ಹತ್ಯೆ ಮಾಡಿದ್ದು ಇದು ಖಂಡನೀಯವೆಂದು ಮನವಿಪತ್ರದಲ್ಲಿ ಉಲ್ಲೇಖಿಸಿದೆ. 
ಈ ಸಂದರ್ಭದಲ್ಲಿ ಎಸ್.ಡಿ.ಪಿ.ಐ ಜಿಲ್ಲಾಧ್ಯಕ್ಷ ತೌಸೀಫ್ ಬ್ಯಾರಿ, ಭಟ್ಕಳ ತಾಲೂಕು ಅಧ್ಯಕ್ಷ ವಸೀಮ್ ಮಣಿಗಾರ್ ಸೇರಿದಂತೆ ಹಲವು ಮುಖಂಡರು ಉಪಸ್ಥಿತಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News