ಕಡಿಯಾಳಿ ದೇವಳದ ಗೇಟು ವಿವಾದ: ಶಾಸಕರಿಂದ ವಾಗ್ವಾದ

Update: 2018-07-22 16:02 GMT

ಉಡುಪಿ, ಜು.22: ಕಡಿಯಾಳಿ ಶ್ರೀಮಹಿಷ ಮರ್ದಿನಿ ದೇವಸ್ಥಾನದ ಗೇಟು ಹಾಕುವ ವಿವಾದಕ್ಕೆ ಸಂಬಂಧಿಸಿ ಉಡುಪಿ ಶಾಸಕ ರಘುಪತಿ ಭಟ್, ಸ್ಥಳೀಯರು ಹಾಗೂ ದೇವಸ್ಥಾನ ವ್ಯವಸ್ಥಾಪನಾ ಸಮಿತಿಯ ಮಧ್ಯೆ ಇಂದು ವಾಗ್ವಾದಗಳು ನಡೆದು ಬಿಗುವಿನ ವಾತಾವರಣ ನಿರ್ಮಾಣವಾಯಿತು.

ದೇವಸ್ಥಾನಕ್ಕೆ ತೆರಳಿದ್ದ ಶಾಸಕರು ವಾಪಾಸ್ಸು ಬರುವಾಗ ದೇವಸ್ಥಾನದ ಗೇಟು ಹಾಕಿರುವುದನ್ನು ನೋಡಿ ಸ್ಥಳೀಯರೊಂದಿಗೆ ಸೇರಿ ಪ್ರತಿಭಟನೆ ನಡೆಸಿದರು. ಶಾಶ್ವತವಾಗಿ ಗೇಟು ತೆರವು ಮಾಡುವಂತೆ ಪಟ್ಟು ಹಿಡಿದರು. ಈ ಸಂದರ್ಭದಲ್ಲಿ ಸ್ಥಳಕ್ಕೆ ಆಗಮಿಸಿದ ದೇವಸ್ಥಾನ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಶ್ರೀನಿವಾಸ ಹೆಬ್ಬಾರ್ ಅವರೊಂದಿಗೆ ಶಾಸಕರು ಮಾತಿಗೆ ಇಳಿದರು. ಇದರಿಂದ ವಾಗ್ವಾದ ಗಳು ನಡೆದವು.

ಈ ಸಂದರ್ಭದಲ್ಲಿ ಸ್ಥಳಕ್ಕೆ ಆಗಮಿಸಿದ ಉಡುಪಿ ವೃತ್ತ ನಿರೀಕ್ಷಕ ನವೀನ್‌ಚಂದ್ರ ಜೋಗಿ ಗೇಟು ತೆರವುಗೊಳಿಸಲು ಸೂಚನೆ ನೀಡಿದರು. ಶಾಸಕರು ಇಲ್ಲಿ ಸಾಕಷ್ಟು ಮನೆಗಳಿರುವುದರಿಂದ ಶಾಶ್ವತವಾಗಿ ಗೇಟನ್ನು ತೆಗೆದಿರಿಸಬೇಕು ಮತ್ತು ಎಂದಿಗೂ ಗೇಟು ಹಾಕಬಾರದು ಎಂದು ಸೂಚಿಸಿದರು. ಸ್ಥಳೀಯರು ಕೂಡ ಶಾಸಕರ ಜೊತೆ ೇರಿ ಗೇಟು ತೆರವಿಗೆ ಒತ್ತಾಯಿಸಿದರು.

ಭದ್ರತೆಯ ದೃಷ್ಠಿಯಿಂದ ಹಿಂದಿನಿಂದಲೂ ಇಲ್ಲಿ ಗೇಟು ಹಾಕಲಾಗುತ್ತಿತ್ತು. ಮಧ್ಯಾಹ್ನ ಒಂದು ಗಂಟೆಯಿಂದ ಸಂಜೆ 4ಗಂಟೆಯವರೆಗೆ ದೇವಸ್ಥಾನ ಬಂದ್ ಆಗಿರುವುದರಿಂದ ಗೇಟನ್ನು ಕೂಡ ನಾವು ಬಂದ್ ಮಾಡುತ್ತೇವೆ ಎಂದು ಶ್ರೀನಿವಾಸ ಪ್ರಭು ತಿಳಿಸಿದರು. ಬಳಿಕ ಪೊಲೀಸರ ಮಧ್ಯಸ್ಥಿಕೆಯಲ್ಲಿ ಗೇಟು ತೆರವುಗೊಳಿಸಲಾಯಿತು. ಈ ಸಂಬಂಧ ಮುಂದಿನ ವಾರ ಅಧಿಕಾರಿಗಳ ಸಭೆ ಕರೆದು ಚರ್ಚಿಸುವ ಬಗ್ಗೆ ಶಾಸಕರು ಭರವಸೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News