×
Ad

ಶಿರೂರು ಮೂಲಮಠಕ್ಕೆ ಮುಂದುವರೆದ ಭದ್ರತೆ: ಭಕ್ತರ ಭೇಟಿಗೆ ನಿರ್ಬಂಧ

Update: 2018-07-22 21:17 IST

ಉಡುಪಿ, ಜು. 22: ಶಿರೂರು ಶ್ರೀ ಲಕ್ಷ್ಮೀವರ ತೀರ್ಥ ಸ್ವಾಮೀಜಿ ನಿಗೂಢ ಸಾವಿನ ಬಳಿಕ ಹಿರಿಯಡ್ಕ ಸಮೀಪದ ಶಿರೂರು ಮೂಲ ಮಠದಲ್ಲಿ ನೀರಾವ ಮೌನ ಆವರಿಸಿದ್ದು, ಮಠದ ಸುತ್ತ ಬಿಗಿ ಪೊಲೀಸ್ ಭದ್ರತೆಯನ್ನು ಮುಂದುವರೆಸಲಾಗಿದೆ.

ಕಳೆದ ಒಂದೂವರೆ ವರ್ಷಗಳಿಂದ ಶಿರೂರು ಸ್ವಾಮೀಜಿ ಮೂಲ ಮಠದಲ್ಲೇ ಉಳಿದುಕೊಂಡಿದ್ದು, ಇದೀಗ ಸ್ವಾಮೀಜಿಯ ಸಾವಿನ ಬಳಿಕ ಮೂಲಮಠ ಜನರಿಲ್ಲದೆ ಬಿಕೋ ಎನ್ನುತ್ತಿದೆ. ನಾಲ್ವರು ಕೆಲಸದಾಳು ಹಾಗೂ ಪೊಲೀಸರ ಹೊರತು ಉಳಿದಂತೆ ಯಾರು ಕೂಡ ಇತ್ತ ಸುಳಿದಾಡುತ್ತಿಲ್ಲ.

ಭಕ್ತರು ಹಾಗೂ ಸಾರ್ವಜನಿಕರ ಭೇಟಿಗೆ ಪೊಲೀಸರು ನಿರ್ಬಂಧ ಹೇರಿದ್ದಾರೆ. ಆದರೆ ದೈನಂದಿನ ಚಟುವಟಿಕೆಗಳಿಗೆ ಯಾವುದೇ ಅಡ್ಡಿಪಡಿಸಿಲ್ಲ. ಮಠದ ಕೆಲಸ ದಾಳು ವಿಠಲ ಹಾಗೂ ಮೂವರು ಮಹಿಳೆಯರು ಅಲ್ಲಿರುವ ನೂರಾರು ಗೋವುಗಳನ್ನು ನೋಡಿಕೊಳ್ಳುತ್ತಿದ್ದು, ಅವುಗಳಿಗೆ ಮೇವು ಹಾಗೂ ಆಹಾರ ತಿನ್ನಿಸುವ ಕೆಲಸ ಮಾಡುತ್ತಿದ್ದಾರೆ. ಪ್ರತಿದಿನ ಬೆಳಗಿನ ಜಾವ ಹಾಗೂ ಸಂಜೆ ವೇಳೆ ಸ್ಥಳೀಯ ಪುರೋಹಿತರು ಮಠಕ್ಕೆ ಆಗಮಿಸಿ ಪಟ್ಟಾಭಿರಾಮಚಂದ್ರ ಹಾಗೂ ಮುಖ್ಯಪ್ರಾಣ ದೇವರ ಪೂಜೆ ನೇರವೇರಿಸುತ್ತಿದ್ದಾರೆ.

