ಹೊಸ ಸಾಂಸ್ಕೃತಿಕ ನೀತಿ ಜಾರಿಯ ಬಗ್ಗೆ ಮರು ಸಮಾಲೋಚನೆ: ಜಯಮಾಲ
ಮಂಗಳೂರು, ಜು. 23: ಹೊಸ ಸಾಂಸ್ಕೃತಿಕ ನೀತಿ ಜಾರಿಯ ಬಗ್ಗೆ ಎಲ್ಲರೊಂದಿಗೆ ಸೇರಿ ಮರು ಸಮಾಲೋಚನೆ ನಡೆಸಿ ತೀರ್ಮಾನಿಸಲಾಗುವುದು ಎಂದು ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವೆ ಜಯಮಾಲ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.
ಸರಕಾರ ಜಾರಿ ಮಾಡಲು ಉದ್ದೇಶಿಸಿರುವ ಹೊಸ ಸಾಂಸ್ಕೃತಿಕ ನೀತಿಯ ಬಗ್ಗೆ ಪರ-ವಿರೋಧ ಅಭಿಪ್ರಾಯಗಳಿವೆ ಈ ಹಿನ್ನೆಲೆಯಲ್ಲಿ ಈ ಬಗ್ಗೆ ಮತ್ತೊಮ್ಮೆ ಸಮಾಲೋಚನೆ ನಡೆಸುವ ಯೋಚನೆ ಇದೆ. ಈ ನೀತಿಯ ಮೂಲಕ ಯಾರನ್ನೂ ನೋಯಿಸುವ ಉದ್ದೇಶ ಹೊಂದಿಲ್ಲ ಎಂದು ಜಯಮಾಲ ತಿಳಿಸಿದರು.
ಮಹಿಳಾ ಶೋಷಣೆ ಮುಕ್ತ ಸಮಾಜ ನಿರ್ಮಾಣ ನಮ್ಮ ಗುರಿಯಾಗಿದೆ. ಯಾವ ಸರಕಾರವೇ ಆಗಲಿ ನೀತಿಯನ್ನು ರೂಪಿಸಿದರೆ, ಯೋಜನೆಯನ್ನು ಜಾರಿ ಮಾಡಿದರೆ ನಾವು ಸ್ವಾಗತಿಸುತ್ತೇವೆ. ನಾನು ರಾಜ್ಯದಲ್ಲಿ ಶೋಷಿತ ಧಮನಿತ ಮಹಿಳೆಯರ ಛಲದ ಬದುಕಿನ ಬಗ್ಗೆ ಕೇಳಿದ್ದೇನೆ. ಅವರ ಕಷ್ಟಗಳನ್ನು ನೋಡಿದ್ದೇನೆ. ಅವರ ಬಗ್ಗೆ ಗೌರವವಿದೆ. ಅವೆಲ್ಲವನ್ನು ಒಂದು ರಾತ್ರಿ ಹಗಲಿನಲ್ಲಿ ಬದಲಾಯಿಸಬೇಕು ಎಂದು ನಾನು ಭಾವಿಸುವುದಿಲ್ಲ. ರಾಜ್ಯ, ಕೇಂದ್ರ ಸರಕಾರದ ನೀತಿ ಎಂದು ಪ್ರತ್ಯೇಕಿಸಿ ನೋಡುವುದಿಲ್ಲ. ಜನರಿಗೆ ಒಳಿತಾಗಬೇಕು ಎನ್ನುವುದು ನಮ್ಮ ಅಂತಿಮ ಗುರಿಯಾಗಿದೆ ಎಂದು ಜಯಮಾಲ ತಿಳಿಸಿದ್ದಾರೆ.
