×
Ad

ಶಿಕ್ಷಕ, ಉಪನ್ಯಾಸಕ ವೃಂದದ ಸಮಸ್ಯೆ ಪರಿಹಾರಕ್ಕೆ ಮುಖ್ಯಮಂತ್ರಿಯೊಂದಿಗೆ ಚರ್ಚೆ: ಎಸ್.ಎಲ್.ಭೋಜೇಗೌಡ

Update: 2018-07-22 18:12 IST

ಮಂಗಳೂರು, ಜು. 22: ಶಿಕ್ಷಕರು ಮತ್ತು ಉಪನ್ಯಾಸಕರ ವಿವಿಧ ಬೇಡಿಕೆಗಳಿಗೆ ಸ್ಪಂದಿಸುವ ಸಲುವಾಗಿ ಎರಡು ವಾರದೊಳಗೆ ಮುಖ್ಯಮಂತ್ರಿಯೊಂದಿಗೆ ಚರ್ಚೆ ನಡೆಸಲಾಗುವುದು ಎಂದು ನೈಋತ್ಯ ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಭೋಜೇಗೌಡ ಹೇಳಿದ್ದಾರೆ.

ನಗರದ ಕೆನರಾ ಕಾಲೇಜಿನ ಸಭಾಂಗಣದಲ್ಲಿ ರವಿವಾರ ನಡೆದ ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜು ಅಧ್ಯಾಪಕರ ಸಂಘ(ಅಮುಕ್ತ್)ದ 32ನೇ ವಾರ್ಷಿಕ ಸಮಾವೇಶದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.

ಪ್ರಾಥಮಿಕ ಶಿಕ್ಷಣದಿಂದ ಕಾಲೇಜುವರೆಗೆ ಶಿಕ್ಷಕರು ಹಾಗೂ ಉಪನ್ಯಾಸಕರ ಹಲವು ವರ್ಷಗಳ ಸಮಸ್ಯೆಗಳಿಗೆ ಇನ್ನೂ ಪರಿಹಾರ ಸಿಕ್ಕಿಲ್ಲ. ಹಾಗಾಗಿ ಶಿಕ್ಷಕ ಕ್ಷೇತ್ರದ ಸಮಸ್ಯೆಗಳನ್ನು ಬಗೆಹರಿಸಲು ಆದ್ಯತೆ ನೀಡಬೇಕಾದ ಅನಿವಾರ್ಯತೆ ಇದೆ. ಶಿಕ್ಷಕ ಕ್ಷೇತ್ರದ ಪ್ರತಿನಿಧಿಗಳನ್ನು ಒಳಗೊಂಡ ಸಭೆಯಲ್ಲಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಕೂಡ ಪಾಲ್ಗೊಳ್ಳಲಿದ್ದಾರೆ. ಇದಕ್ಕಾಗಿ ದಿನವಿಡೀ ಮೀಸಲಿಡುವಂತೆ ಮುಖ್ಯಮಂತ್ರಿ ಬಳಿ ಮನವಿ ಮಾಡಲಾಗಿದೆ ಎಂದು ಎಸ್.ಎಲ್. ಭೋಜೇಗೌಡ ತಿಳಿಸಿದರು.

ನ್ಯೂ ಪೆನ್ಷ್‌ನ್ ಸ್ಕೀಂ (ಎನ್‌ಪಿಎಸ್)ನಿಂದಾಗಿ ಶಿಕ್ಷಕರು ಮತ್ತು ಉಪನ್ಯಾಸಕ ವೃಂದಕ್ಕೆ ಯಾವುದೇ ಪ್ರಯೋಜನವಾಗುತ್ತಿಲ್ಲ. ಇದೊಂದು ಕರಾಳ ಶಾಸನವಾಗಿ ಮಾರ್ಪಟ್ಟಿದೆ. ಶಿಕ್ಷಕ ಸಮುದಾಯಕ್ಕೆ ಪ್ರಯೋಜನವಾಗುವ ಸಲುವಾಗಿ ಇದನ್ನು ಬದಲಾಯಿಸಬೇಕಿದೆ. ಈ ನಿಟ್ಟಿನಲ್ಲಿ ಸುಪ್ರಿಂ ಕೋರ್ಟ್‌ನಲ್ಲಿ ಪ್ರಶ್ನಿಸುವುದಾಗಿ ಹೇಳಿದ ಎಸ್.ಎಲ್.ಭೋಜೇಗೌಡ, ಉತ್ತಮ ಸಮಾಜವನ್ನು ರೂಪಿಸುವ ಶಿಕ್ಷಕ ವರ್ಗದ ಸರ್ವ ಸಮಸ್ಯೆಗಳ ಅರಿವು ನನಗಿದೆ. ಸಾವಿರಾರು ಮಂದಿ ಅತಿಥಿ ಉಪನ್ಯಾಸಕರೂ ಸಂಕಷ್ಟದಲ್ಲಿರುವುದೂ ತಿಳಿದಿದೆ. ಇದಕ್ಕೆ ಪರಿಹಾರ ನೀಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು.