ಮಠದೊಳಗೆ ನಿರ್ಮಿಸಿರುವ ಸ್ವಾಮೀಜಿಯ ವೃಂದಾವನಕ್ಕೆ ಪೊಲೀಸರು ಯಾರಿಗೂ ಪ್ರವೇಶ ಕಲ್ಪಿಸುತ್ತಿಲ್ಲ. ಈಗಾಗಲೇ ಅಲ್ಲಿಗೆ ಯಾರು ಹೋಗದಂತೆ ಬಾಗಿಲಿಗೆ ಬೀಗ ಹಾಕಿ ಮುಚ್ಚಲಾಗಿದೆ. ಮೇಲಾಧಿಕಾರಿಗಳ ಅನುಮತಿ ಇಲ್ಲದೆ ಯಾರಿಗೂ ಮಠದೊಳಗೆ ಪ್ರವೇಶ ನೀಡುತ್ತಿಲ್ಲ. ಬ್ರಹ್ಮಾವರ ಪೊಲೀಸ್ ಉಪ ನಿರೀಕ್ಷಕ ಮಧು ನೇತೃತ್ವದಲ್ಲಿ ಮಠದ ಸುತ್ತ ಭದ್ರತೆ ಮುಂದುವರೆಸಲಾಗಿದೆ. ಸ್ಥಳದಲ್ಲಿ ಒಂದು ಜಿಲ್ಲಾ ಸಶಸ್ತ್ರ ಮೀಸಲು ಪಡೆಯನ್ನು ನಿಯೋಜಿಸಲಾಗಿದೆ.

ಶಿರೂರು ಸ್ವಾಮೀಜಿ ಪ್ರೀತಿಯಿಂದ ಸಾಕಿದ ರೂಬಿ ಶ್ವಾನವನ್ನು ಮಠದ ಸಮೀಪದಲ್ಲೇ ಇರುವ ಕೆಲಸದವರ ಮನೆಯಲ್ಲಿ ಕೂಡಿ ಹಾಕಲಾಗಿದೆ. ಇದನ್ನು ಕೆಲಸದವರು ನೋಡಿಕೊಳ್ಳುತ್ತಿದ್ದಾರೆ. ಶಿರೂರು ಸ್ವಾಮೀಜಿ ಮೂಲಮಠದ ಜಾಗದಲ್ಲಿ ಆರಂಭಿಸಿರುವ ಕಟ್ಟಡ ಕಾಮಗಾರಿಗಳು ಅರ್ಧಕ್ಕೆ ನಿಂತಿದೆ. ಸ್ವಾಮೀಜಿ ಉಳಿದುಕೊಳ್ಳುವ ನಿವಾಸ, ಅತಿಥಿಗೃಹ, ಸಭಾಂಗಣದ ಕಾಮಗಾರಿಯು ಸ್ಥಗಿತಗೊಂಡಿರುವುದು ಕಂಡುಬಂದಿದೆ.

ವಿಷದ ಬಾಟಲಿ: ಎಸ್ಪಿ ಸ್ಪಷ್ಟನೆ

ಶಿರೂರು ಸ್ವಾಮೀಜಿಯನ್ನು ಗೊಡಂಬಿ ಜ್ಯೂಸ್‌ನಲ್ಲಿ ವಿಷ ಹಾಕಿ ಕೊಲೆಗೈಯ್ಯಲಾಗಿದೆ ಎಂಬ ಮಾಧ್ಯಮದ ವರದಿಯನ್ನು ನಿರಾಕರಿಸಿರುವ ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಲಕ್ಷ್ಮಣ್ ನಿಂಬರಗಿ, ಇಂತಹ ಯಾವುದೇ ಘಟನೆಗಳು ನಡೆದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಮಠದಲ್ಲಿ ವಿಷದ ಬಾಟಲಿ ಪತ್ತೆ ಹಾಗೂ ಸ್ವಾಮೀಜಿಯನ್ನು ಮಹಿಳೆ ಯೊಬ್ಬರು ಗೊಡಂಬಿ ಜ್ಯೂಸ್‌ನಲ್ಲಿ ವಿಷ ಬೆರೆಸಿ ನೀಡಿರುವ ಕುರಿತ ವರದಿಗಳು ಪ್ರಸಾರವಾಗಿತ್ತು. ಈ ಬಗ್ಗೆ ಎಸ್ಪಿ ಇಲಾಖೆಯ ಅಧಿಕೃತ ವಾಟ್ಸ್ಆ್ಯಪ್ ಗ್ರೂಪ್‌ನಲ್ಲಿ ಸ್ಪಷ್ಟನೆ ನೀಡಿ, ಇಂತಹ ಯಾವುದೇ ಘಟನೆಗಳು ನಡೆದಿಲ್ಲ. ಇದರಿಂದ ನಮ್ಮ ತನಿಖೆ ಹಾದಿ ತಪ್ಪುವ ಸಾಧ್ಯತೆ ಇದೆ ಎಂದು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News