ವಿವಿಧ ಯೋಜನೆಗಳ ತರಬೇತಿ, ಪ್ರಚಾರಾಂದೋಲನ ಕಾರ್ಯಕ್ರಮ

Update: 2018-07-22 14:57 GMT

ಮಂಗಳೂರು, ಜು.22: ಕೇಂದ್ರ ಮತ್ತು ರಾಜ್ಯ ಕೈಗಾರಿಕಾ ಹಾಗೂ ಅಲ್ಪಸಂಖ್ಯಾತ ಇಲಾಖೆಯ ವಿವಿಧ ಯೋಜನೆ ಹಾಗೂ ತರಬೇತಿಗಳ ಮಾಹಿತಿಯ ಪ್ರಚಾರಾಂದೋಲನ ಕಾರ್ಯಕ್ರಮ ನಗರದ ಬಲ್ಮಠದಲ್ಲಿರುವ ಶಾಂತಿ ನಿಲಯದಲ್ಲಿ ರವಿವಾರ ನಡೆಯಿತು.

ಜಿಲ್ಲಾ ಕೈಗಾರಿಕಾ ಕೇಂದ್ರದ ಸಹಾಯಕ ನಿರ್ದೇಶಕ ಜಿ.ವಿವೇಕಾನಂದ ಮಾತನಾಡಿ, ಕೇಂದ್ರ ಸರಕಾರದ ಪ್ರಧಾನಮಂತ್ರಿ ಉದ್ಯೋಗ ಸೃಜನ ಕಾರ್ಯಕ್ರಮ ಮತ್ತು ರಾಜ್ಯ ಸರಕಾರದ ಮುಖ್ಯಮಂತ್ರಿ ಉದ್ಯೋಗ ಸೃಜನ ಕಾರ್ಯಕ್ರಮ ನಿರುದ್ಯೋಗಿಗಳಿಗೆ ಹೊಸ ಕೈಗಾರಿಕೆ ಸ್ಥಾಪನೆ ಮೂಲಕ ಸ್ವಯಂ ಉದ್ಯೋಗ ಕೈಗೊಳ್ಳಲು ಉತ್ತಮ ಯೋಜನೆಗಳಾಗಿವೆ ಎಂದರು.

ಒಂದು ಲಕ್ಷ ರೂ. ಮೊತ್ತದಲ್ಲಿ ಒಬ್ಬ ವ್ಯಕ್ತಿಗೆ ಉದ್ಯೋಗ ಸಿಗಬೇಕು ಎಂಬುದು ಈ ಯೋಜನೆಗಳ ಉದ್ದೇಶ. ಇದರಲ್ಲಿ ಬ್ಯಾಂಕ್‌ಗಳು ಸಾಲ ನೀಡುತ್ತಿವೆ. 25 ಲಕ್ಷ ರೂ. ಮೊತ್ತಕ್ಕೆ ಶೇ.35ರಷ್ಟು ಸಬ್ಸಿಡಿ ಸಿಗುತ್ತಿದ್ದು, ಇಂಥ ಯೋಜನೆ ಬೇರೆ ಯಾವ ಇಲಾಖೆಯಲ್ಲೂ ಸಿಗಲಾರದು. ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಪಾರದರ್ಶಕವಾಗಿ ಸಾಲ ಸೌಲಭ್ಯ ನೀಡಲಾಗುತ್ತಿದೆ ಎಂದು ಅವರು ಹೇಳಿದರು.

ಕೇಂದ್ರ ಸರಕಾರದ ಸಣ್ಣ ಕೈಗಾರಿಕಾ ಸಚಿವಾಲಯದ ಉಪನಿರ್ದೇಶಕ ಕೆ.ಸಾಕ್ರೆಟಿಸ್, ಕೇಂದ್ರ ಸರಕಾರದ ರಾಷ್ಟ್ರೀಯ ಸಣ್ಣ ಕೈಗಾರಿಕೆಗಳ ನಿಗಮದ ಮುಖ್ಯ ಪ್ರಧಾನ ವ್ಯವಸ್ಥಾಪಕ ಎಂ.ಶ್ರೀವತ್ಸನ್, ಅಲ್ಪಸಂಖ್ಯಾತ ಇಲಾಖೆ ಅಧಿಕಾರಿ ಫಾರೂಕ್, ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆಯ ಹಿರಿಯ ಮುಖ್ಯ ವ್ಯವಸ್ಥಾಪಕ ಎ.ಆರ್.ನಾಗೇಶ್ ತಮ್ಮ ಇಲಾಖೆಗಳ ಯೋಜನೆ ಮತ್ತು ತರಬೇತಿಗಳ ಬಗ್ಗೆ ಮಾಹಿತಿ ನೀಡಿದರು.

ಸಿಎಸ್‌ಐ ಕೆಎಸ್‌ಡಿ ದ.ಕ. ವಲಯ ಅಧ್ಯಕ್ಷ ರೆವೆರೆಂಡ್ ಪ್ರಭುರಾಜ್, ುಲ್ ಗಾಸ್ಪೆಲ್ ಪಾಸ್ಟರ್ಸ್ ಅಸೋಸಿಯೇಶನ್ ಉಪಾಧ್ಯಕ್ಷ ಡಾ.ಐ.ಡಿ.ಪ್ರಸನ್ನ, ವಾಲ್ಟರ್ ಮಾಬೆನ್, ಸತೀಶ್ ಪೆಂಗಲ್, ರಾಜ್ಯ ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕ ಶ್ರೀಧರ ಭಂಡಾರಿ ಉಪಸ್ಥಿತರಿದ್ದರು.

ಭಾರತೀಯ ಕ್ರೈಸ್ತ ಮಾನವ ಹಕ್ಕುಗಳ ಒಕ್ಕೂಟದ ಅಧ್ಯಕ್ಷ ಪ್ರಶಾಂತ್ ಜತ್ತನ್ನ ಸ್ವಾಗತಿಸಿದರು. ರಾಜ್ಯ ವಾಣಿಜ್ಯ ಮತ್ತು ಕೈಗಾರಿಕೆ ಸಲಹಾ ಮಂಡಳಿ ಕಾರ್ಯದರ್ಶಿ ಹ್ಯಾರಿ ಡಿಸೋಜ ಪ್ರಾಸ್ತಾವಿಕ ಮಾತನಾಡಿದರು. ಐಸಿವೈಎಂ ಅಧ್ಯಕ್ಷ ಜೈಸನ್ ಪಿರೇರ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News