ಮದ್ಯ ನಿಷೇಧ,ಆದರೆ ಬುಡಕಟ್ಟು ಜನರಿಗಲ್ಲ: ಛತ್ತೀಸ್‌ಗಡದ ಮಾಜಿ ಮುಖ್ಯಮಂತ್ರಿ

Update: 2018-07-22 15:23 GMT

ಹೊಸದಿಲ್ಲಿ,ಜು.22: ತನ್ನ ಪಕ್ಷವು ರಾಜ್ಯದಲ್ಲಿ ಅಧಿಕಾರಕ್ಕೆ ಬಂದರೆ ಮದ್ಯವನ್ನು ನಿಷೇಧಿಸಲಿದೆ,ಆದರೆ ಮದ್ಯವು ಬುಡಕಟ್ಟು ಜನರ ಸಂಸ್ಕೃತಿಯ ಭಾಗವಾಗಿರುವುದರಿಂದ ಅವರಿಗೆ ಮದ್ಯಪಾನಕ್ಕೆ ಅವಕಾಶ ನೀಡಲಾಗುವುದು ಎಂದು ಛತ್ತೀಸ್‌ಗಡದ ಮಾಜಿ ಮುಖ್ಯಮಂತ್ರಿ ಅಜಿತ ಜೋಗಿ ಅವರು ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

 ಪ್ರಬಲ ಬುಡಕಟ್ಟು ನಾಯಕ ಎಂದು ಪರಿಗಣಿಸಲಾಗಿರುವ ಜೋಗಿ,ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ತನ್ನ ಪಕ್ಷವು ಎಲ್ಲ 90 ಸ್ಥಾನಗಳಿಗೆ ಸ್ಪರ್ಧಿಸಲಿದೆ ಎಂದು ತಿಳಿಸಿದರು.

ತನ್ನ ಪಕ್ಷವು ಅಧಿಕಾರಕ್ಕೆ ಬಂದರೆ ಬುಡಕಟ್ಟು ಜನರು ವಾಸವಾಗಿರುವ ಪ್ರದೇಶಗಳನ್ನು ಹೊರತುಪಡಿಸಿ ಸಂಪೂರ್ಣ ರಾಜ್ಯದಲ್ಲಿ ಮದ್ಯ ನಿಷೇಧವನ್ನು ಹೇರುವುದಾಗಿ ತಿಳಿಸಿದ ಅವರು,ಕೆಲವು ಕುಟುಂಬಗಳಲ್ಲಿ ಪುರುಷರು ತಮ್ಮ ಸಂಪೂರ್ಣ ಗಳಿಕೆಯನ್ನು ಮದ್ಯಕ್ಕಾಗಿ ವೆಚ್ಚ ಮಾಡುತ್ತಿದ್ದಾರೆ ಎಂಬ ವರದಿಗಳಿವೆ. ಹೀಗಾಗಿ ಮದ್ಯ ನಿಷೇಧ ಅಗತ್ಯವಾಗಿದೆ ಎಂದರು.

ಮದ್ಯ ನಿಷೇಧಕ್ಕೆ ಎರಡು ಮಾನದಂಡಗಳ ಕುರಿತ ಪ್ರಶ್ನೆಗೆ ಅವರು,ಕ್ರಮೇಣ ಬುಡಕಟ್ಟು ಪ್ರದೇಶಗಳಲ್ಲಿಯೂ ಮದ್ಯ ನಿಷೇಧವನ್ನು ಜಾರಿಗೊಳಿಸಲಾಗುವುದು ಎಂದು ಉತ್ತರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News