ಹಲವು ಆಯಾಮಗಳಲ್ಲಿ ತನಿಖೆ: ಮಹಿಳೆಯ ಫ್ಲಾಟ್ ಪರಿಶೀಲನೆ

Update: 2018-07-22 16:47 GMT

ಉಡುಪಿ, ಜು.22: ಶಿರೂರು ಸ್ವಾಮೀಜಿ ನಿಗೂಢ ಸಾವಿಗೆ ಸಂಬಂಧಿಸಿದಂತೆ ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆಯನ್ನು ಮುಂದುವರೆಸಿದ್ದು, ಹಲವು ಮಹತ್ವದ ಸುಳಿವುಗಳು ಲಭ್ಯವಾಗಿವೆ ಎಂದು ತಿಳಿದು ಬಂದಿದೆ.

ಶಿರೂರು ಸ್ವಾಮೀಜಿಯೊಂದಿಗೆ ಆಪ್ತರಾಗಿದ್ದ ಮಹಿಳೆಗೆ ಶಿರೂರು ಸ್ವಾಮೀಜಿ ಖರೀದಿಸಿಕೊಟ್ಟಿದ್ದ ಕಿನ್ನಿಮುಲ್ಕಿಯಲ್ಲಿರುವ ಫ್ಲಾಟ್‌ನಲ್ಲಿ ಪೊಲೀಸ್ ತಂಡ ತಪಾ ಸಣೆ ಕಾರ್ಯ ನಡೆಸಿದೆ ಎನ್ನಲಾಗಿದೆ. ಇಲ್ಲಿ ಕೆಲವೊಂದು ಅಗತ್ಯ ಮಾಹಿತಿಗಳನ್ನು ಸಂಗ್ರಹಿಸುವ ನಿಟ್ಟಿನಲ್ಲಿ ಪೊಲೀಸರು ತಪಾಣೆ ನಡೆಸಿದ್ದಾರೆ. ಅಲ್ಲದೆ ಸ್ವಾಮೀಜಿಯೊಂದಿಗೆ ಹಲವು ವರ್ಷಗಳಿಂದ ಆಪ್ತರಾಗಿ ಗುರುತಿಸಿಕೊಂಡಿದ್ದ ಮಣಿಪಾಲ ಮಂಚಿಯ ವ್ಯಕ್ತಿಯನ್ನು ಕೂಡ ಪೊಲೀಸ್ ತಂಡವು ವಶಕ್ಕೆ ಪಡೆದುಕೊಂಡು ವಿಚಾರಣೆಗೆ ಒಳಪಡಿಸಿರುವ ಮಾಹಿತಿ ತಿಳಿದು ಬಂದಿದೆ. ಎರಡು ಮೂರು ದಿನಗಳಿಂದ ಪೊಲೀಸ್ ವಶದಲ್ಲಿರುವ ಈತನಿಂದ ಕೆಲವೊಂದು ಅಗತ್ಯ ಮಾಹಿತಿಗಳನ್ನು ಪೊಲೀಸರು ಕಲೆ ಹಾಕುತ್ತಿದ್ದಾರೆನ್ನಲಾಗಿದೆ.

ಅದೇ ರೀತಿ ಸೋಮವಾರದಂದು ಮೂಲಮಠದಲ್ಲಿ ನಡೆದ ವನಮಹೋತ್ಸವ ಕಾರ್ಯಕ್ರಮಕ್ಕೆ ಮಧ್ಯಾಹ್ನ ಅಡುಗೆ ಮಾಡಿರುವ ಕೆಲವರನ್ನು ಪೊಲೀಸರು ವಶದಲ್ಲಿ ಇರಿಸಿಕೊಂಡಿರುವುದಾಗಿ ತಿಳಿದುಬಂದಿದೆ. ಇದರಲ್ಲಿ ಕೆಲವರನ್ನು ಪೊಲೀಸರು ಸಾಕ್ಷಿಗಳಾಗಿ ಪರಿಗಣಿಸುವ ಸಾಧ್ಯತೆ ಇದೆ ಎನ್ನಲಾಗಿದೆ.

ಪ್ರಕರಣಕ್ಕೆ ಸಂಬಂಧಿಸಿ ರಚಿಸಲಾದ ಹಲವು ಪೊಲೀಸ್ ತಂಡಗಳು ಬೇರೆ ಬೇರೆ ಆಯಾಮಗಳಲ್ಲಿ ತನಿಖೆ ನಡೆಸುವ ನಿಟ್ಟಿನಲ್ಲಿ ತೊಡಗಿಸಿಕೊಂಡಿದೆ. ಒಂದು ತಂಡ ಶಿರೂರು ಮೂಲಮಠದ ಸಿಸಿ ಕ್ಯಾಮೆರಾದಲ್ಲಿ ದಾಖಲಾಗಿರುವ ದೃಶ್ಯಗಳನ್ನು ಪರಿಶೀಲನೆ ನಡೆಸುತ್ತಿದೆ ಎಂದು ತಿಳಿದು ಬಂದಿದೆ. ಒಟ್ಟಾರೆ ಇನ್ನು ಕಂಗ್ಗಟ್ಟಾಗಿರುವ ಈ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆಯನ್ನು ನಡೆಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News