ಬೆಳ್ತಂಗಡಿ: ಕಥೊಲಿಕ್ ಸೋಸೈಟಿಯಿಂದ ವಿದ್ಯಾರ್ಥಿ ವೇತನ ವಿತರಣೆ

Update: 2018-07-22 14:16 GMT

ಬೆಳ್ತಂಗಡಿ, ಜು. 22: ಹಿಂದಿನ ಕಾಲದಲ್ಲಿ ಶಿಕ್ಷಣ ಪಡೆಯಲು ಆರ್ಥಿಕವಾಗಿ ಸಂಕಷ್ಟಗಳೊಂದಿಗೆ ಇತರೆ ಸಮಸ್ಯೆಗಳೂ ಇತ್ತು ಆದರೆ ಇಂದು ವಿವಿಧ ಸಂಘಸಂಸ್ಥೆಗಳು, ಸರಕಾರಗಳು ನೀಡುವ ವಿದ್ಯಾರ್ಥಿ ವೇತನದೊಂದಿಗೆ ಪ್ರೀತಿ, ಪ್ರೋತ್ಸಾಹ ಸಿಗುತ್ತಿದೆ. ಇಂತಹ ಅವಕಾಶವನ್ನು ವಿದ್ಯಾರ್ಥಿಗಳು ಬಳಸಿಕೊಂಡು ವಿದ್ಯಾವಂತರಾಗಬೇಕು ಎಂದು ಬೆಳ್ತಂಗಡಿ ಪ್ರಧಾನ ಚರ್ಚ್‌ನ ಧರ್ಮಗುರುಗಳಾದ ವಂ ಫಾ ಬೊನವೆಂಚರ್ ನಜ್ರತ್ ನುಡಿದರು.

ಅವರು ಶನಿವಾರ ಬೆಳ್ತಂಗಡಿ ಕಥೋಲಿಕ್ ಕ್ರೆಡಿಟ್ ಕೋ. ಆಪರೇಟಿವ್ ಸೊಸೈಟಿ ಸಭಾಭವನದಲ್ಲಿ ಸೋಸೈಟಿಯ ವತಿಯಿಂದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಿಸಿ ಆಶೀರ್ವಚನ ನೀಡಿದರು.

ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ಪಡೆಯಲು ಹಲವಾರು ಸಂಘ ಸಂಸ್ಥೆಗಳು ಪ್ರೋತ್ಸಾಹ ನೀಡುತ್ತಿದೆ. ಇಂತಹ ಸಂಸ್ಥೆಗಳ ಸಾಲಿಗೆ ಕಥೋಲಿಕ್ ಸೊಸೈಟಿಯೂ ಸೇರುತ್ತದೆ. ವಿದ್ಯಾರ್ಜನೆಗೆ ಸಂಸ್ಥೆ ನೀಡುವ ಪ್ರೋತ್ಸಾಹ ಶ್ಲಾಘನೀಯವಾದದ್ದು. ವಿದ್ಯಾವಂತರಾಗಿ ಸಂಪಾದನೆಯ ಹಿಂದೆ ಹೋಗುವ ಮೊದಲು ಮನುಷ್ಯತ್ವದೊಂದಿಗೆ ಉತ್ತಮ ಸಂಸ್ಕಾರವಂತರಾಗಬೇಕು. ಸಮಾಜ ಕಟ್ಟುವ ಕಾರ್ಯದಲ್ಲಿ ತೊಡಗಿಸಿಕೊಂಡು ಶಿಕ್ಷಣವಂತರಾಗಿ ಎಂದರು.

ಸೊಸೈಟಿ ಅಧ್ಯಕ್ಷ ಹೆನ್ರಿ ಲೋಬೋ ಮಾತನಾಡಿ. ಸೊಸೈಟಿಯ ಎಲ್ಲಾ ನಿರ್ದೇಶಕರ ಹಾಗೂ ಸದಸ್ಯರ ಸಹಕಾರದಿಂದ ಇಂದು ಸಂಸ್ಥೆ ಲಾಭಾಂಶದಲ್ಲಿ ನಡೆಯುತ್ತಿದೆ. ಇದರಿಂದ ನಾವು ಸಮಾಜದ ವಿದ್ಯಾರ್ಥಿಗಳಿಗೆ ಅಲ್ಲದೆ ಇನ್ನಿತರ ಸಾಮಾಜಿಕ ಸೇವೆಗಳಿಗೆ ಸಹಾಯಹಸ್ತ ನೀಡಿದ್ದೇವೆ. 2013ರಿಂದ ಉನ್ನತ ಶಿಕ್ಷಣ ಪಡೆಯುವ ಆಸಕ್ತ ವಿದ್ಯಾರ್ಥಿಗಳನ್ನು ಗುರುತಿಸಿ ವಿದ್ಯಾರ್ಥಿ ವೇತನ ನೀಡಿ ಶಿಕ್ಷಣಕ್ಕೆ ಪ್ರೋತ್ಸಾಹ ನೀಡಲಾಗುತ್ತಿದೆ. ವಿದ್ಯಾರ್ಥಿಗಳು ಚೆನ್ನಾಗಿ ಕಲಿಯಬೇಕು, ಸಮಾಜದಲ್ಲಿ ಒಳ್ಳೆಯ ವ್ಯಕ್ತಿಗಳಾಗಿ ಬಾಳಬೇಕು, ಗುರುಹಿರಿಯರಲ್ಲಿ ವಿಧೇಯಕರಾಗಿ ವರ್ತಿಸಿರಿ ಎಂದು ಸಲಹೆ ನೀಡಿದರು.

ಕಾಲೇಜು, ಸ್ನಾತಕೋತ್ತರ ಹಾಗೂ ತಾಂತ್ರಿಕ ಕಾಲೇಜುಗಳಲ್ಲಿ ಕಲಿಯುವ 21 ಮಂದಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಿಸಲಾಯಿತು. ಉಪಾಧ್ಯಕ್ಷ ಆಲ್ಬರ್ಟ್ ಡಿಸೋಜ ವಿದ್ಯಾರ್ಥಿಗಳ ಪಟ್ಟಿ ಓದಿದರು. ವೇದಿಕೆಯಲ್ಲಿ ಸಂಸ್ಥೆಯ ನಿರ್ದೇಶಕರಾದ ಜೇಮ್ಸ್ ಡಿಸೋಜ, ಲಾರೆನ್ಸ್ ಡಿಸೋಜ, ಐ. ಎಲ್. ಪಿಂಟೋ, ಜೋಸೆಫಿನ್ ಪಿಂಟೋ, ಜೋಮೇರಿ ಶೆಣೈ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಾಲ್ಟರ್ ಡಿಸೋಜ, ನಾರಾವಿ ಹಾಗೂ ಅಳದಂಗಡಿ ಸಂಸ್ಥೆಗಳ ವ್ಯವಸ್ಥಾಪಕರಾದ ಜೇರೋಮ್ ಡಿಸೋಜ, ಮಲ್ಲಿಕಾ ಮೋನಿಸ್ ಉಪಸ್ಥಿತರಿದ್ದರು.

ನಿರ್ದೇಶಕ ಎಲೋಸಿಯಸ್ ಲೋಬೋ ಸ್ವಾಗತಿಸಿ, ಪ್ರಸ್ತಾವಿಸಿದರು. ನಿರ್ದೇಶಕರಾದ ಆಲ್ಫೋನ್ಸ್ ಫ್ರಾಂಕೋ ಕಾರ್ಯಕ್ರಮ ನಿರ್ವಹಿಸಿ, ಸಿಪ್ರಿಯನ್ ಫೆರ್ನಾಂಡೀಸ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News