ಫರಂಗಿಪೇಟೆ: ಅವ್ಯವಸ್ಥೆಗಳ ಆಗರವಾದ ಸಾರ್ವಜನಿಕ ಶೌಚಾಲಯ!

Update: 2018-07-22 08:20 GMT

ಫರಂಗಿಪೇಟೆ, ಜು.21: ಪುದು ಗ್ರಾಪಂ ವ್ಯಾಪ್ತಿಯ ಫರಂಗಿಪೇಟೆ ಜಂಕ್ಷನ್ ಬಳಿಯಿರುವ ಸಾರ್ವಜನಿಕರ ಶೌಚಾಲಯವು ಅವ್ಯವಸ್ಥೆಯ ಆಗರವಾಗಿದ್ದು, ಹೊಲಸು ನಾರುತ್ತಿದ್ದರೂ ಸ್ವಚ್ಛಗೊಳಿಸದೆ ಕಡೆಗಣಿಸಲಾಗಿದೆ ಎಂದು ಇಲ್ಲಿನ ನಿವಾಸಿಗಳು ದೂರಿದ್ದಾರೆ.

ನೀರಿನ ವ್ಯವಸ್ಥೆಯೂ ಇಲ್ಲದಿದ್ದು, ಉಪಯೋಗಿಸಲು ಸಾಧ್ಯವಿಲ್ಲದೆ ಗಬ್ಬು ವಾಸನೆ ಬೀರುತ್ತಿದೆ. ಶೌಚಾಲಯಕ್ಕೆ ಹೋಗುವ ದಾರಿಯು ಗಿಡ ಗಂಟಿಗಳಿಂದ ಕೂಡಿದೆ.

ಫರಂಗಿಪೇಟೆಯು ವಾಣಿಜ್ಯ ಕಟ್ಟಡ, ವ್ಯಾಪಾರ ವಹಿವಾಟು ಕೇಂದ್ರಗಳಿರುವ ಪ್ರದೇಶವಾಗಿದ್ದು, ಸುತ್ತಮುತ್ತಲಿನ ಜನರಿಗೆ ಶೌಚಾಲಯದ ಅಗತ್ಯವಿದೆ. ಸ್ವಚ್ಛತೆಗಾಗಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಅನುದಾನಗಳು ವ್ಯಯಿಸಿದರೂ, ಈ ಶೌಚಾಲಯದಲ್ಲಿ ಸುಧಾರಣೆ ಕಂಡು ಬಂದಿಲ್ಲ.

ಫರಂಗಿಪೇಟೆಯಿಂದ ಸುಮಾರು 200 ಮೀ. ದೂರದಲ್ಲಿ ಈ ಶೌಚಾಲಯದಲ್ಲಿ ತೆರೆದ ಶೌಚಾಲಯ ಮಾತ್ರವಿದ್ದು, ಬಾಗಿಲಿರುವ ಕೊಠಡಿಯನ್ನು ಮುಚ್ಚಲಾಗಿದೆ. ಇದರಿಂದ ಹೆದ್ದಾರಿಯಲ್ಲಿ ಸಂಚರಿಸುವ ಮಹಿಳೆಯರಿಗೆ ತುಂಬಾ ತೊಂದರೆಯಾಗಿದ್ದು, ಅವರು ಪಕ್ಕದಲ್ಲಿರುವ ರಾಧಾ ನರ್ಸಿಂಗ್ ಹೋಮ್ನ ಶೌಚಾಲಯಕ್ಕೆ ಹೋಗುವ ಪರಿಸ್ಥಿತಿ ಎದುರಾಗಿದೆ. ಮೂಲ ವ್ಯಾಪಾರಿಗಳು ಮಸೀದಿಯ ಶೌಚಾಲಯಕ್ಕೆ ತೆರಳುತ್ತಿದ್ದಾರೆ. ಪುದು ಗ್ರಾಪಂ ಈ ಬಗ್ಗೆ ಸೂಕ್ತ ಕ್ರಮ ಕೈಗೊಂಡು ಸ್ವಚ್ಚತೆಗೆ ಹೆಚ್ಚಿನ ಆದ್ಯತೆ ನೀಡಬೇಕೆಂಬುವುದು ಪ್ರಜ್ಞಾವಂತ ನಾಗರಿಕರ ಆಶಯವಾಗಿದೆ.

