ಹೆನ್ರಿಗಿಂತ ಬಾಪೆ ಶ್ರೇಷ್ಠ: ಫ್ರಾನ್ಸ್ ಕೋಚ್

Update: 2018-07-21 19:12 GMT

ಪ್ಯಾರಿಸ್, ಜು.21: ಫ್ರಾನ್ಸ್ ತಂಡದಲ್ಲಿ ಅತೀಹೆಚ್ಚು ಗೋಲು ಬಾರಿಸಿದ ಆಟಗಾರ ಎಂಬ ಖ್ಯಾತಿಗೆ ಒಳಗಾಗಿರುವ ಥಿಯರಿ ಹೆನ್ರಿಗಿಂತ ಫಾರ್ವರ್ಡ್ ಆಟಗಾರ ಕೈಲ್ಯಾನ್ ಬಾಪೆ ತನ್ನ ಹತ್ತೊಂಬತ್ತರ ಹರೆಯದಲ್ಲಿ ಶ್ರೇಷ್ಠ ಸಾಧನೆ ಮಾಡಿದ್ದಾರೆ ಎಂದು ತಂಡದ ಕೋಚ್ ಡಿಡಿಯರ್ ಡೆಶಾಂಪ್ಸ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ರಶ್ಯದಲ್ಲಿ ಇತ್ತೀಚೆಗೆ ಕೊನೆಗೊಂಡ ಫಿಫಾ ವಿಶ್ವಕಪ್‌ನಲ್ಲಿ ಬಾಪೆ ತನ್ನ ಸಾಮರ್ಥ್ಯವನ್ನು ವಿಶ್ವಕ್ಕೆ ಪ್ರದರ್ಶಿಸಿದ್ದಾರೆ. ಫ್ರಾನ್ಸ್ ವಿಶ್ವಕಪ್ ಜಯಿಸುವಲ್ಲಿ 19ರ ಹರೆಯದ ಬಾಪೆ ಪ್ರಮುಖ ಪಾತ್ರ ವಹಿಸಿದ್ದರು. ಜೊತೆಗೆ ಈ ಕ್ರೀಡಾಕೂಟದಲ್ಲಿ ಆಡಿದ ಅತ್ಯಂತ ಕಿರಿಯ ಆಟಗಾರ ಎಂಬ ಖ್ಯಾತಿಗೂ ಪಾತ್ರರಾಗಿದ್ದರು. ಮಾಧ್ಯಮದ ಜೊತೆ ಮಾತನಾಡಿದ ಡೆಶಾಂಪ್, ಬಾಪೆಗೆ ತಾನು ಇತರರು ಮಾಡದಿರುವುದನ್ನು ಮಾಡುತ್ತೇನೆ ಎಂಬುದು ತಿಳಿದಿದೆ. ಆತ ತುಂಬಾ ಪ್ರತಿಭಾವಂತ. ಆತ ಏನನ್ನು ಸರಿ ಮಾಡಿದ್ದಾನೆ, ಏನನ್ನು ಮಾಡಿಲ್ಲ ಎಂದು ನಾನು ಆತನಿಗೆ ತಿಳಿಸುತ್ತೇನೆ. ಇತರರೂ ತಿಳಿಸುತ್ತಾರೆ. ಆದರೆ ಆತ ಎಲ್ಲವನ್ನೂ ತೆಗೆದುಕೊಂಡು ತನ್ನ ಆಟವನ್ನು ಉತ್ತಮಗೊಳಿಸಲು ನೋಡುತ್ತಿದ್ದರು ಎಂದು ತಿಳಿಸಿದ್ದಾರೆ. 1998ರಲ್ಲಿ ಡೇವಿಡ್ ಟ್ರೆಝೆಗೆಟ್ ಮತ್ತು ಥಿಯರಿ ಹೆನ್ರಿ ತಮ್ಮ ಹತ್ತೊಂಬತ್ತರ ಹರೆಯದಲ್ಲಿದ್ದರು. ಆದರೆ ಅವರು ಬಾಪೆಯಂಥ ಆಟವನ್ನು ಪ್ರದರ್ಶಿಸಿರಲಿಲ್ಲ. ನಾನು ಬಹಳಷ್ಟು ಉತ್ತಮ ಆಟಗಾರರ ಜೊತೆ ಆಡಿದ್ದೇನೆ, ತರಬೇತಿಯನ್ನೂ ನೀಡಿದ್ದೇನೆ. ಆದರೆ ಬಾಪೆಯಲ್ಲಿ ಏನೋ ವಿಶೇಷವಿದೆ. ಇನ್ನು ಆಟದ ಬಗ್ಗೆ ಹೇಳುವುದಾದರೆ ಆತ ಈಗ ಏನು ಮಾಡುತ್ತಿದ್ದಾನೆ ಮತ್ತು ಭವಿಷ್ಯದಲ್ಲಿ ಏನು ಮಾಡುತ್ತಾನೆ ಎಂಬ ಪ್ರಶ್ನೆಗೆ ನನ್ನ ಉತ್ತರ, ಆತ ಓರ್ವ ಫ್ರೆಂಚ್ ನಾಗರಿಕನಾಗಿರುವುದಕ್ಕೆ ನನಗೆ ಹೆಮ್ಮೆಯಿದೆ ಎಂದು ಡೆಶಾಂಪ್ಸ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News