‘ಗೋ ರಕ್ಷಾ ದಳ’ದ ರಚನೆ: ಪೊಲೀಸ್ ಇಲಾಖೆ ಎಚ್ಚೆತ್ತುಕೊಳ್ಳಲು ಎಸ್‌ಡಿಪಿಐ ಆಗ್ರಹ

Update: 2018-07-22 12:58 GMT

ಮಂಗಳೂರು, ಜು.22: ದ.ಕ. ಜಿಲ್ಲೆಯಲ್ಲಿ ‘ಗೋ ರಕ್ಷಾ ದಳ’ ರಚನೆ ಬಗ್ಗೆ ವಿಹಿಂಪ ಜಿಲ್ಲಾಧ್ಯಕ್ಷ ಜಗದೀಶ್ ಶೇಣವ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿರುವ ಜಿಲ್ಲಾ ಮತ್ತು ನಗರ ಪೊಲೀಸ್ ಇಲಾಖೆಯು ಎಚ್ಚೆತ್ತುಕೊಳ್ಳುವಂತೆ ಎಸ್‌ಡಿಪಿಐ ದ.ಕ.ಜಿಲ್ಲಾ ಸಮಿತಿ ಆಗ್ರಹಿಸಿದೆ.

ಎಸ್‌ಡಿಪಿಐ ಜಿಲ್ಲಾಧ್ಯಕ್ಷ ಅಥಾವುಲ್ಲಾ ಜೋಕಟ್ಟೆ ಪತ್ರಿಕಾ ಹೇಳಿಕೆಯೊಂದನ್ನು ನೀಡಿ ಪೊಲೀಸರ ಕರ್ತವ್ಯ ನಿಷ್ಠೆಯ ಮೇಲೆ ಸಂಶಯ ವ್ಯಕ್ತಪಡಿಸಿರುವ ವಿಹಿಪಂ ಮುಖಂಡರು ಗೋ ರಕ್ಷಣೆಯ ಹೆಸರಿನಲ್ಲಿ ಗುಂಪು ಹಿಂಸಾ ಹತ್ಯೆಯನ್ನು ಮಂಗಳೂರಿನಲ್ಲಿ ಆರಂಭಿಸುವ ಮುನ್ಸೂಚನೆ ಇದಾಗಿದೆ. ಇದರ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ನಿಗಾ ಇರಿಸಬೇಕಾಗಿದೆ. ಪೊಲೀಸ್ ಇಲಾಖೆ ಮತ್ತು ಜಿಲ್ಲಾಡಳಿತವು ಈ ಸಂಘಟನೆಯ ಚಲನವಲನಗಳ ಬಗ್ಗೆ ಮಾಹಿತಿ ಪಡೆದು ಗೋ ರಕ್ಷಣೆಯ ಹೆಸರಿನಲ್ಲಿ ನಡೆಸುವ ಹಲ್ಲೆಗಳನ್ನು ತಡೆಯಲು ವಿಶೇಷ ತಂಡಗಳನ್ನು ರಚಿಸಬೇಕಾಗಿದೆ. ಇದರಲ್ಲಿ ಇಲಾಖೆಯು ನಿರ್ಲಕ್ಷ್ಯ ತೋರಿದರೆ ಉತ್ತರ ಭಾರತದಲ್ಲಿ ನಡೆಯುತ್ತಿರುವ ದಾಳಿಯ ರೀತಿಯಲ್ಲೇ ದ.ಕ. ಜಿಲ್ಲೆಯಲ್ಲೂ ದಾಳಿಗಳು ಆರಂಭವಾಗುವ ಸಾಧ್ಯತೆ ಇದೆ. ಇದನ್ನು ತಡೆಯಲು ಪೊಲೀಸ್ ಇಲಾಖೆ ಮುಂದಾಗಬೇಕು ಎಂದು ಒತ್ತಾಯಿಸಿದ್ದಾರೆ.