ಶಬರಿ ಮಲೆಯ ಬಗ್ಗೆ ಸುಪ್ರೀಂ ಕೋರ್ಟ್‌ನ ನಿಲುವಿನ ಬಗ್ಗೆ ಸ್ವಾಗತವಿದೆ. ದೇವರಲ್ಲಿ ಯಾರೂ ಭೇದ ಬಾವ ಮಾಡಬಾರದು. ಹೆಣ್ಣಿಗೊಂದು ಗಂಡಿಗೊಂದು ದೇವರು ಎಂದು ಪ್ರತ್ಯೇಕಿಸಿಲ್ಲ, ಹಾಗೆ ಒಂದು ವೇಳೆ ತಾರತಮ್ಯ ಮಾಡಿದರೆ ಬದುಕು ನರಕವಾಗುತ್ತದೆ. ನಾನು ದೇವರ ಬಗ್ಗೆ ನಂಬಿಕೆ ಇರುವವಳು ಎಲ್ಲಾ ಧರ್ಮದ ದೇವರು ಒಂದೆ ಎಂದು ಭಾವಿಸುತ್ತೇನೆ. ದೇಶದ ಜಾತ್ಯತೀತ ನಂಬಿಕೆಯ ಬಗ್ಗೆ ನನಗೆ ಗೌರವವಿದೆ ಎಂದು ಜಯಮಾಲ ತಿಳಿಸಿದ್ದಾರೆ.
ರಾಜ್ಯದ ಭಾಷಾ ಅಕಾಡೆಮಿಗಳಿಗೆ ಹತ್ತು ಲಕ್ಷ ಅನುದಾನ ಹೆಚ್ಚಿಸಲಾಗಿದೆ. ಅಕಾಡೆಮಿಗಳ ಮೂಲಕ ಹಿಂದಿನ ಕೆಲಸಗಳ ದಾಖಲಾತಿ ಕೆಲಸ ಪೂರ್ಣಗೊಳಿ ಸಲಾಗುವುದು. ಅಕಾಡೆಮಿಗಳಿಗೆ ರಿಜಿಸ್ಟ್ರಾರ್‌ಗಳನ್ನು ನೇಮಕ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವೆ ಜಯಮಾಲ ತಿಳಿಸಿದ್ದಾರೆ. ಜಿಲ್ಲೆಯ ರಂಗ ಮಂದಿರ ನಿರ್ಮಾಣ ಪುರ್ಣಗೊಳಿಸಲು, ಕದ್ರಿಯಲ್ಲಿ ಪುಟಾಣಿ ರೈಲು ಓಡಿಸಲು ಕ್ರಮ ಕೈಗೊಳ್ಳಲಾಗುವುದು. ಸಮ್ಮಿಶ್ರ ಸರಕಾರದಲ್ಲಿ ಕೆಲಸ ಮಾಡಲು ಪಕ್ಷದ ಮುಖಂಡರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಸಮನ್ವಯ ಸಮಿತಿಯ ಅಧ್ಯಕ್ಷ ಸಿದ್ದರಾಮಯ್ಯ, ಮುಖ್ಯ ಮಂತ್ರಿ ಎಚ್.ಡಿ ಕುಮಾರ ಸ್ವಾಮಿ ಅವಕಾಶ ನೀಡಿದ್ದಾರೆ. ಎಲ್ಲರ ಸಹಕಾರದೊಂದಿಗೆ ಉತ್ತಮವಾಗಿ ಕಾರ್ಯನಿರ್ವಹಿಸಬೇಕು ಎನ್ನುವ ಗುರಿ ಇದೆ ಎಂದು ಜಯಮಾಲ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾಜಿ ಸಚಿವ ಬಿ.ರಮಾನಾಥ ರೈ, ಅಭಯ ಚಂದ್ರ ಜೈನ್, ಮಾಜಿ ಶಾಸಕಿ ಶಕುಂತಳಾ ಶೆಟ್ಟಿ, ದ.ಕ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್, ಶಾಸಕ ಐವನ್ ಡಿ ಸೋಜ, ಪಕ್ಷದ ಇತರ ಮುಖಂಡರಾದ ಸುರೇಶ್ ಬಲ್ಲಾಳ್, ರಾಜಶೇಖರ ಕೋಟ್ಯಾನ್, ಸದಾಶಿವ ಉಳ್ಳಾಲ್, ರಕ್ಷಿತ್, ತುಳು ಅಕಾಡೆಮಿಯ ಅಧ್ಯಕ್ಷ ಎ.ಸಿ .ಭಂಡಾರಿ ಮೊದಲಾದವರು ಉಪಸ್ಥಿತರಿದ್ದರು.