ಸ್ವಚ್ಚ ಪತ್ರಿಕೋದ್ಯಮಕ್ಕಾಗಿ ಪತ್ರಕರ್ತರ ಆಲೋಚನೆ ಬದಲಾವಣೆ ಅನಿವಾರ್ಯ : ಮೌಲ್ಯ ಜೀವನ್‍ರಾಂ

Update: 2018-07-21 18:59 GMT

ಪುತ್ತೂರು,ಜು.21: ಪತ್ರಿಕೋದ್ಯಮ ಇಂದು ದೇಶದಲ್ಲಿ ಅತ್ಯಂತ ಹೆಚ್ಚು ಟೀಕೆಗೆ ಒಳಗಾಗುತ್ತಿರುವ ಕ್ಷೇತ್ರವಾಗಿದ್ದು, ಇದನ್ನು ಸವಾಲಾಗಿ ಸ್ವೀಕರಿಸಿ ಸ್ವಚ್ಛ ಪತ್ರಿಕೋದ್ಯಮಕ್ಕಾಗಿ ಪತ್ರಕರ್ತರು ಗಂಭೀರವಾಗಿ ಆಲೋಚನೆ ಬದಲಾಗಬೇಕಾದ ಅನಿವಾರ್ಯತೆಯಿದೆ. ಇತಿಹಾಸ ತಿಳಿಯದವರಿಂದ ಹೊಸ ಇತಿಹಾಸ ಸೃಷ್ಟಿ ಸಾಧ್ಯವಿಲ್ಲ. ಹಾಗಾಗಿ ಪತ್ರಕರ್ತರು ಇತಿಹಾಸ ಅರಿಯುವುದು ಅತೀ ಅಗತ್ಯ ಎಂದು ಮೂಡುಬಿದ್ರೆ ಆಳ್ವಾಸ್ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥೆ ಡಾ. ಮೌಲ್ಯ ಜೀವನ ರಾಂ ಹೇಳಿದರು.

ಅವರು ಪುತ್ತೂರು ತಾಲೂಕು ಪತ್ರಕರ್ತರ ಸಂಘದ ಆಶ್ರಯದಲ್ಲಿ ಶನಿವಾರ ಪುತ್ತೂರು ಕೋ-ಆಪರೇಟಿವ್ ಟೌನ್ ಬ್ಯಾಂಕ್ ಸಭಾಂಗಣದಲ್ಲಿ  ನಡೆದ ಪತ್ರಿಕಾ ದಿನಾಚರಣೆ, ಸನ್ಮಾನ ಮತ್ತು ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದರು.

ಟಿವಿ, ಸೋಷಿಯಲ್ ಮೀಡಿಯಾಗಳ ನೆಗೆಟಿವ್ ಅಂಶಗಳನ್ನೇ ನೋಡುತ್ತಾ ಮಾಧ್ಯಮ ಎಂದರೆ ಇದೇ ಎಂಬ ತೀರ್ಮಾನಕ್ಕೆ ಜನ ಬಂದಿರುವ ಈ ಸಂದರ್ಭದಲ್ಲಿ ಒಳ್ಳೆಯ ಕಾರ್ಯಕ್ರಮ ನೋಡುವ ಮತ್ತು ಒಳ್ಳೆಯ ವರದಿ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ಮಾಧ್ಯಮ ಎಂದರೆ ಟಿವಿ, ಮಾಧ್ಯಮ ಎಂದರೆ ಸೋಷಿಯಲ್ ಮೀಡಿಯಾ ಎಂದೇ ಜನ ಭಾವಿಸಿಕೊಂಡಂತಿದೆ. ಡಿಜಿಟಲ್ ಮಾಧ್ಯಮಗಳ ಅಬ್ಬರದ ನಡುವೆಯೂ ಕರ್ನಾಟಕದಲ್ಲಿ ಆರು ಸಾವಿರಕ್ಕಿಂತಲೂ ಅಧಿಕ ಪತ್ರಿಕೆಗಳು ಉಳಿದುಕೊಂಡಿವೆ ಎಂದರೆ ಪತ್ರಿಕೆಗಳಿಗೆ ಇರುವ ವಿಶ್ವಾಸಾರ್ಹತೆ ಸಾಬೀತಾಗುತ್ತದೆ. ಪತ್ರಕರ್ತರನ್ನು ಪ್ರಶ್ನಾರ್ಥಕ ಚಿಹ್ನೆಯಿಂದ ನೋಡುವ ಬದಲು ಪತ್ರಕರ್ತರು ಇರುವ ಸ್ಥಿತಿಯನ್ನು ಅರ್ಥ ಮಾಡಿಕೊಳ್ಳಬೇಕು. ಶೇರು ಬಂಡವಾಳ ಹೂಡಿಕೆದಾರರು ಮಾಧ್ಯಮಗಳನ್ನು ನಡೆಸುತ್ತಿದ್ದಾರೆ ಎಂಬುದನ್ನು ಅರ್ಥ ಮಾಡಿಕೊಂಡರೆ ಪತ್ರಕರ್ತನ ಸ್ಥಿತಿಯನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ಇವತ್ತು ಪ್ರತಿಯೊಬ್ಬ ನಾಗರಿಕರೂ ಸಿಟಿಜನ್ ಜರ್ನಲಿಸ್ಟ್ ಆಗಿ ಬೆಳೆಯಬೇಕು. ಯಾವುದನ್ನು ಓದಬೇಕು, ಯಾವುದನ್ನು ಓದಬಾರದು, ಯಾವುದನ್ನು ನೋಡಬೇಕು, ನೋಡಬಾರದು ಎಂಬುದನ್ನು ಜನ ನಿರ್ಧರಿಸಿದರೆ ಪತ್ರಕರ್ತರ ಮೇಲೆ ದೂಷಣೆ ಮಾಡುವುದು ತಪ್ಪುತ್ತದೆ ಎಂದವರು ತಿಳಿಸಿದರು.
ಕಾರ್ಯಕ್ರಮ ಉದ್ಘಾಟಿಸಿದ ಶಾಸಕ ಸಂಜೀವ ಮಠಂದೂರು ಮಾತನಾಡಿ, ಪತ್ರಕರ್ತರು ಪ್ರಜಾಪ್ರಭುತ್ವದ ಮೌಲ್ಯ ಉಳಿಸಿಕೊಂಡು ಬಂದವರು. ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಲ್ಪಟ್ಟಾಗಲೂ ಮಾಧ್ಯಮಗಳು ಗುಪ್ತಗಾಮಿನಿಯಾಗಿ ಮನೆ ಮನೆಗೂ ತಲುಪಿ ಜಾಗೃತಿ ಮೂಡಿಸಿದ್ದವು. ಇಂದು ಡಿಜಿಟಲ್ ಮಾಧ್ಯಮದಲ್ಲಿ ಕ್ರಾಂತಿಯಾಗಿದ್ದು, 34 ಶೇಕಡಾ ಜನ ಇಂಟರ್ನೆಟ್ ಬಳಸುತ್ತಿದ್ದಾರೆ. ಇದು ಮುದ್ರಣ ಮಾಧ್ಯಮದ ಮೇಲೆ ಪ್ರಭಾವ ಬೀರುತ್ತಿದೆ. ಆದರೂ ಪತ್ರಿಕೆಗಳ ಮೇಲೆ ಜನ ಇಟ್ಟಿರುವ ವಿಶ್ವಾಸ, ಆಶಾಭಾವ ಕುಸಿದಿಲ್ಲ. ಈ ಹಿನ್ನೆಲೆಯಲ್ಲಿ ಮಾಧ್ಯಮಗಳ ಸಮಾಜಮುಖಿ ಚಿಂತನೆ ಇನ್ನೂ ಹೆಚ್ಚಬೇಕಿದೆ ಎಂದರು.