ಜಿಲ್ಲೆಯಲ್ಲಿ ಅಕ್ರಮ ಗೋ ಸಾಗಾಟ ಮತ್ತು ದರೋಡೆ ಮಾಡುವ ಸಂಘಪರಿವಾರದ ಕಾರ್ಯಕರ್ತರನ್ನು ವಿಹಿಪಂ ಮೊದಲು ತಡೆಯಬೇಕು. ಗೋ ಮಾಂಸ ರಫ್ತು ಮಾಡುವುದರಲ್ಲಿ ಭಾರತ ಎರಡನೇ ಸ್ಥಾನದಲ್ಲಿದೆ. ವಿಹಿಪಂ ಗೋಮಾಂಸ ರಫ್ತನ್ನು ತಡೆಯಲು ಕೇಂದ್ರ ಸರಕಾರವನ್ನು ಒತ್ತಾಯಿಸಬೇಕು. ಬಳಿಕ ಗೋ ರಕ್ಷಾ ದಳವನ್ನು ಆರಂಭಿಸಲಿ ಎಂದಿರುವ ಅಥಾವುಲ್ಲಾ ವಿಹಿಂಪ ನ ಶಾಂತಿ ಕದಡುವ ಪ್ರಯತ್ನಕ್ಕೆ ನೈಜ ಹಿಂದೂಗಳು ಯಾವುದೇ ರೀತಿಯ ಬೆಂಬಲವನ್ನು ನೀಡಲಾರರು ಎಂದು ಮನವಿ ಮಾಡಿದ್ದಾರೆ.

ಮಾಂಸ ವ್ಯಾಪಾರಸ್ಥರ ಸಂಘ: ವಿಹಿಪಂ ಗೋ ರಕ್ಷಾ ದಳ ರಚನೆಯ ಬಗ್ಗೆ ನೀಡಿರುವ ಹೇಳಿಕೆಯು ಹಾಸ್ಯಾಸ್ಪದವಾಗಿದೆ. ಗೋವುಗಳನ್ನು ಯಾರು, ಹೇಗೆ ರಕ್ಷಿಸಬೇಕು ಎಂದು ಗೋಪ್ರಿಯರಿಗೆ ಚೆನ್ನಾಗಿ ತಿಳಿದಿದೆ. ಹೀಗಿರುವಾಗ ಶಾಂತಿಯಿಂದಿರುವ ದ.ಕ.ಜಿಲ್ಲೆಯ ಜನತೆಯ ಮಧ್ಯೆ ಹುಳಿಹಿಂಡುವ ಕೆಲಸ ಮಾಡುವುದು ಶೋಭೆಯಲ್ಲ. ಲೋಕಸಭಾ ಚುನಾವಣೆಗೆ ಪೂರ್ವಭಾವಿಯಾಗಿ ಇಂತಹ ವಿಷಬೀಜ ಬಿತ್ತುವ ಪ್ರಯತ್ನ ಖಂಡನೀಯ ಎಂದು ಮಾಂಸ ವ್ಯಾಪಾರಸ್ಥರ ಸಂಘದ ಮುಖಂಡ ಅಲಿ ಹಸನ್ ತಿಳಿಸಿದ್ದಾರೆ.

 ಜಿಲ್ಲೆಯಲ್ಲಿ ಯಾರೇ ಆಗಲಿ, ಶಾಂತಿ ಕದಡುವ ಪ್ರಯತ್ನ ಮಾಡಬಾರದು. ಪೊಲೀಸ್ ಇಲಾಖೆಗೆ ಸವಾಲು ಎಂಬ ರೀತಿಯಲ್ಲಿ ಇಂತಹ ಪ್ರಯತ್ನ ಮಾಡಿದರೆ ಪೊಲೀಸರು ಕಠಿಣ ಕ್ರಮ ಜರಗಿಸಬೇಕು ಅವರು ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News