'ಅಣ್ಣ ಈ ರೀತಿಯ ಕೃತ್ಯ ಮಾಡಲಾರ, ಆರೋಪ ನಿರಾಧಾರ'

Update: 2018-07-22 13:58 GMT

ಪುತ್ತೂರು, ಜು. 22: ಪತ್ರಕರ್ತೆ ಗೌರಿ ಲಂಕೇಶ್ ಹತ್ಯಾ ಪ್ರಕರಣಕ್ಕೆ ಸಂಬಂಧಿಸಿ ಮೋಹನ್ ನಾಯಕ್ ಮೇಲೆ ಹೊರಸಲಾಗಿರುವ ಆರೋಪಗಳು ನಿರಾಧಾರ. ಅವರು ಈ ರೀತಿಯ ಕೃತ್ಯ ಮಾಡಿರಲಿಕ್ಕಿಲ್ಲ. ಮೋಹನ್ ನಾಯಕ್ ತಪ್ಪು ಮಾಡಿಲ್ಲ ಎಂಬುವುದು ಇಂದಲ್ಲಾ ನಾಳೆ ತಿಳಿದೇ ತಿಳಿಯುತ್ತದೆ ಎನ್ನುತ್ತಾರೆ ಮೋಹನ್ ನಾಯಕ್ ಮನೆ ಮಂದಿ.

ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಆರೋಪಿಗಳಿಗೆ ಬಾಡಿಗೆ ಮನೆ ಹಾಗೂ ಗನ್ ಒದಗಿಸಿರುವ ಆರೋಪದ ಮೇರೆಗೆ ಬಂಧಿತನಾಗಿರುವ ಮೋಹನ್ ನಾಯಕ್ (53) ಮೂಲತ ಪುತ್ತೂರಿನವರು. ಪುತ್ತೂರಿನ ಅರುಣಾ ಚಿತ್ರಮಂದಿರದ ಬಳಿ ‘ನಾರಾಯಣಿ ಸ್ಟೋರ್’ ಎಂಬ ಹೆಸರಿನ ಅಂಗಡಿ ಹೊಂದಿದ್ದ ಉದ್ಯಮಿ, ಪುತ್ತೂರು ನಗರದ ಹೊರವಲಯದ ಚಿಕ್ಕಮುಡ್ನೂರು ಗ್ರಾಮದ ಕೆಮ್ಮಾಯಿ ನಿವಾಸಿ ವಾಸು ನಾಯಕ್ ಅವರ ಪುತ್ರ.

ನಮ್ಮ ಅಣ್ಣ ಹೇಗೆಂದು ನಮಗೆ ಗೊತ್ತು. ಅವರು ಈ ರೀತಿಯ ದುಕೃತ್ಯಗಳನ್ನು ಮಾಡುವವರಲ್ಲ ಎಂಬುವುದನ್ನು ನಾವು ಧೈರ್ಯವಾಗಿ ಹೇಳಬಲ್ಲೆವು. ಏನೋ ತಪ್ಪು ಅಭಿಪ್ರಾಯಗಳಿಂದಾಗಿ ಎಡವಟ್ಟಾಗಿದೆ. ಅಣ್ಣನನ್ನು ಈ ಪ್ರಕರಣದಲ್ಲಿ ಸಿಲುಕಿಸಿರುವ ಕುರಿತು ನಮಗೆ ಮಾಹಿತಿ ಇದ್ದು, ಅದರ ವಿರುದ್ದ ಏನು ಮಾಡಬೇಕೋ ಅದನ್ನು ನಾವು ಮಾಡುತ್ತೇವೆ. ಅಣ್ಣ ತಪ್ಪು ಮಾಡಿಲ್ಲ ಎಂಬುವುದು ಇವತ್ತಲ್ಲಾ ನಾಳೆ ಖಂಡಿತವಾಗಿಯೂ ತಿಳಿಯುತ್ತದೆ ಎಂದು ಮೋಹನ್ ನಾಯಕ್ ಅವರ ಸಹೋದರ (ತಮ್ಮ) , ಉದ್ಯಮಿಯಾಗಿರುವ ರವೀಂದ್ರ ನಾಯಕ್ ಅವರು ಪ್ರತಿಕ್ರಿಯಿಸಿದ್ದಾರೆ.

ಅಣ್ಣ ಮೋಹನ್ ನಾಯಕ್ ಹಿಂದೆ ಇಲ್ಲಿಯೇ ನಮ್ಮ ಜತೆ ವ್ಯಾಪಾರ ಮಾಡುತ್ತಿದ್ದರು. ಕಳೆದ ಕೆಲವು ವರ್ಷಗಳಿಂದ ಅವರು ಸುಳ್ಯ ತಾಲ್ಲೂಕಿನ ಸಂಪಾಜೆಯ ಮುಂಡಡ್ಕದಲ್ಲಿರುವ ತಂದೆಯ ಆಸ್ತಿಯನ್ನು ನೋಡಿಕೊಳ್ಳುತ್ತಿದ್ದು, ಅಲ್ಲೇ ಅವರು ಮನೆ ಮಾಡಿಕೊಂಡು ಪತ್ನಿ ಮತ್ತು ಇಬ್ಬರು ಮಕ್ಕಳೊಂದಿಗೆ ವಾಸವಿದ್ದಾರೆ. ನಮ್ಮ ಸಂಬಂಧ ಈಗಲೂ ಹಾಗೆಯೇ ಇದೆ. ಅವರು ಆಗಾಗ ಇಲ್ಲಿಗೆ ಬರುತ್ತಿದ್ದರು. ಕಾರ್ಯಕ್ರಮಗಳಿದ್ದಲ್ಲಿ ಬಂದು ಹೋಗುತ್ತಿದ್ದರು. ಆದರೆ ಕೆಲವು ಮಾಧ್ಯಮಗಳಲ್ಲಿ ಏನೆಲ್ಲಾ ಕಪೋಲಕಲ್ಪಿತ ವರದಿಗಳು ಬರುತ್ತಿರುವುದು ನೋವುಂಟು ಮಾಡಿದೆ ಎಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News