ಸ್ವಚ್ಛ ಮಂಗಳೂರು ಅಭಿಯಾನದ ವಿಶೇಷ ಕಾರ್ಯಕ್ರಮ

Update: 2018-07-22 12:56 GMT

ಮಂಗಳೂರು, ಜು.22: ರಾಮಕೃಷ್ಣ ಮಿಷನ್ ನೇತೃತ್ವದ ಸ್ವಚ್ಛ ಮಂಗಳೂರು ಅಭಿಯಾನದ ನಾಲ್ಕನೇ ಹಂತದ ಕೊನೆಯ ವಾರವಾದ ರವಿವಾರ ವಿಶೇಷ ಶ್ರಮದಾನವನ್ನು ಮಾರ್ನಮಿಕಟ್ಟೆ ಹಾಗೂ ಮಂಗಳಾದೇವಿ ಪರಿಸರದಲ್ಲಿ ಹಮ್ಮಿಕೊಳ್ಳಲಾಯಿತು.

ಮಾರ್ನಮಿಕಟ್ಟೆಯ ಬಳಿಯಿರುವ ರೈಲು ಸೇತುವೆಯ ಬಳಿಯ ಕಸ ಹಾಕುವ ಕಾಂಕ್ರಿಟ್ ತೊಟ್ಟಿ ಹಾಗೂ ಅದರ ಸುತ್ತಮುತ್ತಲಿನ ಜಾಗಗಳನ್ನು ಶುಚಿಗೊಳಿಸಲಾಯಿತು. ಹಿರಿಯ ನಾಗರಿಕ ಪುಣೆಯ ಚಂದ್ರಕಾಂತ ಕುಲಕರ್ಣಿ, ಸುರೇಶ್ ಶೆಟ್ಟಿ, ಕಮಲಾಕ್ಷ ಪೈ, ವಿಠಲದಾಸ್ ಪ್ರಭು, ಅನಿರುದ್ಧ ನಾಯಕ್ ಮತ್ತಿತರ ಸ್ವಯಂ ಸೇವಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡರು.

ಸ್ವಚ್ಛತಾ ದರ್ಶನ: ನಾಲ್ಕನೇ ಹಂತದಲ್ಲಿ ‘ಸ್ವಚ್ಛ ಮನಸ್ಸು ಅಭಿಯಾನ’ದ ಐದನೇ ಕಾರ್ಯಕ್ರಮವಾದ ‘ಸ್ವಚ್ಛತಾ ದರ್ಶನ’ವು ಸುಮಾರು 100 ಪ್ರೌಢಶಾಲೆಗಳಲ್ಲಿ ನಡೆಸಲಾಗಿತ್ತು. ವಿದ್ಯಾರ್ಥಿಗಳ ಮನಪರಿವರ್ತನೆ, ಆಲೋಚನೆ ಹಾಗೂ ಕ್ರಿಯಾತ್ಮಕ ಪ್ರತಿಕ್ರಿಯೆ ಆಧರಿಸಿ ನೂರು ಅಂಕಗಳ ಉತ್ತರ ಪತ್ರಿಕೆ ಸಹಿತ ಪ್ರಶ್ನೆ ಪತ್ರಿಕೆಗಳನ್ನು ನೀಡಲಾಗಿತ್ತು. ಮಂಗಳೂರು, ಪುತ್ತೂರು, ಬಂಟ್ವಾಳ ತಾಲೂಕಿನ ಸುಮಾರು ಹತ್ತು ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು.

ಕುಡಿಯುವ ನೀರಿನ ಘಟಕಗಳ ವಿತರಣೆ: ಸ್ವಚ್ಛತಾ ಅಭಿಯಾನದ ಪ್ರಯುಕ್ತ 10 ಶಾಲೆಗಳಲ್ಲಿ ಕುಡಿಯುವ ನೀರಿನ ಘಟಕಗಳನ್ನು ಅಳವಡಿಸಲಾಯಿತು. ವಿದ್ಯಾರ್ಥಿಗಳಿಗೆ ಹಾಗೂ ಶಿಕ್ಷಕರಿಗೆ ಶುದ್ಧ ಕುಡಿಯುವ ನೀರಿನ ಆವಶ್ಯಕತೆಯನ್ನು ಮನಗಂಡು ಹಾಗೂ ಶಾಲೆಗಳ ಮನವಿಯನ್ನು ಪರಿಗಣಿಸಿ ಈ ಘಟಕಗಳನ್ನು ನೀಡಲಾಗಿದೆ.

ಸ್ವಚ್ಛತೆಗಾಗಿ ಜಾದೂ: ಸ್ವಚ್ಛತೆಯ ಕುರಿತು ಜನರಲ್ಲಿ ಜಾಗೃತಿ ಮೂಡಿಸಲು ‘ಸ್ವಚ್ಛತೆಗಾಗಿ ಜಾದೂ’ ಎಂಬ ಕಾರ್ಯಕ್ರಮದ ಪ್ರದರ್ಶನಗಳನ್ನು 100 ಶಾಲೆಗಳಲ್ಲಿ ನಡೆಸಲು ಉದ್ದೇಶಿಸಲಾಗಿದ್ದು, ಆ ಪೈಕಿ 56 ಶಾಲೆಗಳಲ್ಲಿ ಜಾದೂಗಾರ ಕುದ್ರೋಳಿ ಗಣೇಶ್ ಮತ್ತು ಬಳಗವು ಈ ಅಭಿಯಾನ ನಡೆಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News