ಉಪನ್ಯಾಸಕರ ನಿವೃತ್ತಿ ವೇತನವನ್ನು ಕಡಿದುಕೊಳ್ಳುವ ಬದಲು ಮೊದಲು ಜನಪ್ರತಿನಿಧಿಗಳು ತಮ್ಮ ನಿವೃತ್ತಿ ವೇತವನ್ನು ಕಡಿತಗೊಳಿಸಲಿ ಎಂದು ಸವಾಲು ಹಾಕಿದ ಭೋಜೇಗೌಡ ನಿವೃತ್ತಿಯ ನಂತರ ಉಪನ್ಯಾಸಕರು ನೆಮ್ಮದಿಯಿಂದ ಮನೆಗೆ ಹೋಗುವಂತಾಗಬೇಕು. ಆದರೆ ಕೇಂದ್ರ ಸರಕಾರ ಹೊಸ ಪಿಂಚಣಿ ಯೋಜನೆಯಲ್ಲಿ ನಿವೃತ್ತಗೊಳ್ಳುವ ಉಪನ್ಯಾಸಕರಿಗೆ ಅನ್ಯಾಯವೆಸಗಲು ಮುಂದಾಗಿದೆ. ವಿಧಾನಸಭೆ ಹಾಗೂ ಲೋಕಸಭೆಯಲ್ಲಿ ಜನಪ್ರತಿನಿಧಿಗಳ ವೇತನ ಏರಿಕೆಗೆ ಚರ್ಚೆ ಇಲ್ಲದೆ ಅನುಮೋದನೆ ಸಿಗುತ್ತಿದೆ. ಆದರೆ ಉಪನ್ಯಾಸಕರ ವಿಚಾರದಲ್ಲಿ ಅಧಿವೇಶನದಲ್ಲಿ ಜನಪ್ರತಿನಿಧಿಗಳು ಚರ್ಚೆಯನ್ನೇ ನಡೆಸುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಶಿಕ್ಷಣ ಕ್ಷೇತ್ರದಲ್ಲಿ ಯಾವುದೇ ಹೊಸ ನಿಯಮವನ್ನು ಜಾರಿಗೆ ತರುವ ಮೊದಲು ಸುತ್ತೋಲೆ ಹೊರಡಿಸಲಾಗುತ್ತದೆ. ಐಎಎಸ್ ಅಧಿಕಾರಿಗಳು ವಿವೇಚನಾ ರಹಿತರಾಗಿ ಸುತ್ತೋಲೆಗಳನ್ನು ಹೊರಡಿಸಿ ಅನುಷ್ಠಾನಗೊಳಿಸುವಂತೆ ಕೆಳ ಹಂತದ ಅಧಿಕಾರಿಗೆ ಸೂಚನೆ ನೀಡುತ್ತಾರೆ. ಕೆಲವೊಮ್ಮೆ ಸುತ್ತೋಲೆಗಳು ಅವೈಜ್ಞಾನಿಕವಾಗಿದ್ದರೂ ಅವನ್ನೇ ಕಾಯ್ದೆಯಾಗಿ ಭಾವಿಸಲಾಗುತ್ತಿದೆ. ಇದರಿಂದಾಗಿ ಶಿಕ್ಷಣ ಸಮುದಾಯಕ್ಕೆ ತೊಂದರೆ ಉಂಟಾಗುತ್ತಿದೆ. ಆದ್ದರಿಂದ ಸುತ್ತೋಲೆ ಹೊರಡಿಸುವ ಮುನ್ನ ಶಿಕ್ಷಣ ತಜ್ಞರ ಜೊತೆಗೆ ಚರ್ಚೆ ನಡೆಸಬೇಕು ಎಂದು ಭೋಜೇ ಗೌಡ ಸಲಹೆ ನೀಡಿದರು.