ಸರಕಾರಿ ಸ್ಥಳದ ಕೊರತೆಯಿಂದ ಫರಂಗಿಪೇಟೆಯಲ್ಲಿ ಸುಸುಜ್ಜಿತ ಶೌಚಾಲಯ ಮಾಡಲು ಸಾಧ್ಯವಾಗಿಲ್ಲ. ಹೊರಭಾಗದಲ್ಲಿ ಸರಕಾರಿ ಸ್ಥಳವಿದ್ದರೂ ಸೂಕ್ತವಾಗಿಲ್ಲ. ಮುಂದಿನ ದಿನಗಳಲ್ಲಿ ಪುದು ಗ್ರಾಮಕ್ಕೆ ಪಾವತಿಯ ಶೌಚಾಲಯ ಮಾಡುವ ಉದ್ದೇಶವಿದೆ.

 ಉಮರ್ ಫಾರೂಕ್, ಮಾಜಿ ಜಿಪಂ ಸದಸ್ಯ

ರಾಷ್ಟ್ರೀಯ ಹೆದ್ದಾರಿ ಹಾದು ಹೋಗುವ ಫರಂಗಿಪೇಟೆಯಲ್ಲಿ ಮಾರ್ಕೆಟ್, ವಾಣಿಜ್ಯ ವ್ಯವಹಾರದ ಕಟ್ಟಡಗಳು ಕಾರ್ಯಾ ಚರಿಸುತ್ತಿದ್ದು, ಸುತ್ತಮುತ್ತಲಿನ ಗ್ರಾಮದ ಜನರು ವ್ಯಾಪಾರ ವಹಿವಾಟುಗಳಿಗಾಗಿ ಇಲ್ಲಿಗೆ ಆಗಮಿಸುತ್ತಿರುತ್ತಾರೆ. ಆದ್ದರಿಂದ ಸಾರ್ವಜನಿಕರಿಗೆ ಸುಸಜ್ಜಿತವಾದ ಶೌಚಾಲಯದ ಅಗತ್ಯವಿದೆ.

 ಇಕ್ಬಾಲ್ ಅಮೆಮಾರ್, ಅಧ್ಯಕ್ಷ ಎಸ್ ಡಿಪಿಐ ಪುದು ಗ್ರಾಮ ಸಮಿತಿ

ಸಾರ್ವಜನಿಕರ ಅಗತ್ಯಗಳಿಗೆ ಅನುಕೂಲ ವಾಗುವಂತೆ ಫರಂಗಿಪೇಟೆಯಲ್ಲಿ ಸುಸಜ್ಜಿತ ಶೌಚಾಲಯ ನಿರ್ಮಾಣ ಮಾಡಲು ಸೂಕ್ತವಾದ ಸ್ಥಳವನ್ನು ಸರ್ವೇ ಮಾಡುತ್ತಾ ಇದ್ದು, ಪರ್ಯಾಯ ವ್ಯವಸ್ಥೆಯನ್ನು ಮಾಡಲಾಗುವುದು. ಈಗಿರುವ ಸಾರ್ವಜನಿಕ ಶೌಚಾಲಯ ಸಮರ್ಪಕವಾಗಿಲ್ಲ ಎಂದು ಸಾರ್ವಜನಿಕರಿಂದ ದೂರುಗಳು ಬಂದಿದೆ. ಶೌಚಾಲಯದ ಪಕ್ಕದಲ್ಲಿ ವಿದ್ಯುತ್ ಟ್ರಾನ್ಸ್ ಫಾರ್ಮರ್ ಕೂಡ ಅಳವಡಿಸಿದ್ದು, ಈ ಬಗ್ಗೆ ಮೆಸ್ಕಾಂ ಅಧಿಕಾರಿಗಳಲ್ಲಿ ಮಾತಾನಾಡಿದ್ದೇನೆ.

 ರಮ್ಲಾನ್, ಅಧ್ಯಕ್ಷ ಪುದು ಗ್ರಾಪಂ

Writer - ಖಾದರ್ ಫರಂಗಿಪೇಟೆ

contributor

Editor - ಖಾದರ್ ಫರಂಗಿಪೇಟೆ

contributor

Similar News