ರೋಟರಿ ವತಿಯಿಂದ ಹೊನಲು ಬೆಳಕಿನ ಕಬಡ್ಡಿ ಪಂದ್ಯಾಟ ಆಯೋಜನೆ: ಮಂಜುನಾಥ ಆಚಾರ್ಯ

Update: 2018-07-22 15:16 GMT

 ಬಂಟ್ವಾಳ, ಜು. 22 : ದ.ಕ.ಅಮೆಚೂರ್ ಕಬಡ್ಡಿ ಎಸೋಸಿಯೇಶನ್ ಮತ್ತು ಬಂಟ್ವಾಳ ತಾಲೂಕು ಅಮೆಚೂರ್ ಕಬಡ್ಡಿ ಎಸೋಸಿಯೇಶನ್‌ನ ವಾರ್ಷಿಕ ಮಹಾಸಭೆ ಬಿ.ಸಿ.ರೋಡ್ ರೋಟರಿ ಬಾಲ ಭವನ ಸಭಾಂಗಣದಲ್ಲಿ ರವಿವಾರ ಜರಗಿತು.

ಬಂಟ್ವಾಳ ರೋಟರಿ ಕ್ಲಬ್ ಅಧ್ಯಕ್ಷ ಮಂಜುನಾಥ ಆಚಾರ್ಯ ಅವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ನಮ್ಮ ನೆಲದ ನೆಚ್ಚಿನ ಕ್ರೀಡೆಯಾದ ಕಬಡ್ಡಿಯನ್ನು ಎಲ್ಲರೂ ಪ್ರೀತಿಸಬೇಕು.ಬಂಟ್ವಾಳ ರೋಟರಿ ಕ್ಲಬ್ 50ನೇ ವರ್ಷದ ಸಂಭ್ರಮಾಚರಣೆಯ ಪ್ರಯುಕ್ತ ಬಂಟ್ವಾಳದಲ್ಲಿ ಹೊನಲು ಬೆಳಕಿನ ಕಬಡ್ಡಿ ಪಂದ್ಯಾಟ ಆಯೋಜಿಸಲಾಗುವುದು ಎಂದು ಹೇಳಿದರು.

ಜಿ.ಪಂ.ಸದಸ್ಯ, ಎಸೋಸಿಯೇಶನ್ ಉಪಾಧ್ಯಕ್ಷ, ಎಂ.ತುಂಗಪ್ಪ ಬಂಗೇರ ಅವರು ಮುಖ್ಯ ಅತಿಥಿಯಾಗಿ ಮಾತನಾಡಿ, ಸಂಘ ಸಂಸ್ಥೆಗಳು ದೇಶೀ ಕ್ರೀಡೆಯಾದ ಕಬಡ್ಡಿ ಪಂದ್ಯಾಟಗಳನ್ನು ಸಂಘಟಿಸಿ ಕಬಡ್ಡಿ ಆಟಗಾರರರಿಗೆ ಪ್ರೋತ್ಸಾಹ ನೀಡಬೇಕು ಎಂದು ಹೇಳಿದರು.

ಎಸೋಸಿಯೇಶನ್ ಅಧ್ಯಕ್ಷ ರೋ ಪ್ರಕಾಶ ಕಾರಂತ ಅವರು ಅಧ್ಯಕ್ಷತೆ ವಹಿಸಿಮಾತನಾಡಿ, ತಾಲೂಕು ಎಸೋಸಿಯೇಷನ್ ಮೂಲಕ ತಾಲೂಕಿನಿಂದ ಉತ್ತಮ ಆಟಗಾರರನ್ನು ಆಯ್ಕೆ ಮಾಡಿ ಜಿಲ್ಲಾ ತಂಡಕ್ಕೆ ಆಯ್ಕೆ ಮಾಡಲಾಗುವುದು. ಕಬಡ್ಡಿ ಆಟಗಾರರು ಮತ್ತು ತೀರ್ಪುಗಾರರು ಕಬಡ್ಡಿ ಕ್ರೀಡೆ ಉಳಿಸಿ ಬೆಳೆಸಲು ಸಹಕಾರಿಗಳಾಗಬೇಕು. ಕಬಡ್ಡಿ ಪಂದ್ಯಾಟಗಳಲ್ಲಿ ಶಿಸ್ತಿಗೆ ಪ್ರಾಮುಖ್ಯತೆ ನೀಡಬೇಕು ಎಂದ ಅವರು ಎಸೋಸಿಯೇಷನ್ ನಿಂದ ಕಬಡ್ಡಿಯಲ್ಲಿ ಉತ್ತಮ ಸಾಧನೆ ಮಾಡಿದವರನ್ನು ಗುರುತಿಸಿ, ಗೌರವಿಸಲಾಗಿದೆ ಎಂದು ಹೇಳಿದರು.

