ಪಡುಬಿದ್ರೆಯಲ್ಲಿ ಆಟಿದ ಕೂಟ ಕಾರ್ಯಕ್ರಮ

Update: 2018-07-22 14:50 GMT

ಪಡುಬಿದ್ರೆ, ಜು. 22: ತುಳುನಾಡಿನ ಕೃಷಿ ಪದ್ದತಿ, ಆಚರಣೆಗಳ ಬಗ್ಗೆ ಯುವ ಪೀಳೆಗೆಗೆ ತಿಳುವಳಿಕೆ ನೀಡುವ ಮೂಲಕ ಭಾಷೆ ಉಳಿವಿಗೆ ಪ್ರಯತ್ನ ಮುಂದುವರಿಸಬೇಕು ಎಂದು ಮಂಜೇಶ್ವರ ವರ್ಕಾಡಿ ಬಂಟರ ಸಂಘದ ಮಹಿಳಾ ವಿಭಾಗದ ಅಧ್ಯಕ್ಷೆ ಆಶಾ ದಿಲೀಪ್ ರೈ ಸುಳ್ಯಮೆ ಹೇಳಿದರು.

ಪಡುಬಿದ್ರೆ ಬಂಟರಯಾನೆ ನಾಡವರ ಸಂಘದ ಮಹಿಳಾ ವಿಭಾಗ ಬಂಟರ ಭವನದಲ್ಲಿ ರವಿವಾರ ಆಯೋಜಿಸಿದ್ದ ಆಟಿದ ಕೂಟ ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣ ಮಾಡಿದ ಅವರು, ತುಳು ಭಾಷೆ, ಸಂಸ್ಕೃತಿಗೆ ಇತಿಹಾಸವಿದ್ದು, ಭಾಷೆ, ದೇಹ ಹಾಗೂ ಆತ್ಮವಿದ್ದಂತೆ. ತುಳುವರ ಆಚರಣೆಗಳು ಮೂಡ ನಂಬಿಕೆಯಲ್ಲ. ಅ ಆಚರಣೆಗಳಲ್ಲಿಯೂ ತನ್ನದೇ ಆದ ಮಹತ್ವವಿದೆ ಎಂದರು.

ಇಂದಿನ ಮಕ್ಕಳು ಏಕತಾನತೆಯೊಂದಿಗೆ ಆಧುನಿಕ ಮಾಧ್ಯಮಗಳನ್ನು ಅತಿಯಾಗಿ ನೆಚ್ಚಿಕೊಳ್ಳುತ್ತಿರುವುದರಿಂದ ಸಮಾಜದೊಂದಿಗಿನ ಭಾವನಾತ್ಮಕ ಸಂಬಂಧದಿಂದ ವಿಮುಖರಾಗುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ ಅವರು, ಆಟಿ ಕೂಟದಂತಹ ಕಾರ್ಯಕ್ರಮಗಳಲ್ಲಿ ಕೇವಲ ಮಹಿಳೆಯರೇ ಭಾಗವಹಿಸದೇ, ಮಕ್ಕಳನ್ನೂ ತೊಡಗಿಸಿಕೊಳ್ಳುವ ಮೂಲಕ ಆಚರಣೆಯ ಪ್ರಸ್ತುತತೆಯನ್ನು ಅವರಿಗೆ ತಿಳಿಯಪಡಿಸಲು ಪ್ರಯತ್ನಿಸಬೇಕು ಎಂದರು.

ಇಂಗ್ಲಿಷ್ ಅನ್ನ ಕೊಡುವ ಭಾಷೆಯಾದರೂ, ಕೀಳರಿಮೆ ಬಿಟ್ಟು ತಾಯಿ ಭಾಷೆಯಾಗಿರುವ ತುಳು ಭಾಷೆಯಲ್ಲಿ ಸಂವಹನ ನಡೆಸಬೇಕು. ಪ್ರಾದೇಶಿಕ ಭಾಷೆಯಾಗಿರುವ ತುಳುವನ್ನು ಸಂವಿಧಾನದ 8 ನೇ ಪರಿಚ್ಛೇದಕ್ಕೆ ಸೇರಿಸುವ ಪ್ರಯತ್ನಗಳು ನಡೆದಿವೆ.

ಪಡುಬಿದ್ರೆ ಬಂಟರ ಸಂಘದ ಮಹಿಳಾ ವಿಭಾಗದ ಅಧ್ಯಕ್ಷೆ ಅಕ್ಷತಾ ಎಸ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಶಿರ್ವ ಮಹಿಳಾ ಮಂಡಲದ ಅಧ್ಯಕ್ಷೆ ಬಬಿತಾ ಅರಸ್, ಪಡುಬಿದ್ರಿ ಬಂಟರ ಸಂಘದ ಅಧ್ಯಕ್ಷ ಮನೋಹರ ಶೆಟ್ಟಿ, ಸಿರಿಮುಡಿ ದತ್ತಿನಿಧಿ ಗೌರವಾಧ್ಯಕ್ಷ ಸಾಂತೂರು ಭಾಸ್ಕರ ಶೆಟ್ಟಿ, ಕಾರ್ಯದರ್ಶಿ ಮನೋಜ್ ಕುಮಾರ್ ಶೆಟ್ಟಿ, ಕೋಶಾಧಿಕಾರಿ ಶರತ್ ಶೆಟ್ಟಿ, ಪಡುಬಿದ್ರಿ ಬಂಟ್ಸ್ ವೆಲ್‌ಫೇರ್ ಟ್ರಸ್ಟ್ ಅಧ್ಯಕ್ಷ ವೈ. ಶಶಿಧರ ಶೆಟ್ಟಿ, ಬಂಟರ ಸಂಘದ ಮಹಿಳಾ ವಿಭಾಗದ ಕಾರ್ಯದರ್ಶಿ ಸುಮಂಗಲ ಎಸ್ ಶೆಟ್ಟಿ, ಕೋಶಾಧಿಕಾರಿ ರಶ್ಮಿ ಎಚ್ ಶೆಟ್ಟಿ ಉಪಸ್ಥಿತರಿದ್ದರು.

ಸಂಘದ ಸದಸ್ಯರು ಮನೆಗಳಲ್ಲಿ ತಯಾರಿಸಿ ತಂದ 34 ಬಗೆಯ ಆಟಿ ಅಡುಗೆಗಳನ್ನು ಉಣ ಬಡಿಸಲಾಯಿತು. ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News