ಭಾರತ ಸರಕಾರದ ರಕ್ಷಣೆ, ಸಂಶೋಧನೆ ಮತ್ತು ಅಭಿವೃದ್ಧಿ ವಿಭಾಗದ ನಿವೃತ್ತ ಪ್ರಾದೇಶಿಕ ಸಾರ್ವಜನಿಕ ಸಂಪರ್ಕಾಧಿಕಾರಿ  ಜಯಪ್ರಕಾಶ್ ರಾವ್ ಪುತ್ತೂರು ಇವರು ಬರೆದ ಕಲಾಂ ಜೀವನ ಧರ್ಮ ಕೃತಿಯ 2ನೇ ಆವೃತ್ತಿಯನ್ನು  ಸಾಹಿತಿ ವಿ.ಬಿ. ಅರ್ತಿಕಜೆ ಬಿಡುಗಡೆ ಮಾಡಿದರು. 
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಪತ್ರಕರ್ತರಾದ ಡಾ.ಯು.ಪಿ. ಶಿವಾನಂದ, ಬಾಳ ಜಗನ್ನಾಥ ಶೆಟ್ಟಿ ಮತ್ತು 17ನೇ ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿದ್ದ ನಾ.ಕಾರಂತ ಪೆರಾಜೆ ಅವರನ್ನು ಸಂಘದ ವತಿಯಿಂದ  ಸಂಘದ ಕಾನೂನು ಸಲಹೆಗಾರ ಬಿ. ಪುರಂದರ ಭಟ್ ಸನ್ಮಾನಿಸಿ ಗೌರವಿಸಿದರು. 

ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಮಹೇಶ್ ಪುಚ್ಚಪ್ಪಾಡಿ ಅಧ್ಯಕ್ಷತೆ ವಹಿಸಿದ್ದರು. ಸಂಘದ ಕಾರ್ಯದರ್ಶಿ   ಕಿರಣ್ ಪ್ರಸಾದ್ ಕುಂಡಡ್ಕ ಸ್ವಾಗತಿಸಿದರು. ಉಪಾಧ್ಯಕ್ಷ ಸುಧಾಕರ ಸುವರ್ಣ ತಿಂಗಳಾಡಿ ಪ್ರಾಸ್ತಾವಿಕ ಮಾತನಾಡಿದರು. ಜತೆ ಕಾರ್ಯದರ್ಶಿ ಶ್ರವಣ್ ಕುಮಾರ್ ನಾಳ ವಂದಿಸಿದರು. ಸದಸ್ಯ ಸಂಶುದ್ದೀನ್ ಸಂಪ್ಯ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News