ಮಂಗಳೂರು: ಗೋಡಂಬಿ ಕಾರ್ಮಿಕರಿಗೆ ಪರಿಷ್ಕೃತ ಕನಿಷ್ಟ ಕೂಲಿ ಜಾರಿಗೊಳಿಸಲು ಆಗ್ರಹ
Update: 2018-07-23 18:10 IST
ಮಂಗಳೂರು, ಜು.23: ಕರ್ನಾಟಕದ ಗೋಡಂಬಿ ಕಾರ್ಖಾನೆಗಳಲ್ಲಿ ದುಡಿಯುವ ಕಾರ್ಮಿಕರಿಗೆ ಕನಿಷ್ಟ ಕೂಲಿ ಪರಿಷ್ಕರಿಸಿ ಸರಕಾರ ಅಧಿಸೂಚನೆಯನ್ನು ಹೊರಡಿಸಿದೆ. ಅದರಂತೆ ಎಪ್ರಿಲ್ 1ರಿಂದ ರಾಜ್ಯದ ಎಲ್ಲಾ ಗೋಡಂಬಿ ಕಾರ್ಮಿಕರಿಗೂ ಅದನ್ನು ಜಾರಿಗೊಳಿಸಬೇಕಾಗಿದೆ. ಆದರೆ ಮಾಲಕರು ಅನಗತ್ಯವಾಗಿ ವಿಳಂಬ ಮಾಡುತ್ತಿದ್ದಾರೆ ಎಂದು ಕೇಶ್ಯೂನಟ್ ಎಲೈಡ್ ವರ್ಕರ್ಸ್ ಯೂನಿಯನ್‌ಅಧ್ಯಕ್ಷ ಕೆ.ಆರ್.ಶ್ರೀಯಾನ್ ಆರೋಪಿಸಿದ್ದಾರೆ.
ಕಾರ್ಮಿಕ ಪ್ರತಿನಿಧಿಗಳು, ಮಾಲಕ ಪ್ರತಿನಿಧಿಗಳು ಮತ್ತು ಸರಕಾರದ ಪ್ರತಿನಿಧಿಗಳಿದ್ದ ಉಪಸಮಿತಿಯಲ್ಲಿ ದೀರ್ಘ ಚರ್ಚಿಸಿ ಸರಕಾರಕ್ಕೆ ಸಹಮತದ ಸಲಹೆ ನೀಡಿದ ಬಳಿಕ ಈ ಕನಿಷ್ಟ ಕೂಲಿ ಪರಿಷ್ಕರಣೆ ಆಗಿ ಸರಕಾರ ಅಧಿಸೂಚನೆ ಪ್ರಕಟಿಸಿದೆ. ಆದುದರಿಂದ ಎಲ್ಲಾ ಗೋಡಂಬಿ ಕಾರ್ಖಾನೆಗಳ ಮಾಲಕರು ಕೂಡಲೇ ಪರಿಷ್ಕೃತ ಕನಿಷ್ಟ ಕೂಲಿಯನ್ನು ಜಾರಿಗೊಳಿಸಬೇಕು. ಇಲ್ಲದಿದ್ದರೆ ಅನಿವಾರ್ಯವಾಗಿ ಕಾರ್ಮಿಕರು ಹೋರಾಟಕ್ಕೆ ಇಳಿಯಬೇಕು ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.