ಅಮೆಚೂರ್ ಕಬಡ್ಡಿ ಎಸೋಸಿಯೇಶನ್ ಜಿಲ್ಲಾ ಸಂಘಟನಾ ಕಾರ್ಯದರ್ಶಿ, ಅಂತಾರಾಷ್ಟ್ರೀಯ ಆಟಗಾರ ಉದಯ ಚೌಟ ಅವರು ಮಾತನಾಡಿ, ಕಬಡ್ಡಿ ಆಟಗಾರರು ತಮ್ಮನ್ನು ಮಾರಿಕೊಳ್ಳುವ ಕಾರ್ಯ ಮಾಡಬಾರದು. ಸಂಪಾದನೆಗೋಸ್ಕರ ಕಬಡ್ಡಿಯನ್ನು ಆಯ್ಕೆ ಮಾಡಬೇಡಿ, ಕಬಡ್ಡಿಯಲ್ಲಿ ತೊಡಗಿಸಿ ಕೊಂಡು ಸಾಧನೆ ಮಾಡಿದಾಗ ಸಂಪಾದನೆಯಾಗುತ್ತದೆ ಎಂದು ಹೇಳಿದರು.

ಎಸೋಸಿಯೇಶನ್ ಜಿಲ್ಲಾ ಧ್ಯಕ್ಷ ರತನ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ ಪೂಜಾರಿ, ಸಲಹೆಗಾರ ಕೃಷ್ಣಪ್ಪ ಪೂಜಾರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಕಬಡ್ಡಿಯಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಾದ ಪಾಂಡುರಂಗ ಹನುಮಂತಪ್ಪ ಬಾವಿ, ಮಲ್ಲಿಕಾರ್ಜುನ ಭರಮಪ್ಪ ಗಾಣಿಗೇರ, ಸಿದ್ದಪ್ಪ ಫಕೀರಪ್ಪ ಜಲಗೇರ, ಸುಶ್ಮಿತಾ, ಮೊದಿನ್ ಬಾದ್‌ಷಾ ಹಾಗೂ ತರಬೇತುದಾರ ಆಸಿಫ್ ಪಡಂಗಡಿ, ತೀರ್ಪುಗಾರರ ಮಂಡಳಿ ಜಿಲ್ಲಾ ಸಂಚಾಲಕರಾಗಿ ಆಯ್ಕೆಯಾದ ಕೃಷ್ಣಪ್ಪ ಪೂಜಾರಿ ಅವರನ್ನು ಸಮ್ಮಾನಿಸಲಾಯಿತು. ಸಂಘಟಕರಾದ ಹಸೈನಾರ್ ಕುಕ್ಕಾಜೆ, ಸುದೀಪ್ ಶೆಟ್ಟಿ ಕೊಡಾಜೆ, ತುಂಗಪ್ಪ ಬಂಗೇರ, ಲತೀಫ್ ನೇರಳಕಟ್ಟೆ ಅವರನ್ನು ಅಭಿನಂದಿಸಲಾಯಿತು. ನಿಧನ ಹೊಂದಿದ ಕಬಡ್ಡಿ ಆಟಗಾರ ದೀಕ್ಷಿತ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಇದೆ ವೇಳೆ ಮುಂದಿನ ಸಾಲಿನ ನೂತನ ಕಾರ್ಯಕಾರಿ ಸಮಿತಿಯನ್ನು ಆಯ್ಕೆ ಮಾಡಲಾಯಿತು.  ಕಾರ್ಯಾಧ್ಯಕ್ಷ ಬೇಬಿ ಕುಂದರ್ ಸ್ವಾಗತಿಸಿದರು. ಬಾಲಕೃಷ್ಣ ನರಿಕೊಂಬು ವರದಿ ವಾಚಿಸಿದರು. ತಾಲೂಕು ಕೋಶಾಧಿಕಾರಿ ಬಾಬು ಮಾಸ್ಟರ್ ಲೆಕ್ಕ ಪತ್ರ ಮಂಡಿಸಿದರು. ನೂತನ ಕಾರ್ಯದರ್ಶಿ ಚಂದ್ರಶೇಖರ ಕರ್ಣ ವಂದಿಸಿದರು. ಕಾರ್ಯಕಾರಿ ಸದಸ್ಯ ಸೇಸಪ್ಪ ಮಾಸ್ಟರ್ ಅತಿಥಿಗಳನ್ನು ಪರಿಚಯಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News