ಈ ಸಂದರ್ಭ ಇತ್ತೀಚೆಗೆ ನಿವೃತ್ತಿಗೊಂಡ ಹಲವು ಉಪನ್ಯಾಸಕರನ್ನು ಗೌರವಿಸಲಾಯಿತು. ಅಲ್ಲದೆ ಪಿಎಚ್‌ಡಿ ಪದವಿ ಪಡೆದ ಹಾಗೂ ವಿಶೇಷ ಸಾಧನೆಗೈದ ಸಾಧಕರನ್ನು ಸನ್ಮಾನಿಸಲಾಯಿತು.

ಕಾಲೇಜು ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕ ಪ್ರೊ.ಮಹೇಶ್ ರಾವ್, ಕೆನರಾ ಹೈಸ್ಕೂಲ್ ಅಸೋಸಿಯೇಶನ್‌ನ ಕಾರ್ಯದರ್ಶಿ ಎಂ.ರಂಗನಾಥ ಭಟ್, ಕೆನರಾ ಕಾಲೇಜಿನ ಪ್ರಾಂಶುಪಾಲೆ ಡಾ. ಮಾಲಿನಿ ಕೆ.ವಿ., ಅಮುಕ್ತ್ ಉಪಾಧ್ಯಕ್ಷ ಡಾ.ಸಂಪತ್ ಕುಮಾರ್, ಕೋಶಾಧಿಕಾರಿ ದೇಜಮ್ಮ ಉಪಸ್ಥಿತರಿದ್ದರು.
ಅಮುಕ್ತ್ ಅಧ್ಯಕ್ಷ ಡಾ.ಉಮ್ಮಪ್ಪ ಪಿ ಪೂಜಾರಿ ಸ್ವಾಗತಿಸಿದರು. ಡಾ.ಬಿ.ಎ.ಕುಮಾರ್ ಹೆಗ್ಡೆ ವಂದಿಸಿದರು.

ಕಾಲೇಜಿನ ದಿನಗಳಲ್ಲಿ ನಾನು ಸಾಕಷ್ಟು ತುಂಟತನ ಮಾಡುತ್ತಿದ್ದೆ. ಆದ್ದರಿಂದ ಚಿಕ್ಕಮಗಳೂರು ಊರಿನ ಕಾಲೇಜಿನಿಂದ ನನಗೆ ವರ್ಗಾವಣೆ ಪ್ರಮಾಣ ಪತ್ರ ಕೊಟ್ಟು ಕಳುಹಿಸಿದರು. ಮಂಗಳೂರಿನ ಕೆನರಾ ಕಾಲೇಜಿನಲ್ಲಿ ಪ್ರವೇಶ ನಿರಾಕರಿಸಲಾಯಿತು. ಬಳಿಕ ಪುತ್ತೂರಿಗೆ ತೆರಳಿ ಕಾಲೇಜಿನ ಸ್ಥಾಪಕ ರಾಮ ಭಟ್ ಬಳಿ ಕಲಿಯುವಾಸೆ ವ್ಯಕ್ತಪಡಿಸಿದೆ. ಅವರು ನನ್ನ ಶುಲ್ಕವನ್ನು ಭರಿಸಿ ಕಾಲೇಜಿಗೆ ಸೇರಿಸಿಕೊಂಡರು. ಅಲ್ಲಿಂದ ನಾನು ಶಿಸ್ತಿನ ವಿದ್ಯಾರ್ಥಿಯಾಗಿ ವಿಶೇಷ ಶ್ರೇಣಿಯಲ್ಲಿ ತೇರ್ಗಡೆಯಾದೆ. ಅದುವೇ ನನ್ನ ಜೀವನಕ್ಕೆ ತಿರುವು ತಂದುಕೊಟ್ಟಿತು ಎಂದು ಭೋಜೇ ಗೌಡ ಹಳೆಯ ದಿನಗಳನ್ನು ಮೆಲುಕು ಹಾಕಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News